ಸೀರಿಯಲ್, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’ ಸಾಂಗ್
ನಟ ಶ್ರೀಮಹದೇವ್ ಅವರು ಇದೇ ಮೊದಲ ಬಾರಿಗೆ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ್ದಾರೆ. ‘ಪ್ರಣವ್ ಆಡಿಯೋ’ ಮೂಲಕ ಈ ಹಾಡು ರಿಲೀಸ್ ಆಗಿದೆ.
ನಟ ಶ್ರೀಮಹದೇವ್ (Shri Mahadev) ಅವರು ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ‘ಚಿಟ್ಟೆ ಹೆಜ್ಜೆ’, ‘ಶ್ರೀರಸ್ತು ಶುಭಮಸ್ತು’, ‘ಇಷ್ಟ ದೇವತೆ’ ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾಗಿದೆ. ಹಾಗಂತ ಅವರು ಕೇವಲ ಕಿರುತೆರೆಗೆ ಮಾತ್ರ ಸೀಮಿತ ಆಗಿಲ್ಲ. ಸಿನಿಮಾರಂಗದಲ್ಲೂ ನಟಿಸಿ ಪ್ರೇಕ್ಷಕರ ಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್ ಜೊತೆ ಅವರು ನಟಿಸಿದ್ದ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಶ್ರೀಮಹದೇವ್ ನಟನೆಯ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ನಡುವೆಯೇ ಅವರು ಇನ್ನೊಂದು ಹೊಸ ಪ್ರಯತ್ನ ಮಾಡಿದ್ದಾರೆ. ಹೊಸ ತಂಡದ ಜೊತೆ ಸೇರಿಕೊಂಡು ಒಂದು ಮ್ಯೂಸಿಕ್ ವಿಡಿಯೋ (ಆಲ್ಬಂ ಸಾಂಗ್) ಮಾಡಿದ್ದಾರೆ. ಇದಕ್ಕೆ ‘Saturday ನೈಟಲಿ’ (Saturday Nightly) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶ್ರೀಮಹದೇವ್ ಅವರು ಹೊಸ ಹುರುಪಿನೊಂದಿಗೆ ಕ್ಯಾಮೆರಾ ಎದುರಿಸಿದ್ದಾರೆ. ‘ಪ್ರಣವ್ ಆಡಿಯೋ’ (Pranav Audio) ಮೂಲಕ ಈ ಹಾಡು ಬಿಡುಗಡೆ ಆಗಿದೆ.
ಸಿನಿಮಾ ಗೀತೆಗಳು ಮಾತ್ರವಲ್ಲದೇ ಈ ರೀತಿ ಮ್ಯೂಸಿಕ್ ವಿಡಿಯೋಗಳು ಕೂಡ ಜನರನ್ನು ಭರಪೂರ ರಂಜಿಸುತ್ತವೆ. ಆ ಉದ್ದೇಶದಿಂದ ಅನೇಕ ಆಡಿಯೋ ಕಂಪನಿಗಳು ಕಾರ್ಯಾರಂಭ ಮಾಡುತ್ತಿವೆ. ಆ ಸಾಲಿಗೆ ‘ಸಂತೃಪ್ತಿ ಕಂಬೈನ್ಸ್’ ಅವರ ‘ಪ್ರಣವ್ ಆಡಿಯೋ’ ಕಂಪನಿ ಸಹ ಸೇರ್ಪಡೆ ಆಗಿವೆ. ಈ ಆಡಿಯೋ ಕಂಪನಿಯ ಮೊದಲ ಹೆಜ್ಜೆಯಾಗಿ ‘Saturday ನೈಟಲಿ’ ಹಾಡು ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಈ ಹಾಡಿನಲ್ಲಿ ಶ್ರೀ ಮಹದೇವ್ ಅವರಿಗೆ ಜೋಡಿಯಾಗಿ ಹೊಸ ನಟಿ ಪೂಜಾ ಅವರು ಹೆಜ್ಜೆ ಹಾಕಿದ್ದಾರೆ. ಶ್ರೀ ಮಹದೇವ್ ಅವರಿಂದ ಅನೇಕ ವಿಷಯಗಳನ್ನು ಕಲಿತಿರುವುದಾಗಿ ಪೂಜಾ ಹೇಳಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ, ನಾಗರಾಜ್ ಛಾಯಾಗ್ರಹಣ, ಶ್ರೇಯಸ್ ಭೈರವ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಈ ಗೀತೆಯನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ.
‘Saturday ನೈಟಲಿ’ ಹಾಡಿಗೆ ನಿರ್ದೇಶನ ಮಾಡಿರುವ ರವಿಕುಮಾರ್ ಸೇರಿದಂತೆ ಇದಕ್ಕಾಗಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಹೊಸಬರು. ಮುಂದೆ ಸಿನಿಮಾ ನಿರ್ದೇಶನ ಮಾಡುವ ಗುರಿಯನ್ನು ರವಿಕುಮಾರ್ ಇಟ್ಟುಕೊಂಡಿದ್ದಾರೆ. ಅದೇ ರೀತಿ ಸಿನಿಮಾ ನಿರ್ಮಾಪಕನಾಗುವ ಕನಸು ಸಿದ್ದಾರ್ಥ್ ಅವರಿಗೆ ಇದೆ. ಹವ್ಯಾಸಕ್ಕಾಗಿ ಹಾಡುಗಳಿಗೆ ಸಾಹಿತ್ಯ ಬರೆಯುವ ಅವರು ಈಗ ಮೊದಲ ಹಾಡನ್ನು ಹೊರತಂದಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ ಮತ್ತು ಚರ್ಚ್ ರಸ್ತೆಯಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ.
‘ವಿರೂಪಾಕ್ಷ ಅವರು ಹೊಸ ಆಡಿಯೋ ಕಂಪನಿ ಮಾಡಿದ್ದಕ್ಕೆ ಅಭಿನಂದನೆಗಳು. ಇದರಿಂದ ತಮ್ಮಂಥ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸಹಾಯ ಆಗುತ್ತದೆ. ನನ್ನ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡುಗಳನ್ನು ಕೂಡ ಉಮೇಶ್ ಬಣಕಾರ್ ಅವರು ಬಿಡುಗಡೆ ಮಾಡಿದ್ದರು. ಈಗ ಮತ್ತೆ ಅವರಿಂದ ನನ್ನ ಮೊದಲ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಈ ಹೊಸಬರ ತಂಡಕ್ಕೆ ತುಂಬ ಪ್ಯಾಷನ್ ಇದೆ ಎಂಬುದು ಗೊತ್ತಾಯಿತು. ಹಾಗಾಗಿ ಈ ಟೀಮ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡೆ. ಯಾವುದೇ ಕೆಲಸ ಒಬ್ಬರಿಂದ ಸಾಧ್ಯವಾಗಲ್ಲ. ಇಡೀ ಟೀಮ್ನಿಂದ ಇದೆಲ್ಲವೂ ಸಾಧ್ಯವಾಗಿದೆ. ಪ್ರೇಮ್ ಭರತ್ ಅವರ ಸಂಗೀತ ನನಗೆ ಇಷ್ಟ ಆಯಿತು. ನಾನು ಒಪ್ಪಿಕೊಳ್ಳಲು ಇದು ಕೂಡ ಒಂದು ಮುಖ್ಯ ಕಾರಣ’ ಎಂದಿದ್ದಾರೆ ಶ್ರೀ ಮಹದೇವ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.