ಕನ್ನಡದ ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ಖ್ಯಾತಿ ಗಳಿಸಿದ್ದ ನಟಿ ಶೋಭಿತಾ ಶಿವಣ್ಣ ಅವರು ಡಿಸೆಂಬರ್ 1ರಂದು ನಿಧನರಾದ ಸುದ್ದಿ ತಿಳಿದು ಎಲ್ಲರಿಗೂ ನೋವಾಗಿದೆ. ಹೈದರಾಬಾದ್ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಇಂದು (ಡಿಸೆಂಬರ್ 2) ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪೋಸ್ಟ್ ಮಾರ್ಟಮ್ ಅಂತ್ಯಗೊಂಡ ಬಳಿಕ ವೈದ್ಯರು ನಟಿಯ ಸಾವಿಗೆ ಕಾರಣ ಏನು ಎಂಬದನ್ನು ತಿಳಿಸಿದ್ದಾರೆ. ಶೋಭಿತಾ ಶಿವಣ್ಣ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಆತ್ಮಹತ್ಯೆಯಿಂದಲೇ ಶೋಭಿತಾ ನಿಧರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಶೋಭಿತಾ ಅವರು ಮದುವೆ ಆದ ಬಳಿಕ ಹೈದರಾಬಾದ್ನಲ್ಲಿ ಪತಿಯ ಜೊತೆ ನೆಲೆಸಿದ್ದರು. ಅಪಾರ್ಟ್ಮೆಂಟ್ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಯಾರಾದರೂ ನಟಿಯನ್ನು ಹತ್ಯೆ ಮಾಡಿರಬಹುದೇ ಎಂಬ ಪ್ರಶ್ನೆ ಕೂಡ ಉದ್ಭವ ಆಗಿತ್ತು. ಆದರೆ ಶೋಭಿತಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸಿಲ್ಲ. ಹಾಗಾಗಿ ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂಬುದು ಖಚಿತವಾಗಿದೆ.
ಶೋಭಿತಾ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿದ್ದಾರೆ. ಶೋಭಿತಾ ಬರೆದಿದ್ದರು ಎನ್ನಲಾದ ಸೂಸೈಡ್ ನೋಟ್ ಕೂಡ ಲಭ್ಯವಾಗಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಇದರಲ್ಲಿ ಬರೆಯಲಾಗಿದೆ. ಅಲ್ಲದೇ, ‘ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ’ ಎಂದು ಸಹ ಬರೆಯಲಾಗಿದ್ದು, ಈ ಸಾಲುಗಳ ಅರ್ಥ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಇದನ್ನೂ ಓದಿ: ಕನ್ನಡ ಕಿರುತೆರೆ ನಟಿ ಶೋಭಿತಾ ಶಿವಣ್ಣ ದುರಂತ ಅಂತ್ಯ
ನಟಿಯ ಆತ್ಮಹತ್ಯೆ ಸಂಬಂಧಿಸಿದಂತೆ ನೆರೆಹೊರೆಯವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಶೋಭಿತಾ ಅವರ ಸಂಸಾರದಲ್ಲಿ ಏನಾದರೂ ಬಿರುಕು ಮೂಡಿತ್ತಾ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ. ಶೋಭಿತಾ ಅವರು ಮೂಲತಃ ಹಾಸನ ಮೂಲದ ಸಕಲೇಶಪುರದವರು. ಹೈದರಾಬಾದ್ನಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬದವರು ಬೆಂಗಳೂರಿಗೆ ಮೃತದೇಹ ತರುತ್ತಿದ್ದಾರೆ ಎಂಬ ಮಾಹಿತಿ ಇದೆ.
‘ಎರಡೊಂದ್ಲಾ ಮೂರು’, ‘ಒಂದ್ ಕಥೆ ಹೇಳ್ಲಾ’, ‘ಎಟಿಎಮ್’, ‘ಫಸ್ಟ್ ಡೇ ಫಸ್ಟ್ ಶೋ’ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಅವರು ನಟಿಸಿದ್ದರು. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರಿಗೆ ಜನಪ್ರಿಯತೆ ಹೆಚ್ಚಿತ್ತು. ‘ದೀಪವು ನಿನ್ನದೇ ಗಾಳಿಯೂ ನಿನ್ನದೇ’, ‘ಮಂಗಳಗೌರಿ ಮದುವೆ’, ‘ಕೃಷ್ಣ ರುಕ್ಮಿಣಿ’, ‘ಮನೆ ದೇವ್ರು’, ‘ಗಾಳಿಪಟ’, ‘ಅಮ್ಮಾವ್ರು’ ಮುಂತಾದ ಸೀರಿಯಲ್ಗಳಲ್ಲಿ ಕೂಡ ಅವರು ಅಭಿನಯಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.