‘ಸು ಫ್ರಮ್ ಸೋ’ ಸುಂದರಿಗೆ ಮುಂಬೈ ಹಿನ್ನೆಲೆ; ಮಂಗಳೂರು ಮೂಲದ ತನಿಷ್ಕಾ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

‘ಸು ಫ್ರಮ್ ಸೋ’ ಚಿತ್ರದಲ್ಲಿ ಚೈತ್ರಾ ಪಾತ್ರ ನಿರ್ವಹಿಸಿದವರ ಹೆಸರು ತನಿಷ್ಕಾ ಶೆಟ್ಟಿ. ಅವರ ಪಾತ್ರಕ್ಕೆ ಸಂಭಾಷಣೆ ಇಲ್ಲದಿದ್ದರೂ ಪಾತ್ರ ಹೈಲೈಟ್ ಆಗಿದೆ. ಮಂಗಳೂರು ಮೂಲದ ತನಿಷ್ಕಾ ಅವರು ಮುಂಬೈನಲ್ಲಿ ಬೆಳೆದವರು. ಟಿವಿ9 ಕನ್ನಡ ಜೊತೆಗಿನ ಸಂದರ್ಶನದಲ್ಲಿ ಅವರು ತಮ್ಮ ಅಭಿನಯ ಪ್ರಯಾಣ, ಚಿತ್ರಕ್ಕೆ ಆಯ್ಕೆಯಾದ ರೀತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

‘ಸು ಫ್ರಮ್ ಸೋ’ ಸುಂದರಿಗೆ ಮುಂಬೈ ಹಿನ್ನೆಲೆ; ಮಂಗಳೂರು ಮೂಲದ ತನಿಷ್ಕಾ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?
ಸು ಫ್ರಮ್ ಸೋ

Updated on: Jul 29, 2025 | 11:00 AM

‘ಸು ಫ್ರಮ್ ಸೋ’ ಚಿತ್ರದಲ್ಲಿ ಬಂದ ಎಲ್ಲಾ ಪಾತ್ರಗಳು ಹೈಲೈಟ್​ ಆಗಿವೆ. ಅದರಲ್ಲಿ ಚೈತ್ರಾ ಪಾತ್ರ ಕೂಡ ಒಂದು. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಪಾತ್ರಕ್ಕೆ ಒಂದೇ ಒಂದು ಡೈಲಾಗ್​ ಇಲ್ಲ. ಆದರೆ, ನಗುವಿನ ಮೂಲಕವೇ ಎಲ್ಲರನ್ನೂ ಫ್ಲ್ಯಾಟ್ ಮಾಡೋ ಗುಣ ಈ ಪಾತ್ರಕ್ಕಿದೆ. ಸಿನಿಮಾಗೆ ದೊಡ್ಡ ತಿರುವು ನೀಡಲು ಈ ಪಾತ್ರ ಕೂಡ ಕಾರಣ. ಈ ಪಾತ್ರ ಮಾಡಿದ್ದು ತನಿಷ್ಕಾ ಅಜಯ್ ಶೆಟ್ಟಿ. ಅವರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇವರು ಮಂಗಳೂರು ಮೂಲದವರು. ಆದರೆ, ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಸಂಭಾಷಣೆ ಇಲ್ಲದಿದ್ದರೂ ಹೈಲೈಟ್

‘ನನ್ನ ಪಾತ್ರಕ್ಕೆ ಯಾವುದೇ ಡೈಲಾಗ್​ ಇಲ್ಲ. ಆದರೆ, ನಾನು ಪಾತ್ರಕ್ಕೆ ಬೇಕಿದ್ದ ಹಾವ-ಭಾವಗಳನ್ನು ಸರಿಯಾಗಿ ನಿಭಾಯಿಸಿದ್ದೇನೆ. ನನಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನೀಡಿದ್ದೇನೆ. ಜೆಪಿ ಅವರ ಮಾರ್ಗದರ್ಶನ ಚೆನ್ನಾಗಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ
ಶ್ರಾವಣದ ಉಪವಾಸ ಮಾಡಿ ಬಳಿಕ ಕುರಿ ಮರಿ ತಿಂದ ನಟಿ; ವ್ಯಕ್ತವಾಯಿತು ಟೀಕೆ
ಜೀ ಕನ್ನಡದಲ್ಲಿ ‘ನಾವು ನಮ್ಮವರು’ ಶೋ; ತಾರಾ, ಶರಣ್, ಅಮೂಲ್ಯ ಜಡ್ಜ್
ಸೋಮವಾರವೂ ಭಾನುವಾರದಷ್ಟೇ ಗಳಿಸಿದ ‘ಸು ಫ್ರಮ್ ಸೋ’
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ

ಆಫರ್ ಸಿಕ್ಕಿದ್ದು ಹೀಗೆ

‘ಜೆಪಿ ತುಮಿನಾಡ್ ಅವರು ‘ಕಥೆ ಯೆಡ್ಡೆ ಉಂಡು’ ನಾಟಕ ಮಾಡಲು ಮುಂಬೈಗೆ ಬಂದಿದ್ದರು. ಈ ನಾಟಕವನ್ನು ಆಯೋಜನೆ ಮಾಡಿದ್ದು ನನ್ನ ತಂದೆ. ಜೆಪಿ ಅವರು ನನ್ನನ್ನು ನೋಡಿದರು. ನನ್ನ ತಂದೆಯನ್ನು ಅಪ್ರೋಚ್ ಮಾಡಿದರು. ಆಡಿಷನ್ ಕೊಡಿಸುವಂತೆ ಹೇಳಿದರು. ಆದರೆ, ನನಗೆ ನಟನೆಯ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಒಂದು ಟ್ರೈ ಕೊಡೋಣ ಎಂದು ಆಡಿಷನ್ ಕೊಟ್ಟೆ. ಅವರಿಗೆ ಇಷ್ಟ ಆಯಿತು. ಆಡಿಷನ್ ವಿಡಿಯೋನ ರಾಜ್ ಬಿ. ಶೆಟ್ಟಿ ಅವರಿಗೆ ತೋರಿಸಲಾಯಿತು. ಅವರು ಕೂಡ ಇಷ್ಟಪಟ್ಟರು. ನನಗೆ ಸಿನಿಮಾ ಆಫರ್ ಸಿಕ್ಕಿದ್ದು ಹೀಗೆ’ ಎಂದಿದ್ದಾರೆ ತನಿಷ್ಕಾ.

ಮೊದಲ ಸಿನಿಮಾ

‘ನಾನು ಮಾಡೆಲಿಂಗ್ ಕ್ಷೇತ್ರದಲ್ಲಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಚಿಕ್ಕ ವಯಸ್ಸಿನಿಂದ ಮಾಡೆಲ್ ಆಗಬೇಕು ಎನ್ನುವ ಕನಸು ನನ್ನದಾಗಿತ್ತು. ನಾನು ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ನನ್ನ ಕುಟುಂಬದವರು ಮಂಗಳೂರಿನವರು. ನನಗೆ ಮಂಗಳೂರು ಎಂದರೆ ತುಂಬಾನೇ ಇಷ್ಟ. ನಾನು ಶೂಟ್​ಗಾಗಿ ಮಂಗಳೂರಿಗೆ ಬರುತ್ತಿದ್ದೆ. ಅದು ನಿಜಕ್ಕೂ ಖುಷಿ ಕೊಟ್ಟ ವಿಷಯ’ ಎಂದಿದ್ದಾರೆ ತನಿಷ್ಕಾ.

ರೀ-ಟೇಕ್ ಆಗಿದೆ

‘ಜೆಪಿ ತುಮಿನಾಡ ಅವರ ತಲೆಯಲ್ಲಿ ಒಂದು ವಿಷನ್ ಇದೆ. ಅದು ತೆರೆಮೇಲೆ ಬರುವವರೆಗೆ ಅವರು ಶೂಟ್ ಮಾಡಿಸುತ್ತಲೇ ಇರುತ್ತಾರೆ. ಒಂದು ಸಂದರ್ಭದಲ್ಲಿ ಎರಡರಿಂದ ಮೂರು ಬಾರಿ ಟೇಕ್ ತೆಗೆದುಕೊಂಡಿದ್ದೂ ಇದೆ. ಹೀಗಾಗಿಯೇ ಸಿನಿಮಾ ಅಷ್ಟು ಸುಂದರವಾಗಿ ಮೂಡಿ ಬಂದಿದೆ’ ಎನ್ನುತ್ತಾರೆ ಅವರು.

ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದೇನೆ

‘ನನಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದೆ. ನಾನು ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದೇನೆ. ನನಗೆ ತುಳು ಸಂಪೂರ್ಣವಾಗಿ ಬರುತ್ತದೆ. ನಾನು ಸಿನಿಮಾ ಮಾಡುವಾಗ ತಂದೆಗೆ ಆರಂಭದಲ್ಲಿ ಅಳುಕು ಇತ್ತು. ಜೆಪಿ ಸಿನಿಮಾ ಎಂದಾಗ ಅವರಿಗೆ ಭಯ ಆಗಲೇ ಇಲ್ಲ. ತಾಯಿ ಕೂಡ ಬೆಂಬಲಿಸಿದರು. ಸಿನಿಮಾ ನೋಡಿದ ಬಳಿಕ ಅವರು ಕಣ್ಣೀರು ಹಾಕಿದ್ದಾರೆ’ ಎಂದಿದ್ದಾರೆ ತನಿಷ್ಕಾ.

ಇನ್ನೂ ಶಿಕ್ಷಣ ಪಡೆಯುತ್ತಿದ್ದೇನೆ

‘ನಾನು ಮ್ಯಾನೇಜ್​​ಮೆಂಟ್ ಸ್ಟಡೀಸ್​​ನಲ್ಲಿ ಬ್ಯಾಚುಲರ್ ಡಿಗ್ರಿಯನ್ನು ಪಡೆಯುತ್ತಿದ್ದೇನೆ. ಮುಂಬೈನಲ್ಲೇ ಶಿಕ್ಷಣ ಪಡೆಯುತ್ತಿದ್ದೇನೆ. ಎರಡನೇ ವರ್ಷ ಓದುತ್ತಿದ್ದೇನೆ. ಶಿಕ್ಷಣ ಪೂರ್ಣಗೊಂಡ ಬಳಿಕ ನಟನೆಯ ಬಗ್ಗೆ ಯೋಚಿಸುತ್ತೇನೆ. ಅದಕ್ಕೂ ಮೊದಲೇ ಒಳ್ಳೆಯ ಆಫರ್ ಸಿಕ್ಕರೆ ಮಾಡುತ್ತೇನೆ’ ಎನ್ನುತ್ತಾರೆ ಅವರು.

ಮುಂಬೈನಲ್ಲೂ ನನ್ನ ಗುರುತಿಸಿದರು

‘ಮುಂಬೈನಲ್ಲಿ ನಾನು ಕುಟುಂಬದವರ ಜೊತೆ ‘ಸು ಫ್ರಮ್ ಸೋ’ ಸಿನಿಮಾ ನೋಡಲು ಹೋಗಿದ್ದೆ. ಆಗ ನನ್ನನ್ನು ಗುರುತಿಸಿ ಮಾತನಾಡಿಸಿದರು. ಥಿಯೇಟರ್​ಗೆ ಬಂದ 10ರಲ್ಲಿ 9 ಮಂದಿ ನನ್ನ ಗುರುತಿಸಿ ಮಾತನಾಡಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅದು ನಿಜಕ್ಕೂ ಹೆಮ್ಮೆಯ ವಿಚಾರ’ ಎನ್ನುತ್ತಾರೆ ತನಿಷ್ಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Tue, 29 July 25