ಶಿವರಾಜ್ಕುಮಾರ್ (Shivarajkumar) ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಸುದೀಪ್ ಕಾರ್ಯಕ್ರಮಗಳಿಗೆ ಶಿವಣ್ಣ ಅತಿಥಿಯಾಗಿ ಬರುತ್ತಾರೆ. ಅದೇ ರೀತಿ ಶಿವರಾಜ್ಕುಮಾರ್ ಸಿನಿಮಾಗಳಿಗೆ ಸುದೀಪ್ ಬೆಂಬಲ ನೀಡುತ್ತಾರೆ. ಈಗ ಶಿವರಾಜ್ಕುಮಾರ್ ಹಾಗೂ ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾದ ಕ್ಯಾರೆಕ್ಟರ್ ಟೀಸರ್ನ ಸುದೀಪ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ಸಿನಿಮಾ ಬಗ್ಗೆ, ಶಿವರಾಜ್ಕುಮಾರ್ ಹಾಗೂ ಪ್ರಭುದೇವ ಅವರ ಅಪರೂಪದ ಕಾಂಬಿನೇಷನ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ‘ಜೋಗಿ’ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.
‘ಶಿವರಾಜ್ಕುಮಾರ್ ಹಾಗೂ ಪ್ರಭುದೇವ ಒಂದೇ ಫ್ರೇಮ್ನಲ್ಲಿ ಬಂದು ಡ್ಯಾನ್ಸ್ ಮಾಡೋದನ್ನು ನೋಡೋದೇ ಅದ್ಭುತ. ಇಬ್ಬರೂ ಒಳ್ಳೆಯ ಡ್ಯಾನ್ಸರ್ಸ್. ಒಬ್ಬರು ಪರ್ಫೆಕ್ಷನಿಸ್ಟ್ ಆದರೆ, ಇನ್ನೊಬ್ಬರು ಎನರ್ಜಿಯಲ್ಲಿ ಅನ್ಲಿಮಿಟೆಡ್ ಪ್ಯಾಕೇಜ್. ಇಬ್ಬರಿಗೂ ಡ್ಯಾನ್ಸ್ ಇಷ್ಟ. ಇಬ್ಬರಿಗೂ ಒಳ್ಳೆಯ ಕಾಮಿಡಿ ಟೈಮಿಂಗ್ ಇದೆ. ಇದು ಅಪರೂಪದ ಕಾಂಬಿನೇಷನ್. ಇವರು ಈ ಮೊದಲೇ ಒಟ್ಟಾಗಿ ಕೆಲಸ ಮಾಡಬೇಕಿತ್ತು’ ಎಂದಿದ್ದಾರೆ ಸುದೀಪ್.
‘ನಾನು ಶಾಲಾ ದಿನಗಳಲ್ಲಿ ಇದ್ದಾಗಲೇ ಶಿವಣ್ಣ ಯೂತ್ ಐಕಾನ್ ಆಗಿದ್ದರು. ಆಗ ನಾನು ಸಿನಿಮಾಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಅವರ ನಟನೆಯ ಓಂ ಸಿನಿಮಾ ನೋಡಿ ಫ್ಯಾನ್ ಆದೆ. ಆ ಚಿತ್ರವನ್ನು ಥಿಯೇಟರ್ನಲ್ಲೇ 10-12 ಬಾರಿ ನೋಡಿದ್ದೇನೆ. ಆ ಚಿತ್ರ ನೋಡದವರೇ ಇಲ್ಲ. ಅದು ಗೇಮ್ ಚೇಂಜರ್ ಸಿನಿಮಾ. ನನ್ನ ಸ್ಪರ್ಷ ಸಿನಿಮಾದ ಆಡಿಯೋ ಲಾಂಚ್ನ ಶಿವಣ್ಣ ಲಾಂಚ್ ಮಾಡಿಕೊಟ್ಟರು’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಹಾಗೂ ಸುದೀಪ್ ಅವರು ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಿಲ್ಲ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರ ಇನ್ನೂ ಉತ್ತಮವಾಗಿ ಮೂಡಿಬರಬಹುದಿತ್ತು ಎನ್ನುವ ಭಾವನೆ ಸುದೀಪ್ಗೆ ಈಗಲೂ ಇದೆ. ‘ವಿಲನ್ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ದು ಬ್ರಿಲಿಯಂಟ್ ವಿಚಾರ. ನಮ್ಮಿಬ್ಬರ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಈಗಲೂ ಅನಿಸುತ್ತದೆ. ಆ ಕೊರತೆ ಈಗಲೂ ಇದೆ. ಇದೊಂದು ಅಪರೂಪದ ಕಾಂಬಿನೇಷನ್. ಆದಾಗ್ಯೂ ಆ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಆಯಿತು ಎನ್ನುವ ಖುಷಿ ಇದೆ’ ಎಂದಿದ್ದಾರೆ ಕಿಚ್ಚ ಸುದೀಪ್.
‘ಶಿವರಾಜ್ಕುಮಾರ್ ಅವರು ಗೌರವ ಸಂಪಾದಿಸಿದ್ದಾರೆ. ಇದನ್ನು ಕೆಲವೇ ಕೆಲವು ಮಂದಿ ಮಾಡಲು ಸಾಧ್ಯ. ನಮ್ಮ ಮಧ್ಯೆ ಗೀತಕ್ಕ ಇದ್ದಾರೆ. ಅವರ ಮೇಲೂ ಸಾಕಷ್ಟು ಗೌರವ ಇದೆ. ನನ್ನ ಹಾಗೂ ಶಿವಣ್ಣ ಮಧ್ಯೆ ಒಳ್ಳೆಯ ಬಾಂಧವ್ಯ ಇರಲು ಅವರೂ ಕಾರಣ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ಪ್ರಭುದೇವ ಪರ್ಫೆಕ್ಷನಿಸ್ಟ್ ಎಂದ ಸುದೀಪ್; ನಟನ ಪ್ರತಿಕ್ರಿಯೆ ಏನು?
‘ಕರಟಕ ದಮನಕ’ ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಲಿದೆ. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಸುದೀಪ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಮ್ಯಾಕ್ಸ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ