‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
Bandaru Bandaru Baava Bandaru Song: ‘ಸು ಫ್ರಮ್ ಸೋ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ. ಪುಷ್ಪರಾಜ್ ಬೋಳಾರ್ ಅವರ "ಬಾವ" ಪಾತ್ರ ವಿಶೇಷವಾಗಿ ಜನಪ್ರಿಯವಾಗಿದೆ. ಅವರ ನಟನೆ ಹಾಗೂ "ಬಂದರು ಬಂದರು ಬಾವ ಬಂದರು" ಹಾಡು ವೈರಲ್ ಆಗಿದೆ.

‘ಸು ಫ್ರಮ್ ಸೋ’ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಚಿತ್ರದ ಪ್ರತಿ ಪಾತ್ರಗಳೂ ಹೈಲೈಟ್ ಆಗಿವೆ. ಈ ಸಿನಿಮಾದಿಂದ ನಿರ್ಮಾಪಕ ರಾಜ್ ಬಿ. ಶೆಟ್ಟಿ ಗೆದ್ದು ಬೀಗಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ ಅವರು ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈಗ ‘ಸು ಫ್ರಮ್ ಸೋ’ (Su From So) ಚಿತ್ರದ ಬಾವ ಅವರು ಸಿನಿಮಾ ಗೆದ್ದ ಖುಷಿಯಲ್ಲಿ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವ ಪಾತ್ರ ಹೈಲೈಟ್ ಆಗಿದೆ. ಈ ಪಾತ್ರ ಮಾಡಿದ್ದು ಪುಷ್ಪರಾಜ್ ಬೋಳಾರ್ ಅವರು. ತುಳು ನಾಟಕ ಹಾಗೂ ಸಿನಿಮಾಗಳಲ್ಲಿ ಪುಷ್ಪರಾಜ್ ನಟಿಸಿ ಗಮನ ಸೆಳೆದಿದ್ದಾರೆ. ಇವರು ಕರಾವಳಿ ಪ್ರತಿಭೆ. ಈ ಮೊದಲು ‘ಕಾಂತಾರ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ರಿಷಬ್ ಹಾಗೂ ಇತರರು ಜೈಲಿನಲ್ಲಿ ಇದ್ದಾಗ ನಗು ಉಕ್ಕಿಸುವ ಹಾಸ್ಯ ಮಾಡುತ್ತಾರೆ. ‘ಸು ಫ್ರಮ್ ಸೋ’ನಲ್ಲಿ ಅವರು ಮಾಡಿದ ಬಾವನ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ಪಾತ್ರದ ಎಂಟ್ರಿ ವೇಳೆ ವಿಶೇಷ ಹಾಡನ್ನು ಕೂಡ ಹಾಕಲಾಗುತ್ತದೆ. ಈ ಹಾಡು ಕೂಡ ವೈರಲ್ ಆಗಿದೆ.
ಇದನ್ನೂ ಓದಿ: ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್
‘ಸು ಫ್ರಮ್ ಸೋ’ ಸಿನಿಮಾದಲ್ಲಿ ‘ಬಂದರು ಬಂದರು ಬಾವ ಬಂದರು..’ ಎಂಬ ಹಾಡು ಬಂದರೆ ಪುಷ್ಪರಾಜ್ ಎಂಟ್ರಿ ಆಯಿತು ಎಂದು ತಿಳಿದುಕೊಳ್ಳಬಹುದು. ಅವರಿಗೆ ಸಿಕ್ಕ ಜನಪ್ರಿಯತೆ ಬಗ್ಗೆ ಅವರು ಮಾತನಾಡಿದ್ದಾರೆ. ‘ಒಂದೊಳ್ಳೆಯ ಪಾತ್ರ ಸಿಕ್ಕಿದೆ. ನಾನು ಈ ಪಾತ್ರಕ್ಕೆ ಎಷ್ಟು ಜೀವ ತುಂಬಿಸಿದೆನೋ ಗೊತ್ತಿಲ್ಲ. ಅದು ನಿರ್ದೇಶಕರಿಗೆ ಬಿಟ್ಟಿದ್ದು. ಜನರು ಪಾತ್ರ ಇಷ್ಟಪಡುತ್ತಿದ್ದಾರೆ. ಎಲ್ಲರೂ ಸಿನಿಮಾನ ಸಪೋರ್ಟ್ ಮಾಡಬೇಕು’ ಎಂದು ಪುಷ್ಪರಾಜ್ ಕೋರಿದ್ದಾರೆ.
ಬಾವ ಹಾಡು
‘ಸು ಫ್ರಮ್ ಸೋ’ ಸಿನಿಮಾದ ಒಟ್ಟಾರೆ ಕಲೆಕ್ಷನ್ 20 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರವು ವಾರದ ದಿನವೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಒರಾಯ್ನ್, ಮಾಲ್ ಆಫ್ ಏಷ್ಯಾ ಮೊದಲಾದ ಕಡೆಗಳಲ್ಲಿ ಸಿನಿಮಾಗೆ 15-20 ಶೋಗಳನ್ನು ನೀಡಲಾಗುತ್ತಿದೆ. ಈ ಕಾರಣದಿಂದಲೇ ಸಿನಿಮಾದ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇನ್ನೂ ಕೆಲ ವಾರ ಸಿನಿಮಾದ ಅಬ್ಬರ ಮುಂದುವರಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:54 am, Thu, 31 July 25








