ದರ್ಶನ್ ಸಿನಿಮಾದ ಎದುರು ಸುದೀಪ್ ಸಿನಿಮಾ, ಶುರುವಾಯ್ತು ‘ಬಿಆರ್ಬಿ’
Kichcha Sudeep: ನಟ ಕಿಚ್ಚ ಸುದೀಪ್ ನಟನೆಯ ಕಳೆದ ಸಿನಿಮಾ ‘ಮ್ಯಾಕ್ಸ್’ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಸುದೀಪ್ ಹೊಸ ಸಿನಿಮಾ ಚಿತ್ರೀಕರಣ ಶುರು ಮಾಡಿದ್ದಾರೆ. ವಿಶೇಷವೆಂದರೆ ಸುದೀಪ್ ಹಾಗೂ ದರ್ಶನ್ ಅವರ ಸಿನಿಮಾಗಳು ಪರಸ್ಪರ ಎದುರು ಬದುರಾಗಿವೆ? ಅದು ಹೇಗೆ ಸಾಧ್ಯ? ಇಲ್ಲಿದೆ ನೋಡಿ ಮಾಹಿತಿ...

ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ ಭಾರಿ ದೊಡ್ಡ ಹಿಟ್ ಆಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸುದೀಪ್ ಅನೂಪ್ ಭಂಡಾರಿ ಜೊತೆಗೆ ಸಿನಿಮಾ ಘೋಷಿಸಿದ್ದರು. ಅದರಂತೆ ಈಗ ಭಂಡಾರಿ ಜೊತೆಗಿನ ಸಿನಿಮಾ ಸೆಟ್ಟೇರಿದೆ. ಅನುಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ ನಟ ಸುದೀಪ್.
ಈ ಕುರಿತ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸಿನಿಮಾದ ತಂತ್ರಜ್ಞರಿಗೆ ಇತರರಿಗೆ ಐಡಿ ಕಾರ್ಡ್ಗಳನ್ನು ನೀಡಿ, ಸೆಕ್ಯುರಿಟಿ ಚೆಕ್ ಮಾಡಿ ಸೆಟ್ನ ಒಳಕ್ಕೆ ಬಿಡಲಾಗುತ್ತಿದೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿರುವ ಸೆಟ್ನ ಮುಂದೆ ಸುದೀಪ್ ಹಾಗೂ ಅನುಪ್ ಭಂಡಾರಿಯ ದೊಡ್ಡ ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಅತ್ಯುತ್ತಮ ಕ್ಯಾಮೆರಾ ಉಪಕರಣಗಳನ್ನು ಬಳಸಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ, ಸುದೀಪ್ ಸಹ ಜತನದಿಂದ ಮೇಕಪ್ ಹಾಕಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಏಪ್ರಿಲ್ 22 ರಿಂದಲೇ ಕಂಠೀರವ ಸ್ಟುಡಿಯೋನಲ್ಲಿ ಶುರುವಾಗಿದೆ. ಸಿನಿಮಾಕ್ಕಾಗಿ ಭಾರಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ. ವಿಶೇಷವೆಂದರೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣವೂ ಸಹ ಕಂಠೀರವ ಸ್ಟುಡಿಯೋನಲ್ಲಿಯೇ ನಡೆಯುತ್ತಿದೆ. ಎದುರು ಬದುರು ಸೆಟ್ಗಳಲ್ಲಿಯೇ ದರ್ಶನ್ ಹಾಗೂ ಸುದೀಪ್ ಅವರ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿರುವುದು ವಿಶೇಷ.
ಇದನ್ನೂ ಓದಿ:ತೆಲುಗು ಸ್ಟಾರ್ ನಟನ ಸಿನಿಮಾಗೆ ಧ್ವನಿಯಾದ ಸುದೀಪ್ ಮಗಳು ಸಾನ್ವಿ
‘ಬಿಲ್ಲಾ ರಂಗ ಭಾಷಾ’ ಸಿನಿಮಾದ ನಿರ್ದೇಶನವನ್ನು ಅನೂಪ್ ಭಂಡಾರಿ ಮಾಡುತ್ತಿದ್ದಾರೆ. ಸುದೀಪ್ ಜೊತೆಗೆ ಇದು ಎರಡನೇ ಸಿನಿಮಾ ಅವರಿಗೆ. ಈ ಹಿಂದೆ ಅವರು ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶಿಸಿದ್ದರು. ‘ಬಿಲ್ಲಾ ರಂಗ ಭಾಷಾ’ ಸಿನಿಮಾವನ್ನು ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ನಾಯಕಿ ಯಾರೆಂದು ಅಧಿಕೃತ ಘೋಷಣೆ ಆಗಿಲ್ಲ, ಆದರೆ ಶ್ರೀನಿಧಿ ಶೆಟ್ಟಿ ನಾಯಕಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ಸಂಗೀತ ನಿರ್ದೇಶಕರು ಇನ್ನಿತರೆ ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ.
‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಬಳಿಕ ಸುದೀಪ್ ತಮಿಳಿನ ಚೇರನ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಹಿಂದೆ ಕೆಆರ್ಜಿ ನಿರ್ಮಾಣ ಸಂಸ್ಥೆಯ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದರು ಆದರೆ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Thu, 1 May 25




