
ಶಿವರಾಜ್ಕುಮಾರ್ (Shivarajkumar) ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನಟನೆಯಿಂದ ಬ್ರೇಕ್ ಪಡೆದಿದ್ದರು. ಕೇವಲ ಮೂರು ತಿಂಗಳ ಕಾಲ ನಟನೆಯಿಂದ ದೂರ ಉಳಿದು ಈಗ ಅವರು ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈಗ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ರಾಜ್ಕುಮಾರ್ ಜನ್ಮದಿನಕ್ಕೂ (ಏಪ್ರಿಲ್ 24) ಒಂದು ದಿನ ಮೊದಲು ಈ ಸಿನಿಮಾ ಅನೌನ್ಸ್ ಆಗಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.
ಏಪ್ರಿಲ್ 24 ರಾಜಕುಮಾರ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಅಭಿಮಾನಿಗಳು ಅನೇಕ ಸಾಮಾಜಿಕ ಕೆಲಸ ಮಾಡುತ್ತಾರೆ. ಈ ವಿಶೇಷ ದಿನದ ಸಂದರ್ಭದಲ್ಲಿ ಶಿವಣ್ಣನ ಸಿನಿಮಾ ಘೋಷಣೆ ಆಗಿರೋದು ವಿಶೇಷ. ‘ಶ್ರಿತಿಕ್ ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ.
ತಮಿಳಿನ ‘ಇದಿ ಮಿನ್ನಲ್ ಕಾದಲ್’ ಹೆಸರಿನ ಚಿತ್ರವನ್ನು ಬಾಲಾಜಿ ಮಾಧವನ್ ನಿರ್ದೇಶನ ಮಾಡಿದ್ದರು. ಈಗ ಅವರಿಗೆ ಕನ್ನಡದಲ್ಲಿ ಇದು ಮೊದಲ ಅನುಭವ. ಬಾಲಾಜಿ ಮಾಧವನ್ ಅವರು ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ ಅನ್ನೋದು ವಿಶೇಷ.
ಇತ್ತೀಚೆಗೆ ನಿರ್ದೇಶಕ ಬಾಲಾಜಿ ಮಾಧವನ್ ಹಾಗೂ ನಿರ್ಮಾಪಕರಾದ ಸಾಗರ್, ಕೃಷ್ಣಕುಮಾರ್ ಮತ್ತು ಸೂರಜ್ ಶರ್ಮ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಶಿವಣ್ಣ ಅವರ ಸ್ವಗೃಹದಲ್ಲೇ ಈ ಭೇಟಿ ನಡಿದೆ. ಈ ವೇಳೆ ಚಿತ್ರದ ಕುರಿತು ಮಾತುಕತೆ ನಡೆದಿದೆ. ಸಿನಿಮಾದ ಕಥೆ ಕೇಳಿದ ಶಿವಣ್ಣ ಸಂತೋಷಗೊಂಡಿದ್ದಾರೆ.
ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಶೀಘ್ರವೇ ಇದನ್ನು ಅನಾವರಣಮಾಡುವ ಆಲೋಚನೆ ತಂಡಕ್ಕೆ ಇದೆ. ಈ ವೇಳೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಅಣ್ಣಾವ್ರ ಬರ್ತ್ಡೇ ಎನ್ನುವ ಕಾರಣಕ್ಕೆ ಔಪಚಾರಿಕವಾಗಿ ಸಿನಿಮಾ ಘೋಷಣೆ ಆಗಿದೆ.
ಇದನ್ನೂ ಓದಿ: ಶಿವರಾಜ್ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ಈ ಚಿತ್ರಕ್ಕೆ ಭಿನ್ನ ಕಥಾಹಂದರ ಇದೆ. ಹೀಗಾಗಿ, ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜಕುಮಾರ್ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:01 am, Wed, 23 April 25