Bhajarangi 2: ಪುನೀತ್​ ನಿಧನದಿಂದ ಅರ್ಧಕ್ಕೆ ನಿಂತಿದ್ದ ‘ಭಜರಂಗಿ 2’ ಪ್ರದರ್ಶನ ಈಗ ಹೇಗೆ ಸಾಗುತ್ತಿದೆ? ಇಲ್ಲಿದೆ ರಿಪೋರ್ಟ್​

| Updated By: ಮದನ್​ ಕುಮಾರ್​

Updated on: Nov 01, 2021 | 1:42 PM

Puneeth Rajkumar: ಪುನೀತ್​ ನಿಧನರಾದ ದಿನ ಎಲ್ಲ ಚಿತ್ರಮಂದಿರಗಳೂ ಬಾಗಿಲು ಮುಚ್ಚಿದವು. ಇಡೀ ಚಿತ್ರರಂಗ ಶೋಕಸಾಗರದಲ್ಲಿತ್ತು. ಆದರೆ ಎದೆಯಲ್ಲಿ ಎಷ್ಟೇ ನೋವಿದ್ದರೂ ಜೀವನ ಮುಂದೆ ಸಾಗಲೇ ಬೇಕು. ಹಾಗಾಗಿ ಮತ್ತೆ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ.

Bhajarangi 2: ಪುನೀತ್​ ನಿಧನದಿಂದ ಅರ್ಧಕ್ಕೆ ನಿಂತಿದ್ದ ‘ಭಜರಂಗಿ 2’ ಪ್ರದರ್ಶನ ಈಗ ಹೇಗೆ ಸಾಗುತ್ತಿದೆ? ಇಲ್ಲಿದೆ ರಿಪೋರ್ಟ್​
ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​
Follow us on

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ ಅವರ ನಿಧನ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರು ಹೃದಯಾಘಾತದಿಂದ ಶುಕ್ರವಾರ (ಅ.29) ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಅಂದು ಶಿವರಾಜ್​ಕುಮಾರ್​ ಮತ್ತು ಅವರ ಅಭಿಮಾನಿಗಳಿಗೆ ಸಂದಿಗ್ಧ ದಿನ. ಯಾಕೆಂದರೆ ಅಂದು ಬೆಳಗ್ಗೆ ಅದ್ದೂರಿಯಾಗಿ ‘ಭಜರಂಗಿ 2’ ಸಿನಿಮಾ ಬಿಡುಗಡೆ ಆಗಿತ್ತು. ಎಲ್ಲ ಚಿತ್ರಮಂದಿರಗಳಲ್ಲೂ ಗ್ರ್ಯಾಂಡ್​ ಓಪನಿಂಗ್​ ಪಡೆದುಕೊಂಡಿತ್ತು. ಥಿಯೇಟರ್​ನತ್ತ ಜನಸಾಗರ ಹರಿದುಬರುತ್ತಿರುವುದು ನೋಡಿ ಶಿವಣ್ಣ ಖುಷಿಪಟ್ಟಿದ್ದರು. ಆದರೆ ಆ ಖುಷಿ ಹೆಚ್ಚುಕಾಲ ಉಳಿಯಲಿಲ್ಲ. ಮಾರ್ನಿಂಗ್​ ಶೋ ಮುಗಿಯುವುದರೊಳಗೆ ಪುನೀತ್​ ನಿಧನದ ಸುದ್ದಿ ಸಿಡಿಲಿನಂತೆ ಅಪ್ಪಳಿಸಿತ್ತು. ಪರಿಣಾಮ, ‘ಭಜರಂಗಿ 2’ ಚಿತ್ರ ಪ್ರದರ್ಶನ ನಿಲ್ಲಿಸಲಾಗಿತ್ತು.

ಪುನೀತ್​ ನಿಧನರಾದ ದಿನ ಎಲ್ಲ ಚಿತ್ರಮಂದಿರಗಳೂ ಬಾಗಿಲು ಮುಚ್ಚಿದವು. ಇಡೀ ಚಿತ್ರರಂಗ ಶೋಕಸಾಗರದಲ್ಲಿತ್ತು. ಆದರೆ ಶೋ ಮಸ್ಟ್​ ಗೋ ಆನ್​ ಎಂಬ ಮಾತಿದೆ. ಎದೆಯಲ್ಲಿ ಎಷ್ಟೇ ನೋವಿದ್ದರೂ ಕೂಡ ಜೀವನ ಮುಂದೆ ಸಾಗಲೇ ಬೇಕು. ಹಾಗಾಗಿ ಈಗ ಮತ್ತೆ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ. ಅರ್ಧಕ್ಕೆ ನಿಂತಿದ್ದ ‘ಭಜರಂಗಿ 2’ ಸಿನಿಮಾ ಪ್ರದರ್ಶನ ಪುನಃ ಶುರುವಾಗಿದೆ.

ಎ. ಹರ್ಷ ನಿರ್ದೇಶನದ ಈ ಸಿನಿಮಾದಲ್ಲಿ ಆಯುರ್ವೇದದ ಬಗ್ಗೆ ಸಂದೇಶ ನೀಡಲಾಗಿದೆ. ಶಿವರಾಜ್​ಕುಮಾರ್​ ಅವರ ವೃತ್ತಿಜೀವನದಲ್ಲಿ ಮತ್ತೊಂದು ಸೂಪರ್​ ಹಿಟ್​ ಚಿತ್ರ ಎಂಬ ಖ್ಯಾತಿಯನ್ನು ‘ಭಜರಂಗಿ 2’ ಪಡೆದುಕೊಂಡಿದೆ. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಬುಕ್​ ಮೈ ಶೋ ಮೂಲಕ ಮುಂಗಡ ಟಿಕೆಟ್​ ಬುಕಿಂಗ್​ ಕೂಡ ಚೆನ್ನಾಗಿ ಆಗುತ್ತಿದೆ. ಆದರೆ ಆ ಖುಷಿಯನ್ನು ಅನುಭವಿಸುವ ಸ್ಥಿತಿಯಲ್ಲಿ ರಾಜ್​ ಕುಟುಂಬ ಇಲ್ಲ.

ಮಂಗಳವಾರ (ನ.2) ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ನಡೆಯಲಿದೆ. ಅಲ್ಲಿಯವರೆಗೂ ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಅಪ್ಪು ಸಮಾಧಿಗೆ ಕೈ ಮುಗಿಯಬೇಕು ಎಂದು ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಆದರೆ ಕಂಠೀರವ ಸ್ಟುಡಿಯೋ ಆವರಣದ ಒಳಗೆ ಪ್ರವೇಶ ಸಿಗದ ಕಾರಣ ಎಲ್ಲರೂ ಬೇಸರದಿಂದಲೇ ಹಿಂದಿರುಗುತ್ತಿದ್ದಾರೆ. ರಾಜ್​ ಕುಟುಂಬದವರು ಹಾಲು-ತುಪ್ಪ ಕಾರ್ಯ ಮುಗಿಸಿದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು.

ಇದನ್ನೂ ಓದಿ:

Puneeth Rajkumar: ಅಶ್ಲೀಲ ಪದಗಳಿಂದ ಪುನೀತ್​ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್​ ಪುತ್ರಿ ಸಾನ್ವಿ ಗರಂ

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ