
ಉಡುಪಿಯ ಬೈಂದೂರು ಮೂಲದ ಯುವ ಪ್ರತಿಭೆ ಶ್ರೀಷ ಈಗ ‘ತರಂಗಾಂತರಂಗ’ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕರ್ನಾಟಕದ ಕಡಲ ತೀರದ ಅನೇಕ ಪ್ರತಿಭೆಗಳು ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ತಂತ್ರಜ್ಞರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಈಗ ಈ ಸಾಲಿಗೆ ಶ್ರೀಷ ಕೂಡ ಸೇರ್ಪಡೆ ಆಗುತ್ತಿದ್ದಾರೆ.
ಗ್ರಾಫಿಕ್ಸ್ ಡಿಸೈನರ್ ಆಗಿ ಹಾಗೂ ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವ ಇರುವ ಶ್ರೀಷ ಅವರು ‘ತರಂಗಾಂತರಂಗ’ ಚಿತ್ರದಲ್ಲಿ ಹೀರೋ ಮತ್ತು ಡೈರೆಕ್ಟರ್ ಆಗಿ ಎರಡು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣವಾಗಿವೆ. ಕೆಲವು ದಿನಗಳ ಹಿಂದಷ್ಟೇ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಈಗ ‘ತರಂಗಾಂತರಂಗ’ ಚಿತ್ರದ ಆಡಿಯೋ ಕೂಡ ಬಿಡುಗಡೆ ಆಗಿದೆ.
ಈ ಸಿನಿಮಾದ ‘ಟ್ರೈ ಮಾಡಿ..’ ಹಾಡು ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಮೂಡಿಬಂದಿದೆ. ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ಶ್ರೀಷ ಅವರು ಮಾತನಾಡಿದರು. ‘ಇದೊಂದು ಪುನರ್ಜನ್ಮದ ಕಥೆ ಹೊಂದಿರುವ ಸಿನಿಮಾ. ನಾವು ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ, ಅದರಿಂದ ಏನು ಆಗಬಹುದು ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಹಿಸ್ಟರಿ, ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ’ ಎಂದು ಅವರು ಹೇಳಿದರು.
ಖ್ಯಾತ ನಟ ಪ್ರಮೋದ್ ಶೆಟ್ಟಿ ಅವರು ‘ತರಂಗಾಂತರಂಗ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಶ್ರೀಷ ಅವರಿಗೆ ಚೆರಿಕಾ ಮೂರ್ತಿ ಹಾಗೂ ಯಶಸ್ವಿನಿ ಸ್ವಾಮಿ ಅವರು ನಾಯಕಿಯರಾಗಿ ನಟಿಸಿದ್ದಾರೆ. ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಮುರಳಿ, ಲಿಖಿತಾ ಶೆಟ್ಟಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಅಸಭ್ಯವಾಗಿ ನಟಿಯರ ಫೋಟೋ, ವಿಡಿಯೋ ತೆಗೆದಿದ್ದಕ್ಕೆ ಕನ್ನಡ ಚಿತ್ರರಂಗ ಗರಂ
‘ನಟ, ನಿರ್ದೇಶಕ ಶ್ರೀಷ ಹಾಗೂ ಅವರ ತಂಡದವರು ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾವು ಈ ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದು ‘ತರಂಗಾಂತರಂಗ’ ಚಿತ್ರದ ಕಲಾವಿದರು ಹೇಳಿದ್ದಾರೆ. ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಅವರ ಕೊನೆ ಸಿನಿಮಾ ಇದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.