ಮಾಲಾಶ್ರೀ ರಾಮು ಚಿತ್ರಕ್ಕೆ ಸ್ಯಾಂಡಲ್​ವುಡ್​ ನಟರ ಬೆಂಬಲ; ಶಿವಣ್ಣ, ರವಿಚಂದ್ರನ್​, ಉಪ್ಪಿ ಹೇಳಿದ್ದೇನು?

ಮಾಲಾಶ್ರೀ ರಾಮು ಚಿತ್ರಕ್ಕೆ ಸ್ಯಾಂಡಲ್​ವುಡ್​ ನಟರ ಬೆಂಬಲ; ಶಿವಣ್ಣ, ರವಿಚಂದ್ರನ್​, ಉಪ್ಪಿ ಹೇಳಿದ್ದೇನು?
ಮಾಲಾಶ್ರೀ, ರವಿಚಂದ್ರನ್​, ಶಿವರಾಜ್​ಕುಮಾರ್​, ಉಪೇಂದ್ರ

Arjun Gowda Kannada Movie: ಕೋಟಿ ರಾಮು ಜತೆ ಅನೇಕ ಸ್ಟಾರ್​ ಕಲಾವಿದರು ಕೆಲಸ ಮಾಡಿದ್ದಾರೆ. ಸಿನಿಮಾ ಮೇಲೆ ರಾಮು ಅವರಿಗೆ ಇದ್ದ ಪ್ರೀತಿಯನ್ನು ಎಲ್ಲರೂ ಕೊಂಡಾಡುತ್ತಾರೆ.

TV9kannada Web Team

| Edited By: Madan Kumar

Dec 29, 2021 | 8:53 AM


ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ಕೋಟಿ ರಾಮು (Koti Ramu) ಅವರು ನೀಡಿದ ಕೊಡುಗೆ ದೊಡ್ಡದು. ಆದರೆ ಈ ವರ್ಷ ಅವರು ಕೊರೊನಾ ವೈರಸ್​ ತಗುಲಿ ವಿಧಿವಶರಾಗಿದ್ದು ನೋವಿನ ಸಂಗತಿ. ಅವರು ನಿರ್ಮಿಸಿದ ಕೊನೇ ಸಿನಿಮಾ ‘ಅರ್ಜುನ್​ ಗೌಡ’ (Arjun Gowda Movie) ಡಿ.31ರಂದು ಬಿಡುಗಡೆ ಆಗಲಿದೆ. ಪ್ರಜ್ವಲ್​ ದೇವರಾಜ್​ (Prajwal Devaraj) ಮತ್ತು ಪ್ರಿಯಾಂಕಾ ತಿಮ್ಮೇಶ್​ (Priyanka Thimmesh) ನಟಿಸಿರುವ ಆ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿದೆ. ರಾಮು ಪತ್ನಿ, ನಟಿ ಮಾಲಾಶ್ರೀ (Malashree) ಅವರು ‘ಅರ್ಜುನ್​ ಗೌಡ’ ಚಿತ್ರವನ್ನು ರಿಲೀಸ್​ ಮಾಡುತ್ತಿದ್ದಾರೆ. ಆ ಮೂಲಕ ಪತಿಯ ಕೆಲಸವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮಾಲಾಶ್ರೀಗೆ ಬೆಂಬಲ ನೀಡಲು ಕನ್ನಡ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕೋಟಿ ರಾಮು ಅವರ ಜತೆ ಅನೇಕ ಸ್ಟಾರ್​ ಕಲಾವಿದರು ಕೆಲಸ ಮಾಡಿದ್ದಾರೆ. ಸಿನಿಮಾ ಮೇಲೆ ರಾಮು ಅವರಿಗೆ ಇದ್ದ ಪ್ರೀತಿಯನ್ನು ಎಲ್ಲರೂ ಕೊಂಡಾಡುತ್ತಾರೆ. ಈ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​, ‘ಕನ್ನಡ ಚಿತ್ರರಂಗ ಉದ್ದಾರ ಆಗಬೇಕು ಎಂದರೆ ರಾಮು ಅವರಂಥ ನಿರ್ಮಾಪಕರು ನೂರು ವರ್ಷ ಬದುಕಬೇಕಿತ್ತು. ಅವರ ನಿರ್ಮಾಣದಲ್ಲಿ ನಾನು 6 ಸಿನಿಮಾ ಮಾಡಿದ್ದೇನೆ. ಮಾಲಾಶ್ರೀ ಅವರು ಸಿನಿಮಾ ನಿರ್ಮಾಣವನ್ನು ಮುಂದುವರಿಸಬೇಕು. ನಾವು ಜೊತೆಯಲ್ಲಿ ಇರುತ್ತೇವೆ’ ಎಂದು ಹೇಳಿದರು.

ಗಣೇಶ್​ ನಟನೆಯ ‘99’ ಚಿತ್ರವನ್ನು ರಾಮು ನಿರ್ಮಾಣ ಮಾಡಿದ್ದರು. ಆ ದಿನಗಳನ್ನು ಗಣೇಶ್​ ಮೆಲುಕು ಹಾಕಿದರು. ‘ನಾನು ರಾಮು ಸರ್​ ಜತೆ ಹೆಚ್ಚು ಸಿನಿಮಾ ಮಾಡಿಲ್ಲ. ‘99’ ಚಿತ್ರದ ಬಗ್ಗೆ ಅವರು ನನ್ನ ಬಳಿ ಮಾತನಾಡಿದಾಗ ಈ ಚಿತ್ರ ವರ್ಕೌಟ್​ ಆಗುತ್ತಾ ಅಂತ ನಾನು ಪ್ರಶ್ನೆ ಕೇಳಿದ್ದೆ. ಒಂದು ಪ್ರಯೋಗದ ರೀತಿ ಮಾಡೋಣ ಅಂತ ಅವರು ಹೇಳಿದ್ದರು. ನಾನು ಮಾಲಾಶ್ರೀ ಮೇಡಂ ಅವರ ದೊಡ್ಡ ಫ್ಯಾನ್​​’ ಎಂದರು ಗಣೇಶ್​.

‘ಮಾಲಾಶ್ರೀ ಮತ್ತು ರಾಮು ಬಗ್ಗೆ ಎಷ್ಟೇ ಮಾತಾಡಿದರೂ ಮುಗಿಯಲ್ಲ’ ಎನ್ನುತ್ತ ಮಾತು ಆರಂಭಿಸಿದರು ಉಪೇಂದ್ರ. ‘ರಾಮು ಅವರ ಬ್ಯಾನರ್​ ಎಂದರೆ ಒಂದು ಆಕರ್ಷಣೆ ಇರುತ್ತಿತ್ತು. ರಾಮು ಕೋಟಿ ನಿರ್ಮಾಪಕ ಆಗಿದ್ದರು. ಮಾಲಾಶ್ರೀ ಶತಕೋಟಿ ನಿರ್ಮಾಪಕಿ ಆಗಬೇಕು. 100 ಕೋಟಿ ರೂ. ಬಜೆಟ್​ ಸಿನಿಮಾ ನೀವು ಮಾಡಬೇಕು. ಯಾಕೆಂದರೆ, ನಾವೆಲ್ಲ ನಿಮ್ಮ ಜೊತೆ ಇದ್ದೇವೆ’ ಎಂದು ಮಾಲಾಶ್ರೀಗೆ ಉಪೇಂದ್ರ ಭರವಸೆ ನೀಡಿದರು.

ಮಾಲಾಶ್ರೀ ಮತ್ತು ರವಿಚಂದ್ರನ್​ ಅವರದ್ದು ಹಲವು ವರ್ಷಗಳ ಸ್ನೇಹ. ‘ರಾಮು ಹೆಚ್ಚು ಮಾತನಾಡುತ್ತ ಇರಲಿಲ್ಲ. ಅವರ ಕೆಲಸವೇ ಮಾತಾಡುತ್ತಿತ್ತು. ಮಾಲಾಶ್ರೀ ಅವರು ನನಗಾಗಿ ‘ರಾಮಾಚಾರಿ’ ಸಿನಿಮಾದಲ್ಲಿ ನಟಿಸುವ ಮೂಲಕ ಸಹಾಯ ಮಾಡಿದ್ದರು. ನಾನು ಆ ಋಣ ತೀರಿಸಲು ‘ಮಲ್ಲ’ ಸಿನಿಮಾ ಕಾರಣ ಆಯ್ತು’ ಎಂದರು ರವಿಚಂದ್ರನ್​.

ಇದನ್ನೂ ಓದಿ:

‘ಅರ್ಜುನ್​ ಗೌಡ’ ಸುದ್ದಿಗೋಷ್ಠಿಯಲ್ಲಿ ಪತಿ ಕೋಟಿ ರಾಮು ನೆನೆದು ಕಣ್ಣೀರು ಹಾಕಿದ ಮಾಲಾಶ್ರೀ

ಕೋಟಿ ರಾಮು ಹುಟ್ಟುಹಬ್ಬ; ಕಣ್ಣೀರು ತುಂಬಿಕೊಂಡು ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

Follow us on

Related Stories

Most Read Stories

Click on your DTH Provider to Add TV9 Kannada