ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಂಡರೆ ಶಿವರಾಜ್ಕುಮಾರ್ಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ನಿಧನದ ನಂತರದಲ್ಲಿ ಶಿವರಾಜ್ಕುಮಾರ್ ತುಂಬಾನೇ ಕಣ್ಣೀರು ಹಾಕಿದ್ದಾರೆ. ಅಪ್ಪುನ ನೆನಪಿಸಿಕೊಂಡು ಗಳಗಳನೆ ಅತ್ತಿದ್ದಾರೆ. ಶಿವಣ್ಣ ಅವರ ನೋವು ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಪ್ರತಿ ವೇದಿಕೆ ಮೇಲೆ ‘ನನ್ನ ತಮ್ಮ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ಬರುತ್ತಿದ್ದಾರೆ ಶಿವರಾಜ್ಕುಮಾರ್. ಅಪ್ಪು ಇಲ್ಲದೆ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಶಿವರಾಜ್ಕುಮಾರ್ ಅವರು ಈ ಸಂದರ್ಭದಲ್ಲಿ ಭಾವುಕ ಪತ್ರ ಬರೆದಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಶಿವರಾಜ್ಕುಮಾರ್ ಹಾಗೂ ಪುನೀತ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಪುನೀತ್ ಸಾಯುವುದಕ್ಕೂ ಮೊದಲು ನಡೆದ ಭಜರಂಗಿ 2’ ವೇದಿಕೆ ಮೇಲೆ ಶಿವಣ್ಣ-ಅಪ್ಪು ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಅವರನ್ನು ಕಳೆದುಕೊಂಡ ನಂತರದಲ್ಲಿ ಶಿವಣ್ಣ ಸಾಕಷ್ಟು ದುಃಖಕ್ಕೆ ಒಳಗಾದರು. ಅಪ್ಪು ನೆನಪನ್ನು ಪತ್ರದ ಮೂಲಕ ಅವರು ತೆರೆದಿಟ್ಟಿದ್ದಾರೆ.
ನಿನ್ನ ನೆನಪುಗಳು ಎಂದಿಗೂ ಅಮರ
ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು pic.twitter.com/u6PukGoFCG— DrShivaRajkumar (@NimmaShivanna) March 17, 2023
‘ಅಪ್ಪು, ನೀನು ಹುಟ್ಟಿದಾಗ ನಮ್ಮಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನು ಆಗಕೇ ಹೇಳುತ್ತಾ ಇತ್ತು. ನೀನು ನಕ್ಕರೆ ಎಲ್ಲರೂ ನಗ್ತಾ ಇದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು. ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ’ ಎಂದು ಪತ್ರ ಆರಂಭಿಸಿದ್ದಾರೆ ಶಿವಣ್ಣ.
ಇದನ್ನೂ ಓದಿ: ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷ; ವಿಶೇಷವಾಗಿ ಧನ್ಯವಾದ ಹೇಳಿದ ಶಿವಣ್ಣ
‘ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗರಾಗಿ, ಹಬ್ಬಯಾವುದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚುವ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ – ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು’ ಎಂದು ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Fri, 17 March 23