ಕೋರ್ಟ್ ರೂಂ ಡ್ರಾಮಾನಲ್ಲಿ ಒಟ್ಟಿಗೆ ನಟಿಸಲಿರುವ ರವಿಚಂದ್ರನ್-ದಿಗಂತ್

|

Updated on: Apr 21, 2023 | 10:55 PM

The Judgement: ಕೋರ್ಟ್ ರೂಂನಲ್ಲಿ ನಡೆಯುವ ಥ್ರಿಲ್ಲರ್ ಕತೆಯನ್ನು ಒಳಗೊಂಡ ಹೊಸ ಸಿನಿಮಾ ದಿ ಜಡ್ಜ್​ಮೆಂಟ್​ನಲ್ಲಿ ರವಿಚಂದ್ರನ್ ಹಾಗೂ ದಿಗಂತ್ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಇಂದು ನೆರವೇರಿದೆ.

ಕೋರ್ಟ್ ರೂಂ ಡ್ರಾಮಾನಲ್ಲಿ ಒಟ್ಟಿಗೆ ನಟಿಸಲಿರುವ ರವಿಚಂದ್ರನ್-ದಿಗಂತ್
ದಿ ಜಡ್ಜ್​ಮೆಂಟ್ ಕನ್ನಡ ಸಿನಿಮಾ
Follow us on

ನಟ ರವಿಚಂದ್ರನ್ (Ravichandran), ದಿಗಂತ್ (Diganth) ಒಟ್ಟಿಗೆ ನಟಿಸುತ್ತಿರುವ ‘ದಿ ಜಡ್ಜ್​ಮೆಂಟ್’ (The Judgement) ಸಿನಿಮಾದ ಮುಹೂರ್ತ ಇಂದು ನಡೆದಿದೆ. ಈ ಹಿಂದೆ “ಆಕ್ಸಿಡೆಂಟ್”, ” ಲಾಸ್ಟ್‌ ಬಸ್” , “ಅಮೃತ ಅಪಾರ್ಟ್‌ಮೆಂಟ್ಸ್” ಚಿತ್ರಗಳನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಗುರುರಾಜ್ ಬಿ ಕುಲಕರ್ಣಿ ಅವರು ಈ ಸಿನಿಮಾವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಆಂಡ್ ಎಂಟರ್ಟೈನ್​ಮೆಂಟ್ ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಸಂಸ್ಥೆಯ ನಾಲ್ಕನೇ ಸಿನಿಮಾ ಇದಾಗಿದೆ.

ಹೆಸರೇ ಹೇಳುತ್ತಿರುವಂತೆ ಇದು ಕಾನೂನು, ನ್ಯಾಯಾಲಯ, ನ್ಯಾಯಾಧೀಶ, ವಕೀಲರನ್ನು ಕುರಿತಾದ ಸಿನಿಮಾ. ಚಿತ್ರೀಕರಣವು ಏಪ್ರಿಲ್ 24ರಿಂದ ಆರಂಭವಾಗಲಿದ್ದು, ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ (ನಾಡಗೌಡ) ಮಾಹಿತಿ ನೀಡಿದರು.

”ಈ ರೀತಿಯ ಜಾನರ್ ನನಗೆ ಹೊಸದು. ತಂಡವೂ ನನಗೆ ಹೊಸದು. ಹಾಗಾಗಿ ಇವರುಗಳೇ ನನ್ನನ್ನು ಈ ಸಿನಿಮಾ ಪಯಣದಲ್ಲಿ ಮುಂದೆ ಕರೆದುಕೊಂಡು ಹೋಗಬೇಕು ಎಂದರು. ಮುಂದುವರೆದು, ”ನಿರ್ದೇಶಕರು “ಆಕ್ಸಿಡೆಂಟ್” ಮಾಡಿ “ಲಾಸ್ಟ್ ಬಸ್” ಹತ್ತಿ “ಅಮೃತ ಅಪಾರ್ಟ್‌ಮೆಂಟ್ಸ್” ಗೆ ಹೋಗಿ ಈಗ “ಜಡ್ಜ್ ಮೆಂಟ್” ನೀಡಲು ಬಂದಿದ್ದಾರೆ. ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ. ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ಇದನ್ನೂ ಓದಿ: ಬೈದು ಕಳಿಸಿದರೂ ಡಾಲಿ ಧನಂಜಯ್ ಪ್ರಗತಿಯಲ್ಲಿ ರವಿಚಂದ್ರನ್​ಗೆ ವಿಶೇಷ ಸ್ಥಾನ

ನಾವೆಲ್ಲ ಸದ್ಯದಲ್ಲೇ ಮತ್ತೊಂದು “ಜಡ್ಜ್ ಮೆಂಟ್” ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ “ದ ಜಡ್ಜ್ ಮೆಂಟ್” ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಾಗಾಭರಣ ಹಾರೈಸಿದರು. ದಿಗಂತ್, ಧನ್ಯ, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ ಮುಂತಾದವರು “ದ ಜಡ್ಜ್ ಮೆಂಟ್” ಕುರಿತು ಮಾತನಾಡಿದರು. ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ‌.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ