SPB Birth Anniversary: ಪ್ರೀತಿಯ ಎಸ್​ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು

SP Balasubrahmanyam Birth Anniversary: ಇನ್ನೊಂದು ಜನ್ಮವಿದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುವೆ ಎಂದು ಹೇಳಿದ್ದಿರಿ. ಕಳೆದ ವರ್ಷ ಕೊರೊನಾವೈರಸ್ ನಿಮ್ಮನ್ನು ಬಲಿತೆಗೆದುಕೊಂಡಾಗ ಮನಸ್ಸು ಬಯಸಿದ್ದು..ಮತ್ತೊಮ್ಮೆ ಹುಟ್ಟಿ ಬನ್ನಿ ಸರ್...ಎದೆ ತುಂಬಿ ಹಾಡಲು ನೀವು ಬೇಕು.

SPB Birth Anniversary: ಪ್ರೀತಿಯ ಎಸ್​ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು
ಎಸ್.ಪಿ.ಬಾಲಸುಬ್ರಮಣ್ಯಂ
Follow us
| Updated By: Skanda

Updated on: Jun 04, 2021 | 7:58 AM

ಪ್ರಿಯ ಬಾಲು ಸರ್, ನೀವಿಲ್ಲದೆ ಒಂದು ವರ್ಷವಾಯಿತು. ಸಂಗೀತಕ್ಕೆ ಏಳುಸ್ವರಗಳು, ಆದರೆ ನನ್ನ ಪಾಲಿಗೆ ಮೂರು ಅಕ್ಷರಗಳು ಎಸ್.ಪಿ.ಬಿ. ರೇಡಿಯೊದಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾರ ಹಾಡುಗಳನ್ನು ಕೇಳಿ ಬೆಳೆದ ಬಾಲ್ಯವದು. ‘ನಗುವಾ ನಯನಾ ಮಧುರಾ ಮೌನ’ ಹಾಡಿನ ಮೂಲಕ ಪ್ರೀತಿಯ ಕಚಗುಳಿ, ‘ಗುಡಿಗೇರಿಯಾದರೇನು, ಮಡಿಕೇರಿ ಆದರೇನು, ದುಡಿಬೇಕು ನಾವು ಮೊದಲು ಧಣಿಯಾಗಲು’ ಎಂಬ  ಬಾಂಧವ್ಯದ ಹಾಡು, ಹಾವಿನ  ದ್ವೇಷ ಹನ್ನೆರಡು ವರುಷ ಹಾಡಿನ ಕಿಚ್ಚು, ನಲಿವಾ ಗುಲಾಬೀ ಹೂವೇ ಹಾಡಿನ ಭಾವ ತೀವ್ರತೆ  ಮರೆಯಲು  ಸಾಧ್ಯವುಂಟೇ.

‘ಏಕ್ ದೂಜೇ ಕೇ ಲಿಯೇ’  ಸಿನಿಮಾದಲ್ಲಿ ಕಮಲ್ ಹಾಸನ್​ ಗೆ ದನಿಯಾದ  ‘ತೇರೆ ಮೇರೆ ಬೀಚ್ ಮೇ’  ಹಾಡು  ಪ್ರೇಮದ ಗಲಿಬಿಲಿಯಾದರೆ,  ‘ಹಮ್ ಆಪ್ ಕೇ  ಹೈ ಕೌನ್’  ಸಿನಿಮಾದ ‘ಪೆಹಲಾ ಪೆಹಲಾ ಪ್ಯಾರ್  ಹೈ’ ಹಾಡಿನಲ್ಲಿ ಪ್ರೀತಿಯ ನವಿರು ಭಾವವನ್ನು ಹೃದಯಕ್ಕೆ ತಲುಪಿಸಿದ ದನಿಯಾಗಿತ್ತು ನಿಮ್ಮದು.  ಮಲಯಾಳಂ ಸಿನಿಮಾ ‘ಕಿಲುಕ್ಕಂ’ ನಲ್ಲಿ ‘ಊಟ್ಟಿಪಟ್ಟಣಂ’ ಹಾಡಿನ ತುಂಟತನ ಮೆರೆಯುವುದುಂಟೆ? ತಮಿಳಿನ  ‘ಕರ್ಣ’ ಸಿನಿಮಾದ  ‘ಮಲರೇ ಮೌನಮಾ’ ಹಾಡು ಅದೆಷ್ಟು  ಬಾರಿ ಕೇಳಿದರೂ  ಸಾಕೆನಿಸುವುದಿಲ್ಲ. ನನ್ನ ಪಾಲಿಗೆ  ಎಸ್ಪಿಬಿ ಎಂದರೆ ಲವಲವಿಕೆ. ದಶಕಗಳಿಂದ ಭಾರತೀಯ ಸಂಗೀತ ರಂಗದಲ್ಲಿ ಮೆರೆದ ಅಪ್ರತಿಮ ಗಾಯಕ.

ನೀವು ಒಂದೇ ದಿನದಲ್ಲಿ 21 ಹಾಡುಗಳನ್ನು ಹಾಡಿದ್ದೀರಿ ಎಂದು ಕೇಳಿದ್ದೇನೆ. ವರ್ಷಗಳಲ್ಲಿ ಸರಾಸರಿ 3 ಹಾಡು ಎಂಬ ಲೆಕ್ಕವಿರಿಸುತ್ತಿದ್ದಿರಂತೆ. ಹಾಡಿನ ರೆಕಾರ್ಡಿಂಗ್ ಗಾಗಿ ಸ್ಟುಡಿಯೊದಿಂದ ಸ್ಟುಡಿಯೊಗೆ ಓಡುತ್ತಿದ್ದರು ಸಹ ಹಾಡಿನ ಬಗ್ಗೆ ರಾಜಿ ಮಾಡಿಕೊಳ್ಳಲು ನೀವು ಇಷ್ಟ ಪಡುತ್ತಿರಲಿಲ್ಲ. ಪ್ರಸಿದ್ಧ ಹಾಡು ‘ಇಲಯಾನಿಲಾ’ ಅನ್ನು 16 ಬಾರಿ ಬದಲಾಯಿಸಲಾಗಿತ್ತಂತೆ. ಹಾಡು ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಿದ್ದ ನೀವು ಪ್ರತಿಯೊಂದು ಹಾಡಿನಲ್ಲಿಯೂ ಅದನ್ನೇ ಪಾಲಿಸಿದಿರಿ.

ಯೇಸುದಾಸ್ ಅವರಿಗೆ ನೀವು ಮಾನಸ ಗುರು ಆಗಿದ್ದಿರಿ. ಹಾಡಿನ ಸಾಲೊಂದರಲ್ಲಿ ಅಶ್ಲೀಲತೆ ಇದೆ ಎಂದು ಹಾಡಲು ನಿರಾಕರಿಸಿದ್ದ ಕೆ.ಎಸ್.ಚಿತ್ರಾ ಅವರಲ್ಲಿ ಹಾಡುವುದಷ್ಟೇ ನಮ್ಮ ಕೆಲಸ. ಬಾಕಿ ಉಳಿದದ್ದು ಸಿನಿಮಾದವರಿಗೆ ಬಿಟ್ಟಿದ್ದು ಎಂದು ಹೇಳಿ ಅವರಿಗೆ ಸಲಹೆ ನೀಡಿದವರು ನೀವು.

ಅಂದು ರೆಕಾರ್ಡಿಂಗ್ ಸ್ಟುಡಿಯೊವೊಂದರಲ್ಲಿ ನಿಮ್ಮ ದನಿ ಕೇಳಿ ಆ ಹುಡುಗ ಯಾರು ಎಂದು ಕೇಳಿದ್ದರಂತೆ ಎಂಜಿಆರ್. ತನಗಾಗಿ ಹೊಸ ದನಿಯೊಂದನ್ನು ಹುಡುಕುತ್ತಿದ್ದ ಕಾಲದಲ್ಲಿ ಅವರಿಗೆ  ನೀವು ಸಿಕ್ಕಿದಿರಿ. ‘ಅಡಿಮಪ್ಪೆಣ್ಣ್’ ಚಿತ್ರದಲ್ಲಿ ‘ಆಯಿರಮ್ ನಿಲವೇ ವಾ..ಒರಾಯಿರಂ ನಿಲವೇ ವಾ’ ಎಂಬ ಹಾಡಿಗೆ ನೀವು ದನಿಯಾಗಿ  ಬೆಳದಿಂಗಳನ್ನೇ ತಂದಿರಿ. ಆಮೇಲೆ ತಮಿಳು ಚಿತ್ರರಂಗ ದಿಗ್ಗಜರಾದ ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ರಜನೀಕಾಂತ್,ಎಂಜಿಆರ್,ಕಮಲ್ ಹಾಸನ್ ಎಲ್ಲರ ಹಾಡಿಗೂ ನೀವು ದನಿಯಾದಿರಿ. ಪ್ರೇಮ, ಹಾತೊರೆಯುವಿಕೆ, ಸಹಾನುಭೂತಿ, ಪ್ರೀತಿ, ತುಂಟಾಟ ಎಲ್ಲದಕ್ಕೂ ಹೊಂದುವ ದನಿ ನಿಮ್ಮದಾಗಿತ್ತು.

ಹಾಗೆ ತೊಡಗಿದ ಸಿನಿಮಾ ಸಂಗೀತ ಪಯಣದಲ್ಲಿ 5 ದಶಕಗಳಲ್ಲಿ ನೀವು ಹಾಡಿದ್ದು ಸುಮಾರು 40,000 ಹಾಡುಗಳನ್ನು. ಕನ್ನಡ ,ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿರುವ ಏಕೈಕ ಗಾಯಕ! ಚಿತ್ರ ಗೀತೆ ಮಾತ್ರವಲ್ಲ ದೇವರ ನಾಮ, ಆಲ್ಬಂ ಹಾಡುಗಳು ,ಭಾವ ಗೀತೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನ ಹಾಡಿ ಸಂಗೀತಲೋಕಕ್ಕೆ ಅನನ್ಯ ಕೊಡುಗೆ ನೀಡಿದವರು.

ಇನ್ನೊಂದು ಜನ್ಮವಿದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುವೆ ಎಂದು ಹೇಳಿದ್ದಿರಿ. ಕಳೆದ ವರ್ಷ ಕೊರೊನಾ ವೈರಸ್ ನಿಮ್ಮನ್ನು ಬಲಿ ತೆಗೆದುಕೊಂಡಾಗ ಮನಸ್ಸು ಬಯಸಿದ್ದು.. ಮತ್ತೊಮ್ಮೆ ಹುಟ್ಟಿ ಬನ್ನಿ ಸರ್… ಎದೆ ತುಂಬಿ ಹಾಡಲು ನೀವು ಬೇಕು. Happy Birthday

ಇಂತಿ, ನಿಮ್ಮ ಅಭಿಮಾನಿ 

ಇದನ್ನೂ ಓದಿ:  ಗಾಯನ-ರಿಯಾಲಿಟಿ ಶೋ-ನಟನೆ-ಸಂಗೀತ ನಿರ್ದೇಶನ.. ಗಾನ ಗಾರುಡಿಗ SPB ಸದಾ ಬ್ಯುಸಿ!

(Remembering legendary Singer SP Balasubrahmanyam on his Birthday )