ಟ್ರೇಲರ್​ನಿಂದ ಗಮನ ಸೆಳೆದ ‘ಫಿಸಿಕ್ಸ್​ ಟೀಚರ್​’ ಮೇ 27ಕ್ಕೆ ರಿಲೀಸ್​; ಹೊಸ ಹೀರೋ ಸುಮುಖ ಎಂಟ್ರಿಗೆ ವೇದಿಕೆ ರೆಡಿ

ಟ್ರೇಲರ್​ನಿಂದ ಗಮನ ಸೆಳೆದ ‘ಫಿಸಿಕ್ಸ್​ ಟೀಚರ್​’ ಮೇ 27ಕ್ಕೆ ರಿಲೀಸ್​; ಹೊಸ ಹೀರೋ ಸುಮುಖ ಎಂಟ್ರಿಗೆ ವೇದಿಕೆ ರೆಡಿ
ಪ್ರೇರಣಾ ಕಂಬಂ, ಸುಮುಖ

Physics Teacher Kannada Movie: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಆಯ್ಕೆಯಾಗಿ ‘ಫಿಸಿಕ್ಸ್​ ಟೀಚರ್​’ ಚಿತ್ರ ಪ್ರದರ್ಶನ ಕಂಡಿತ್ತು. ಈಗ ಥಿಯೇಟರ್​ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

TV9kannada Web Team

| Edited By: Madan Kumar

May 11, 2022 | 4:47 PM

ಕನ್ನಡ ಚಿತ್ರರಂಗದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ವಿಶೇಷ ಕಥಾಹಂದರದ ಮೂಲಕ ಕೆಲವು ಚಿತ್ರಗಳ ಟ್ರೇಲರ್​ಗಳು ಭಾರಿ ಕೌತುಕ ಮೂಡಿಸುತ್ತಿವೆ. ಆ ಪೈಕಿ ‘ಫಿಸಿಕ್ಸ್​ ಟೀಚರ್​’ (Physics Teacher Kannada Movie) ಸಿನಿಮಾ ಕೂಡ ಗಮನ ಸೆಳೆಯುತ್ತಿವೆ. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿದೆ. ವಿಜ್ಞಾನ ಮತ್ತು ತರ್ಕಕ್ಕೆ ನಿಲುಕದ ವಿಚಿತ್ರ ಸಂಗತಿಗಳನ್ನು ಇಟ್ಟುಕೊಂಡು ಈ ಸಿನಿಮಾ ಸಿದ್ಧವಾದಂತಿದೆ. ಈ ವಿಚಾರಗಳನ್ನು ಟ್ರೇಲರ್​ನಲ್ಲಿ ರಿವೀಲ್​ ಮಾಡಲಾಗಿದೆ. ಉಳಿದಂತೆ ಸಿನಿಮಾದ ಕಥೆ ಏನು ಎಂಬುದನ್ನು ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಹೋಗಬೇಕು. ಮೇ 27ರಂದು ‘ಫಿಸಿಕ್ಸ್​ ಟೀಸರ್​’ ಸಿನಿಮಾ ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ಹೊಸ ಹೀರೋ ಸುಮುಖ (Sumukha) ಮತ್ತು ಕಿರುತೆರೆಯ ಖ್ಯಾತ ನಟಿ ಪ್ರೇರಣಾ ಕಂಬಂ (Prerana Kambam) ಅವರು ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಶಶಿಕುಮಾರ್​ ಮತ್ತು ನಂದಿತಾ ಅವರ ಪುತ್ರ ಸುಮುಖ. ಈ ಸಿನಿಮಾ ಮೂಲಕ ಅವರು ಹೀರೋ​ ಆಗಿ ಎಂಟ್ರಿ ನೀಡುತ್ತಿದ್ದಾರೆ.

ಅನುಭವಿ ಕಲಾವಿದರಾದ ರಾಜೇಶ್​ ನಟರಂಗ, ಮಂಡ್ಯ ರಮೇಶ್​ ಮುಂತಾದವರು ‘ಫಿಸಿಕ್ಸ್ ಟೀಚರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಸುಮುಖ ಅವರೇ ನಿರ್ವಹಿಸಿದ್ದಾರೆ. ಹಾಗಾಗಿ ಅವರ ಪಾಲಿಗೆ ಈ ಸಿನಿಮಾ ಹೆಚ್ಚು ವಿಶೇಷವಾಗಿದೆ. ‘ಪಾಸಿಂಗ್​ ಶಾಟ್ಸ್​ ಫಿಲ್ಮ್ಸ್​’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಬಿಡುಗಡೆಗೂ ಮುನ್ನವೇ ‘ಫಿಸಿಕ್ಸ್​ ಟೀಚರ್​’ ಚಿತ್ರಕ್ಕೆ ಪ್ರಶಂಸೆ ಸಿಕ್ಕಿದೆ. ಹೌದು, ಈ ವರ್ಷ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಆಯ್ಕೆಯಾಗಿ ಈ ಚಿತ್ರ ಪ್ರದರ್ಶನ ಕಂಡಿತ್ತು. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಈ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಖ್ಯಾತ ವಿಮರ್ಶಕ ಮನು ಚಕ್ರವರ್ತಿ ಆಗಮಿಸಿದ್ದರು. ಅವರು ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ನಾನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿದೆ. ಸಾಮಾನ್ಯ ಸೂತ್ರಗಳನ್ನು ಹೊರತುಪಡಿಸಿದ್ದ ಸಿನಿಮಾ ಇದು. ಸುಮುಖ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಮಾಮೂಲಿ ಚಿತ್ರಗಳಿಗಿಂತ ಡಿಫರೆಂಟ್​ ಆಗಿರುವ ಈ ಚಿತ್ರವನ್ನು ಪ್ರೇಕ್ಷಕರು ನೋಡಿ ಹರಸಬೇಕು’ ಎಂದು ಮನು ಚಕ್ರವರ್ತಿ ಹೇಳಿದರು.

‘ಟ್ರೇಲರ್​ಗೆ ಸಿಕ್ಕಿರುವ ಪ್ರಶಂಸೆ ಕಂಡು ನಮಗೆ ಖುಷಿಯಾಗಿದೆ. ಬೇರೆಯದೇ ರೀತಿಯ ಸಿನಿಮಾ ಎಂದ ತಕ್ಷಣ ಆರ್ಟ್ ಸಿನಿಮಾ ತರಹವೂ ಅಲ್ಲ. ಸಾಕಷ್ಟು ಕಮರ್ಷಿಯಲ್ ಎಲಿಮೆಂಟ್ ಈ ಚಿತ್ರದಲ್ಲಿದೆ. ಎಲ್ಲಾ ನಟರ ಅಭಿನಯ ಚೆನ್ನಾಗಿದೆ’ ಎಂದು ಭರವಸೆ ನೀಡಿದ್ದಾರೆ ನಿರ್ದೇಶಕ ಕಮ್​ ನಟ ಸುಮುಖ. ‘ಬಿಡುಗಡೆಗೂ ಮುನ್ನವೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಈಗ ಟ್ರೇಲರ್ ಬಂದಿದೆ. ಒಂದು ಹಾಡು ಕೂಡ ಬಿಡುಗಡೆಯಾಗಲಿದೆ’ ಎಂದಿದ್ದಾರೆ ನಾಯಕಿ ಪ್ರೇರಣಾ ಕಂಬಂ.

‘ಸುಮುಖನನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಅವನ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಆತ ಉತ್ತಮ ನಿರ್ದೇಶಕ ಹೌದು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಆತ ಉತ್ತಮ ನಟ’ ಎಂಬುದು ರಾಜೇಶ್ ನಟರಂಗ ಅವರ ಮಾತುಗಳು. ರಘು ಗ್ಯಾರಹಳ್ಳಿ ಛಾಯಾಗ್ರಹಣ, ಸ್ಕಂದ ಸುಬ್ರಹ್ಮಣ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಅಜಯ್​ ಕುಮಾರ್​ ಸಂಕಲನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada