100 ಕೋಟಿ ರೂಪಾಯಿ ಗಳಿಸಿದ ‘ಸು ಫ್ರಮ್ ಸೋ’: ಇಷ್ಟಕ್ಕೇ ನಿಲ್ಲಲ್ಲ ಕಲೆಕ್ಷನ್

ಜನಮೆಚ್ಚಿದ ‘ಸು ಫ್ರಮ್ ಸೋ’ ಸಿನಿಮಾ ಪ್ರತಿ ವೀಕೆಂಡ್​​ನಲ್ಲೂ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕನಾಗಿ ರಾಜ್ ಬಿ. ಶೆಟ್ಟಿ, ನಿರ್ದೇಶಕನಾಗಿ ಜೆ.ಪಿ. ತುಮಿನಾಡು ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ‘ವಾರ್ 2’, ‘ಕೂಲಿ 2’ ಸಿನಿಮಾಗಳ ಪೈಪೋಟಿ ಇದ್ದರೂ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ದಾಟಿದೆ.

100 ಕೋಟಿ ರೂಪಾಯಿ ಗಳಿಸಿದ ‘ಸು ಫ್ರಮ್ ಸೋ’: ಇಷ್ಟಕ್ಕೇ ನಿಲ್ಲಲ್ಲ ಕಲೆಕ್ಷನ್
Su From So

Updated on: Aug 17, 2025 | 7:17 AM

ಹಾರರ್ ಕಾಮಿಡಿ ಕಥಾಹಂದರದ ‘ಸು ಫ್ರಮ್ ಸೋ’ (Su From So) ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಬಿಡುಗಡೆಗೂ ಮುನ್ನ ಯಾರೂ ಊಹಿಸಿರಲಿಲ್ಲ. ಎಷ್ಟೋ ಜನರಿಗೆ ಈ ರೀತಿಯ ಒಂದು ಸಿನಿಮಾ ಬರುತ್ತಿದೆ ಎಂಬುದೇ ತಿಳಿದಿರಲಿಲ್ಲ. ಚಿತ್ರದ ಹೆಸರು ಹೇಳಲು ಕೆಲವರಿಗೆ ನಾಲಿಗೆ ಹೊರಳುತ್ತಿರಲಿಲ್ಲ. ಆದರೆ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಪಡೆದುಕೊಳ್ಳಲು ಆರಂಭಿಸಿದ ಬಳಿಕ ಎಲ್ಲರ ಬಾಯಲ್ಲೂ ಇದೇ ಸಿನಿಮಾದ ಚರ್ಚೆ ಶುರು ಆಯಿತು. ಅದರ ಪರಿಣಾಮವಾಗಿ ‘ಸು ಫ್ರಮ್ ಸೋ’ ಸಿನಿಮಾ ಅದ್ಭುತ ಕಲೆಕ್ಷನ್ (Su From So Box Office Collection) ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಾಜ್ ಬಿ. ಶೆಟ್ಟಿ (Raj B. Shetty) ಮತ್ತು ಅವರ ತಂಡಕ್ಕೆ ಈ ಯಶಸ್ಸಿನಿಂದ ಸಖತ್ ಖುಷಿ ಆಗಿದೆ.

ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ 100 ಕೋಟಿ ರೂಪಾಯಿ ಯಶಸ್ಸು ಕಾಣುವುದು ಎಂದರೆ ತಮಾಷೆಯೇ ಅಲ್ಲ. ಅಂಥ ಸಾಧನೆಯನ್ನು ಜೆ.ಪಿ. ತುಮಿನಾಡು ಅವರು ಮಾಡಿದ್ದಾರೆ. ಅವರೇ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಕೂಡ ಮಾಡಿರುವುದರಿಂದ ಅವರಿಗೆ ಇದು ಡಬಲ್ ಗೆಲುವು.

ಈ ಸಿನಿಮಾದಲ್ಲಿ ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೂ ಕೂಡ ‘ಸು ಫ್ರಮ್ ಸೋ’ ಹವಾ ಕಡಿಮೆ ಆಗಿಲ್ಲ.

ಇದನ್ನೂ ಓದಿ
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಾ? ರಾಜ್ ಪ್ಲ್ಯಾನೇ ಬೇರೆ
‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್ ಯಾರು? ಹಿನ್ನೆಲೆ ಏನು?
‘ಸು ಫ್ರಮ್ ಸೋ’ ಚಿತ್ರದಲ್ಲಿ ಈ ಪಾತ್ರಗಳೇ ಹೈಲೈಟ್; ಮಿಸ್ ಮಾಡಲೇಬಾರದು

ಬಿಡುಗಡೆ ಆಗಿ 24 ದಿನ ಕಳೆದರೂ ಸಹ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. 23 ದಿನಕ್ಕೆ ಕರ್ನಾಟಕದಲ್ಲಿ ಈ ಸಿನಿಮಾ 69.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಲಯಾಳಂನಲ್ಲಿ 5.07 ಕೋಟಿ ರೂಪಾಯಿ, ತೆಲುಗಿನಲ್ಲಿ 1.23 ಕೋಟಿ ರೂಪಾಯಿ ಗಳಿಸಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 100.99 ಕೋಟಿ ರೂಪಾಯಿ ಆಗಲಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ರವಿ ಅಣ್ಣನಿಗೆ ಪ್ರೇಕ್ಷಕರಿಂದ ಸಿಕ್ತು ಸಿಕ್ಕಾಪಟ್ಟೆ ಪ್ರೀತಿ

ಆಗಸ್ಟ್ 14ರಂದು ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳು ಬಿಡುಗಡೆ ಆದವು. ಆ ಸಿನಿಮಾಗಳು ಸಾಕಷ್ಟು ಪರದೆಗಳನ್ನು ಆಕ್ರಮಿಸಿಕೊಂಡವು. ಹಾಗಿದ್ದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾದ ಹವಾ ತಗ್ಗಿಲ್ಲ. ಬೆಂಗಳೂರಿನಲ್ಲಿ ಈಗಲೂ ಕೂಡ ಈ ಸಿನಿಮಾ ಅನೇಕ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್​​ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮವಾಗಿ ಕಲೆಕ್ಷನ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.