ಸಿದ್ದರಾಮಯ್ಯ (Siddaramaiah) ಅವರು ಎರಡನೇ ಬಾರಿ ಮುಖ್ಯ ಮಂತ್ರಿ (Chief Minister) ಆಗಲಿರುವ ಬೆನ್ನಲ್ಲೆ ಅವರ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಈ ಮೊದಲೇ ಒಂದು ಸಿನಿಮಾವನ್ನು ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಘೋಷಿಸಿ ಟೈಟಲ್ ರಿಜಿಸ್ಟರ್ ಮಾಡಿಸಲಾಗಿತ್ತು ಆದರೆ ಆ ಸಿನಿಮಾ (Movie) ಇನ್ನೂ ಸೆಟ್ಟೇರಿಲ್ಲ ಈ ನಡುವೆ ಇದೀಗ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಸಿನಿಮಾಕ್ಕೆ ‘ಸಿದ್ದರಾಮಯ್ಯ ಎಂಬ ನಾನು’ ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ ಒಂದನ್ನು ಸಹ ಬಿಡುಗಡೆ ಮಾಡಲಾಗಿದೆ.
ಪೋಸ್ಟರ್ನಲ್ಲಿ ಸಿದ್ದರಾಮಯ್ಯ ಅವರ ಚಿತ್ರವನ್ನು ಕಪ್ಪು-ಬಿಳುಪಿನಲ್ಲಿ ತೋರಿಸಲಾಗಿದ್ದು, 1947 ಆಗಸ್ಟ್ ಎಂದು ಸಹ ಬರೆಯಲಾಗಿದೆ. ಪಾರ್ವತಮ್ಮ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರ ಆಶೀರ್ವಾದದೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಪೋಸ್ಟರ್ನಲ್ಲಿ ಹೇಳಲಾಗಿದ್ದು ಬಿ ನಾಗರಾಜ ಎಂಬುವರು ಸಿನಿಮಾ ನಿರ್ದೇಶಕ ಮಾಡಲು ಮುಂದಾಗಿದ್ದಾರೆ.
ಈ ಹಿಂದೆ ಲೀಡರ್ ರಾಮಯ್ಯ ಹೆಸರಿನ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು. ಸ್ವತಃ ಸಿದ್ದರಾಮಯ್ಯ ಅವರೇ ಪೋಸ್ಟರ್ ಬಿಡುಗಡೆ ಮಾಡಿದ್ದರು. ವಿಜಯ್ ಸೇತುಪತಿ, ಸಿದ್ದರಾಮಯ್ಯ ಪಾತ್ರದಲ್ಲಿ ನಟಿಸುತ್ತಾರೆಂದು, ಸಿನಿಮಾವನ್ನು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿತ್ತು. ಸತ್ಯಂ ರತ್ನ ಎಂಬುವರು ಸಿನಿಮಾ ನಿರ್ದೇಶನ ಮಾಡಲಿಕ್ಕಿದ್ದರು, ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆಗೆ ತರುವ ಉದ್ದೇಶ ಅವರಿಗಿತ್ತು. ಆದರೆ ಸಿನಿಮಾ ಸೆಟ್ಟೇರಲೇ ಇಲ್ಲ.
ಇದೀಗ ‘ಸಿದ್ದರಾಮಯ್ಯ ಎಂಬ ನಾನು’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಲೀಡರ್ ರಾಮಯ್ಯ ಸಿನಿಮಾದ ರೀತಿ ಪೋಸ್ಟರ್ಗೆ ಮಾತ್ರವೇ ಈ ಸಿನಿಮಾ ಸೀಮಿತವಾಗುತ್ತದೆಯಾ? ಅಥವಾ ಚಿತ್ರೀಕರಣಗೊಂಡು ಬಿಡುಗಡೆ ಆಗುತ್ತದೆಯಾ? ಕಾದು ನೋಡಬೇಕಿದೆ.
ಇದನ್ನೂ ಓದಿ:ರಾಜಕೀಯ ಒತ್ತಡಗಳ ನಡುವೆ ಆರ್ಸಿಬಿ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ: ಫೋಟೋ ವೈರಲ್
ಸಿದ್ದರಾಮಯ್ಯ ಅವರದ್ದು ಹೋರಾಟಗಳಿಂದ ತುಂಬಿದ ಜೀವನ, ಒಂದು ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಸಂಘರ್ಷಗಳು ಅವರ ಜೀವನದಲ್ಲಿವೆ. ಹಾಗಾಗಿ ಅವರ ಜೀವನವನ್ನು ಸಿನಿಮಾ ಮಾಡಲು ಸಿನಿಕರ್ಮಿಗಳು ಆಸಕ್ತರಾಗಿದ್ದಾರೆ ಆದರೆ ಯಾರೂ ಈವರೆಗೆ ದಡ ಮುಟ್ಟಿಲ್ಲ. ಈಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಿರುವ ಹೊತ್ತಿನಲ್ಲಿ ಜೋಷ್ನಲ್ಲಿ ಸಿದ್ದರಾಮಯ್ಯ ಎಂಬ ನಾನು ಪೋಸ್ಟರ್ ಬಿಡುಗಡೆ ಆಗಿದೆಯಾದರೂ ಚಿತ್ರೀಕರಣ ಶುರುವಾಗಿ ಮುಗಿದು ಸೆನ್ಸಾರ್ ಟೇಬರ್ ಯಾವಾಗ ತಲುಪುತ್ತದೆ ಕಾದು ನೋಡಬೇಕಿದೆ.
ಸ್ವತಃ ಸಿದ್ದರಾಮಯ್ಯ ಅವರು ಸಿನಿಮಾ ಪ್ರೇಮಿ. ಸಿಎಂ ಆಗಿದ್ದಾಗಲೂ ಆಗೊಮ್ಮೆ ಈಗೊಮ್ಮೆ ಸಿನಿಮಾ ನೋಡುತ್ತಿದ್ದ ಸಿದ್ದರಾಮಯ್ಯ. ವಿಪಕ್ಷದ ನಾಯಕರಾಗಿದ್ದಾಗ ಸಿನಿಮಾ ರಂಗದವರೊಟ್ಟಿಗೆ ಹೆಚ್ಚು ಬೆರೆತಿದ್ದರು. ಕನ್ನಡದ ಕೆಲವು ಸಿನಿಮಾಗಳನ್ನು ನೋಡುವ ಜೊತೆಗೆ ಕೆಲವು ಸಿನಿಮಾಗಳ ಮುಹೂರ್ತದಲ್ಲಿಯೂ ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ