71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮಾನ ಕಾಪಾಡಿದ ಕನ್ನಡದ ಕಿರುಚಿತ್ರ
71st National Film Awards: 71ನೇ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಈ ವರ್ಷ ಕನ್ನಡದ ಯಾವೊಂದು ಸಿನಿಮಾಕ್ಕೂ ಯಾವೊಂದು ವಿಭಾಗದಲ್ಲಿಯೂ ಪ್ರಶಸ್ತಿ ದೊರೆತಿಲ್ಲ. ಆದರೆ ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ಕಿರುಚಿತ್ರವೊಂದು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಿರುಚಿತ್ರದ ಹೆಸರು ‘ಸನ್ಫ್ರವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರಾಣಿ ಮುಖರ್ಜಿ ಅತ್ಯುತ್ತಮ ನಟಿ, ‘12 ಫೇಲ್’ ಅತ್ಯುತ್ತಮ ಸಿನಿಮಾ, ‘ದಿ ಕಶ್ಮೀರ್ ಫೈಲ್ಸ್’ನ ಸುದಿಪ್ತೋ ಸೇನ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಈ ಬಾರಿ ಹಿಂದಿ ಸಿನಿಮಾಗಳೇ ಹೆಚ್ಚಿನ ಪ್ರಶಸ್ತಿಗೆ ಆಯ್ಕೆ ಆಗಿವೆ. ಮಲಯಾಳಂ, ತಮಿಳು ಹಾಗೂ ತೆಲುಗಿನ ಕೆಲವು ಸಿನಿಮಾಗಳು ಸಹ ಪಟ್ಟಿಯಲ್ಲಿವೆ. ಆದರೆ ಕನ್ನಡದ ಒಂದೇ ಒಂದು ಸಿನಿಮಾಕ್ಕೂ ಪ್ರಶಸ್ತಿ ಲಭಿಸಿಲ್ಲ. ಆದರೆ ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ಕಿರುಚಿತ್ರವೊಂದು ಪ್ರಶಸ್ತಿಗೆ ಆಯ್ಕೆ ಆಗಿದೆ.
ಫೀಚರ್ ಫಿಲಂನ ಯಾವೊಂದು ವಿಭಾಗದಲ್ಲಿಯೂ ಕನ್ನಡದ ಯಾವೊಂದು ಸಿನಿಮಾಕ್ಕೂ ಪ್ರಶಸ್ತಿ ಲಭಿಸಿಲ್ಲ. ಪ್ರಾದೇಶಿಕ ವಿಭಾಗದಲ್ಲಿ ಕನ್ನಡದ ‘ಕಂದೀಲು’ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿದೆ. ಪ್ರಾದೇಶಿಕ ವಿಭಾಗವಾದ ಕಾರಣ ಆ ವಿಭಾಗದಲ್ಲಿ ಕನ್ನಡದ ಸಿನಿಮಾಗಳೇ ಪರಸ್ಪರ ಸ್ಪರ್ಧೆಯಲ್ಲಿದ್ದು, ಅವುಗಳಲ್ಲಿ ಉತ್ತಮವಾದ ‘ಕಂದೀಲು’ ಸಿನಿಮಾಕ್ಕೆ ಪ್ರಶಸ್ತಿ ದೊರೆತಿದೆ.
ಇದನ್ನೂ ಓದಿ:71st National Film Awards 2025: 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಇಲ್ಲಿದೆ ಆಯ್ಕೆಯಾದ ಎಲ್ಲ ಸಿನಿಮಾಗಳ ಪಟ್ಟಿ
ನಾನ್ ಫೀಚರ್ ವಿಭಾಗದಲ್ಲಿ ಚಿದಾನಂದ ನಾಯಕ್ ನಿರ್ದೇಶನ ಮಾಡಿರುವ ‘ಸನ್ಫ್ರವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಕಿರುಚಿತ್ರ ಅತ್ಯುತ್ತಮ ಚಿತ್ರಕತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಜನಪದ ಕತೆಯನ್ನು ಆಧರಿಸಿದ ಕಿರುಚಿತ್ರ ಇದಾಗಿದ್ದು, ಕಿರುಚಿತ್ರದ ಅವಧಿ 60 ನಿಮಿಷಗಳು, ಅತ್ಯುತ್ತಮ ಸಿನಿಮಾಟೊಗ್ರಫಿ ಮತ್ತು ಸೌಂಡ್ ಅನ್ನು ಈ ಕಿರುಚಿತ್ರ ಒಳಗೊಂಡಿದೆ. ಕಾನ್ ಫಿಲಂ ಫೆಸ್ಟ್ನಲ್ಲಿ ಈ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಈಗ ಈ ಸಿನಿಮಾ ಚಿತ್ರಕತೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ.
‘ಸನ್ಫ್ರವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಕಿರುಚಿತ್ರವನ್ನು ಎಫ್ಟಿಟಿಐ ನಿರ್ಮಾಣ ಮಾಡಿದೆ. ಚಿದಾನಂದ ನಾಯಕ್ ನಿರ್ದೇಶನ ಮಾಡಿದ್ದು, ಚಿತ್ರಕತೆಯೂ ಅವರದ್ದೆ. ಸೂರಜ್ ಠಾಕೂರ್ ಅವರು ಇದಕ್ಕೆ ಸಿನಿಮಾಟೊಗ್ರಫಿ ಮಾಡಿದ್ದಾರೆ. ಅಭಿಷೇಕ್ ಕದಮ್ ಸಂಗೀತ ನೀಡಿದ್ದಾರೆ. ಇದೊಂದು ಕನ್ನಡ ಕಿರುಚಿತ್ರವಾಗಿದ್ದು, ಈ ಬಾರಿಯ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಸಿನಿಮಾ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




