‘ಸಮೃದ್ಧಿ ರಂಗತಂಡ’ ಉದ್ಘಾಟಿಸಿದ ಬಿಗ್ ಬಾಸ್ ತನಿಷಾ, ಎನ್.ಎಂ. ಸುರೇಶ್
‘ಬಿಗ್ ಬಾಸ್ ಕನ್ನಡ’ ಶೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ತನಿಷಾ ಕುಪ್ಪಂಡ ಅವರು ಹಲವು ಕಾರ್ಯಕ್ರಮಗಳಿಗೆ ಮುಖ್ಯ ಅಥಿತಿಯಾಗಿ ತೆರಳುತ್ತಿದ್ದಾರೆ. ಈಗ ಅವರು ‘ಸಮೃದ್ಧಿ ರಂಗತಂಡ’ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ಅವರ ಜೊತೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಕೂಡ ಸಾಥ್ ನೀಡಿದ್ದಾರೆ. ಸಮೃದ್ಧಿ ರಂಗತಂಡದ ಬಗ್ಗೆ ಇಲ್ಲಿದೆ ಮಾಹಿತಿ..
ಬಣ್ಣದ ಲೋಕಕ್ಕೆ ಎಂಟ್ರಿ ನೀಡುವವರಿಗೆ ಸೂಕ್ತ ತರಬೇತಿ ಬೇಕು. ಅಂಥವರಿಗಾಗಿಯೇ ‘ಸಮೃದ್ಧಿ ರಂಗತಂಡ’ ಆರಂಭ ಆಗಿದೆ. ಈ ತರಬೇತಿ ಸಂಸ್ಥೆಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಸಿನಿಮಾ, ರಂಗಭೂಮಿ, ಕಿರುತೆರೆ ಕ್ಷೇತ್ರದಲ್ಲಿ ಕಲಾವಿದರು ಅಥವಾ ತಂತ್ರಜ್ಞರಾಗಲು ಬಯಸುವವರಿಗೆ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಆಸಕ್ತಿ ಇರುವವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಈ ಸಂಸ್ಥೆ ಆರಂಭ ಆಗಿದೆ. ತನಿಷಾ ಕುಪ್ಪಂಡ ಮತ್ತು ಎನ್.ಎಂ. ಸುರೇಶ್ ಅವರು ಚಾಲನೆ ನೀಡಿದರು.
ಚಂದನ್ ಬಿ. ಮತ್ತು ನೇತ್ರಾವತಿ ಚಂದನ್ ಅವರು ‘ಸಮೃದ್ಧಿ ರಂಗತಂಡ’ ತರಬೇತಿ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಬಾಣಾವರ, ಜಾಲಹಳ್ಳಿ, ಹೆಸರುಘಟ್ಟ, ಯಶವಂತಪುರ, ನೆಲಮಂಗಲ, ಮತ್ತೀಕೆರೆ ಭಾಗದಲ್ಲಿನ ಸಿನಿಮಾಸಕ್ತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಲ್ಲಿ ಅವರು ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಚಿಕ್ಕಬಾಣಾವರದ ಆಚಾರ್ಯ ಕಾಲೇಜ್ ರಸ್ತೆಯ ಶಾಂತಿನಗರ ಆರ್ಚ್ ಸಮೀಪ ಚಂದನ್ ಹಾಗೂ ನೇತ್ರಾವತಿ ಅವರು ‘ಸಮೃದ್ಧಿ ರಂಗತಂಡ’ವನ್ನು ಆರಂಭಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ತನಿಷಾ ಕುಪ್ಪಂಡ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ‘ಸಮೃದ್ಧಿ ರಂಗತಂಡ’ದ ಲೋಗೋ ಅನಾವರಣ ಮಾಡಿದರು. ‘ಕಲೆ ಕಲಿಯಿರಿ’ ಎನ್ನುವ ಘೋಷವಾಕ್ಯದೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ. ಸುರೇಶ್ ಅವರು ಈ ಸಂಸ್ಥೆಯ ವೆಬ್ಸೈಟ್ಗೆ ಚಾಲನೆ ನೀಡುವ ಮೂಲಕ ಶುಭ ಕೋರಿದರು.
ಇದನ್ನೂ ಓದಿ: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ತನಿಷಾ ಕುಪ್ಪಂಡ
ಚಂದನ್ ಬಿ. ಅವರು ‘ಸಮೃದ್ಧಿ ರಂಗತಂಡ’ ಬಗ್ಗೆ ಮಾಹಿತಿ ಹಂಚಿಕೊಂಡರು. ಸಿನಿಮಾ, ರಂಗಭೂಮಿ, ಅಭಿನಯ, ಎಡಿಟಿಂಗ್, ಫೋಟೋಗ್ರಫಿ ಮುಂತಾದ ವಿಭಾಗಗಳಲ್ಲಿ ತರಬೇತಿ ಸಿಗಲಿದೆ ಎಂದು ಅವರು ಹೇಳಿದರು. ‘ಚಂದನ್ ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಸಮೃದ್ದಿ, ಈ ಹೆಸರಲ್ಲೇ ಒಂದು ಬೆಳವಣಿಗೆ ಇದೆ. ಈ ಸಂಸ್ಥೆಯಿಂದ ಅನೇಕ ಪ್ರತಿಭಾವಂತರು ಹೊರಬರಲಿ’ ಎಂದು ತನಿಷಾ ಕುಪ್ಪಂಡ ವಿಶ್ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.