ಶ್ರೀಮುರಳಿ (SriMurali) ನಟಿಸಿರುವ ‘ಬಘೀರ’ (Bagheera) ಸಿನಿಮಾದ ಟೀಸರ್ ಲಾಂಚ್ಗೆ ಮುಹೂರ್ತ ನಿಗದಿಯಾಗಿದೆ. ಹೊಂಬಾಳೆ ನಿರ್ಮಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ನಾನಾ ಕಾರಣಗಳಿಂದ ತಡವಾಗುತ್ತಲೇ ಬಂದಿತ್ತು. ಸಿನಿಮಾ ಶುರುವಾಗಿ ಬಹಳ ದಿನಗಳೇ ಕಳೆದಿದ್ದವು, ಇದೀಗ ಹೊಂಬಾಳೆ ಫಿಲ್ಮ್ಸ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ‘ಬಘೀರ’ ಬಗ್ಗೆ ಮತ್ತೆ ಪ್ರೇಕ್ಷಕರಲ್ಲಿ ಕುತೂಹಲ ಮೂಡುವಂತಾಗಿದೆ.
‘ಬಘೀರ’ ಸಿನಿಮಾದ ಟೀಸರ್ ಡಿಸೆಂಬರ್ 17ರ ಬೆಳಿಗ್ಗೆ 9:45ಕ್ಕೆ ಬಿಡುಗಡೆ ಆಗಲಿದೆ. ‘ಅರಣ್ಯ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತದೆ’ ಎಂಬ ಅಡಿಬರಹದೊಂದಿಗೆ ಟೀಸರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಶ್ರೀಮುರಳಿ ನಟಿಸಿರುವ ಈ ಸಿನಿಮಾಕ್ಕೆ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ, ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.
‘ಬಘೀರ’ ಸಿನಿಮಾವನ್ನು ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಕತೆ ಬರೆದಿರುವುದು ಪ್ರಶಾಂತ್ ನೀಲ್, ‘ಬಘೀರ’ ಚಿತ್ರಕತೆಯನ್ನು ತಿದ್ದಿ ಫೈನ್ ಟ್ಯೂನ್ ಮಾಡುವಲ್ಲಿಯೂ ಪ್ರಶಾಂತ್ ನೀಲ್ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಅಸಲಿಗೆ ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಬೇಕಿತ್ತಂತೆ, ಆದರೆ ‘ಕೆಜಿಎಫ್ 2’ ಹಾಗೂ ಅದರ ಹಿಂದೆಯೇ ‘ಸಲಾರ್’ ಸಿನಿಮಾದಲ್ಲಿ ತೊಡಗಿಕೊಂಡ ಕಾರಣ ಸಿನಿಮಾದ ಕತೆಯನ್ನು ಬೇರೆಯವರಿಗೆ ನೀಡಿ ನಿರ್ದೇಶನ ಮಾಡಿಸಿದ್ದಾರೆ.
ಇದನ್ನೂ ಓದಿ:Sri Murali: ಶ್ರೀಮುರಳಿ ಕಾಲಿಗೆ ಪೆಟ್ಟು: ‘ಬಘೀರ’ ಚಿತ್ರದ ಶೂಟಿಂಗ್ ವೇಳೆ ಅವಘಡ; ಶೀಘ್ರದಲ್ಲೇ ಸರ್ಜರಿ
‘ಬಘೀರ’ ಸಿನಿಮಾವು ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಬಹಳ ಸಮಯವಾಗಿದೆ. ಆದರೆ ಸಿನಿಮಾದ ಚಿತ್ರೀಕರಣ ನಾನಾ ಕಾರಣಗಳಿಗೆ ತಡವಾಗುತ್ತಲೇ ಬಂತು. ಚಿತ್ರೀಕರಣದ ವೇಳೆ ಶ್ರೀಮುರಳಿಗೆ ಗಾಯವಾದ ಘಟನೆಯೂ ಸಹ ನಡೆಯಿತು. ಎಲ್ಲ ಅಡೆತಡೆಗಳನ್ನು ದಾಟಿ ಸಿನಿಮಾದ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದಂತಿದೆ. ‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿ ಎದುರು ‘ಸಪ್ತ ಸಾಗರದಾಚೆ ಎಲ್ಲೋ’ ಚೆಲುವೆ ರುಕ್ಮಿಣಿ ವಸಂತ್ ನಟಿಸಿದ್ದಾರೆ.
ಹೊಂಬಾಳೆ ನಿರ್ಮಿಸುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಗೆ ಸಜ್ಜಾಗುತ್ತಿವೆ. ‘ಸಲಾರ್’ ಇದೇ ತಿಂಗಳು 22ಕ್ಕೆ ಬಿಡುಗಡೆ ಆಗಲಿದೆ. ಅದರ ಬೆನ್ನಲ್ಲೆ ಯುವರಾಜ್ ಕುಮಾರ್ ನಟನೆಯ ‘ಯುವ’ ಬಿಡುಗಡೆ ಆಗಲಿದೆ. ಅದಾದ ಬಳಿಕ ‘ಬಘೀರ’ ತೆರೆಗೆ ಬರಲಿದೆ. ಮಲಯಾಳಂನಲ್ಲಿ ‘ಟೈಸನ್’, ತಮಿಳಿನಲ್ಲಿ ‘ತಾತ’ ಹೆಸರಿನ ಸಿನಿಮಾಗಳನ್ನು ಸಹ ಹೊಂಬಾಳೆ ನಿರ್ಮಾಣ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Wed, 13 December 23