ಮಲಯಾಳಂ ಬಳಿಕ ತೆಲುಗಿಗೆ ಹೊರಟ ‘ಸು ಫ್ರಮ್ ಸೋ’; ಹಕ್ಕು ಪಡೆಯಲು ನಿರ್ಮಾಣ ಸಂಸ್ಥೆಗಳಿಂದ ಸ್ಪರ್ಧೆ
ಕನ್ನಡದ ಸೂಪರ್ ಹಿಟ್ ಚಿತ್ರ ‘ಸು ಫ್ರಮ್ ಸೋ’ ಮಲಯಾಳಂನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ತೆಲುಗು ಡಬ್ಬಿಂಗ್ ಹಕ್ಕುಗಳಿಗೆ ಹಲವು ನಿರ್ಮಾಣ ಸಂಸ್ಥೆಗಳಿಂದ ಬಲವಾದ ಸ್ಪರ್ಧೆ ಏರ್ಪಟ್ಟಿದೆ. ಚಿತ್ರದ ಯಶಸ್ಸು ವಾರದ ದಿನಗಳಲ್ಲೂ ಮುಂದುವರಿದಿದೆ. ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳಿಗೆ ಮಾತುಕತೆಗಳು ನಡೆಯುತ್ತಿವೆ.

ಕನ್ನಡದಲ್ಲಿ ರಾಜ್ ಬಿ. ಶೆಟ್ಟಿ ನಿರ್ಮಾಣ ಮಾಡಿದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ (Su From So) ಸೂಪರ್ ಹಿಟ್ ಆಗಿದೆ. ಇತ್ತೀಚಿಗಿನ ವರ್ಷಗಳಲ್ಲಿ ಕನ್ನಡದ ಯಾವ ಕಡಿಮೆ ಬಜೆಟ್ನ ಚಿತ್ರವೂ ಇಷ್ಟು ದೊಡ್ಡ ಮಟ್ಟದ ಬುಕಿಂಗ್ನ ಕಂಡಿರಲಿಲ್ಲ ಅನ್ನೋದು ವಿಶೇಷ. ರಂಗಭೂಮಿ ಪ್ರತಿಭೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಮಲಯಾಳಂನಲ್ಲಿ ರಿಲೀಸ್ ಆಗಲು ರೆಡಿ ಆಗಿದೆ. ಇದರ ಜೊತೆಗೆ ತೆಲುಗಿನಲ್ಲೂ ಸಿನಿಮಾಗೆ ಬೇಡಿಕೆ ಬಂದಿದ್ದು, ನಾಲ್ಕೈದು ದೊಡ್ಡ ಸಂಸ್ಥೆಗಳು ಸಿನಿಮಾ ಹಕ್ಕು ಪಡೆಯಲು ಸ್ಪರ್ಧೆಗೆ ಇಳಿದಿವೆ.
ಈ ವಾರ ಮಲಯಾಳಂನಲ್ಲಿ
ಈ ವಾರ (ಆಗಸ್ಟ 1) ‘ಸು ಫ್ರಮ್ ಸೋ’ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಖ್ಯಾತ ಮಲಯಾಳಂ ಹೀರೋ ದುಲ್ಕುರ್ ಸಲ್ಮಾನ್ ಅವರು ಈ ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಲಯಾಳಂ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ರೆಡಿ ಆಗಿದೆ.
ತೆಲುಗಿಗೆ ಡಬ್, ತಮಿಳಿಗೆ ರಿಮೇಕ್
‘ಸು ಫ್ರಮ್ ಸೋ’ ಚಿತ್ರದ ತೆಲುಗು ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಬಂದಿದೆ. ಕೆಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರದ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಇಟ್ಟಿವೆ. ಈ ಪೈಕಿ ಯಾವ ನಿರ್ಮಾಣ ಸಂಸ್ಥೆಗೆ ಇದು ಫೈನಲ್ ಆಗಲಿದೆ ಎಂಬ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ. ಇನ್ನು, ಮುಂದಿನ ದಿನಗಳಲ್ಲಿ ಸಿನಿಮಾ ಹಿಂದಿ ಭಾಷೆಯಲ್ಲೂ ರಿಲೀಸ್ ಆದರೂ ಅಚ್ಚರಿ ಏನಿಲ್ಲ. ಇದಲ್ಲದೆ, ತಮಿಳಿನ ಕೆಲ ಸಂಸ್ಥೆಗಳು ಸಿನಿಮಾದ ರಿಮೇಕ್ ಹಕ್ಕಿಗೆ ಬೇಡಿಕೆ ಇಟ್ಟಿದೆ.
ವಾರದ ದಿನವೂ ಹೌಸ್ಫುಲ್
‘ಸು ಫ್ರಮ್ ಸೋ’ ಸಿನಿಮಾ ವಾರದ ದಿನವೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಭಾನುವಾರದಷ್ಟೇ ಗಳಿಕೆ, ಸೋಮವಾರವೂ ಆಗಿದೆ ಎಂಬುದು ವಿಶೇಷ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಚಿತ್ರದ ಒಟಿಟಿ ಹಾಗೂ ಸೆಟಲೈಟ್ ಹಕ್ಕುಗಳ ಖರೀದಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಕೆಲವು ತಿಂಗಳ ಬಳಿಕ ಸಿನಿಮಾನ ಒಟಿಟಿಯಲ್ಲಿ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: ಭಾನುವಾರಕ್ಕಿಂತ ಸೋಮವಾರ ಹೆಚ್ಚು ಗಳಿಸಿದ ‘ಸು ಫ್ರಮ್ ಸೋ’; ಕಲೆಕ್ಷನ್ನಲ್ಲಿ ರಾಜ್ ಬಿ. ಶೆಟ್ಟಿ ದಾಖಲೆ
ನಿರ್ದೇಶಕ ಹಾಗೂ ತಂಡದ ಬಗ್ಗೆ
ರಾಜ್ ಬಿ. ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. ತಲೆಯಲ್ಲಿ ಕೂದಲು ಇಲ್ಲ ಎಂಬ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಿ ಭೇಷ್ ಎನಿಸಿಕೊಂಡರು. ಆ ಬಳಿಕ ಅವರು ‘ಟೋಬಿ’, ‘ಗರುಡ ಗಮನ ವೃಷಭ ವಾಹನ’ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸು ಫ್ರಮ್ ಸೋ’ ಚಿತ್ರಕ್ಕೆ ಅವರು ನಿರ್ಮಾಪಕ ಹಾಗೂ ನಟ ಎರಡೂ ಹೌದು. ಈ ಚಿತ್ರವನ್ನು ಜೆಪಿ ತುಮಿನಾಡ ನಿರ್ದೇಶನ ಮಾಡಿದ್ದು, ನಿರ್ದೇಶನದಲ್ಲಿ ಅವರಿಗೆ ಇದು ಮೊದಲ ಅನುಭವ. ಈ ಸಿನಿಮಾ ತುಂಬಾನೇ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಯಾವುದೇ ಗ್ರಾಫಿಕ್ಸ್ ಬಳಕೆ ಆಗಿಲ್ಲ. ಚಿತ್ರದ ಸಂಭಾಷಣೆ ಇಲ್ಲಿ ಹೈಲೈಟ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:43 am, Tue, 29 July 25








