ನಟ ಶಿವರಾಜ್‌ಕುಮಾರ್ (Shivarajkumar) ಅವರು ಇಂದು (ಮಾ.24) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದಾರೆ. ಬಳಿಕ ಕೆಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಜೇಮ್ಸ್ ಚಿತ್ರಕ್ಕೂ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ (James Movie) ಸಿನಿಮಾಗೆ ತೊಂದರೆಯಿಲ್ಲ’ ಎಂದು ಅವರು ಹೇಳಿದ್ದಾರೆ. ‘ನಾನು ರಾಜಕಾರಣಿಯಾಗಿ ಈ ಮಾತನ್ನು ಹೇಳುತ್ತಿಲ್ಲ. ಒಬ್ಬ ನಟನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕನ್ನಡ ಸಿನಿಮಾಗೆ ತೊಂದರೆ ಆದರೆ ನಾನು ಮುಂದಿರುತ್ತೇನೆ. ಒಳ್ಳೆಯ ಕಲೆಕ್ಷನ್ ಇದ್ದರೆ ಏಕೆ ಸಿನಿಮಾ ತೆಗೆಯಬೇಕು. ಸಮಸ್ಯೆ ಬಂದಾಗ ಹೋರಾಡಿ ಬಗೆಹರಿಸಿಕೊಳ್ಳಬೇಕಾಗಿದೆ. ನಮ್ಮ ಭಾಷೆ ವಿಚಾರ ಬಂದಾಗ ನಾವು ಮುಂದಿರಬೇಕು’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮಾ.17ರಂದು ತೆರೆಕಂಡಿತು. ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು ಎಂದು ವರದಿ ಆಗಿದೆ. ಇಂಥ ಚಿತ್ರಕ್ಕೆ ಬೇರೆ ಭಾಷೆಯ ಸಿನಿಮಾಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
‘ಅಭಿಮಾನಿಗಳು ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದಾರೆ. ಜೇಮ್ಸ್ ಸಿನಿಮಾಗೆ ಯಾವುದೇ ರೀತಿಯ ಸಮಸ್ಯೆಯಾಗಲ್ಲ. RRR ಚಿತ್ರವನ್ನು ಕನ್ನಡ ಭಾಷೆಯಲ್ಲಿ ರಿಲೀಸ್ ಮಾಡಲು ಹೇಳಿದ್ದೆ. ರಿಲೀಸ್ ಮಾಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ಅಭಿಮಾನಿಗಳು ಪ್ರತಿಭಟನೆ ಮಾಡುವುದಕ್ಕೆ ಹೋಗಬಾರದು’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಯಾರೂ ತೆಗೆಯುತ್ತಿಲ್ಲ. ಒಳ್ಳೆಯ ಸಿನಿಮಾ ನಡೆಯುತ್ತಿರುವಾಗ ಆ ಚಿತ್ರಕ್ಕೆ ನಾವು ಕೈ ಇಡಬಾರದು. ಅದು ಯಾವ ಭಾಷೆಯ ಸಿನಿಮಾ ಆಗಿದ್ದರೂ ಸರಿ. ಅಪ್ಪಾಜಿ-ಅಮ್ಮನಿಂದ ನಾವು ಕಲಿತ ಪಾಠ ಅದು. ಜೇಮ್ಸ್ ಬಗ್ಗೆ ಅಭಿಮಾನಿಗಳಿಗೆ ಎಮೋಷನ್ ಇದೆ. ಆರ್ಆರ್ಆರ್ ಒಂದು ದೊಡ್ಡ ಸಿನಿಮಾ. ಅಂಥ ಚಿತ್ರಕ್ಕೆ ಥಿಯೇಟರ್ನವರು ಸಪೋರ್ಟ್ ಮಾಡುವುದು ಸಹಜ’ ಎಂದು ಶಿವಣ್ಣ ಹೇಳಿದ್ದಾರೆ.
ಸಿಎಂ ಭೇಟಿಯ ಉದ್ದೇಶ ಏನು?
ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಜೊತೆ ಬಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ. ಭೇಟಿಯ ಉದ್ದೇಶದ ಬಗ್ಗೆ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ‘ಶಕ್ತಿಧಾಮದಲ್ಲಿ ಒಂದು ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಆಹ್ವಾನ ನೀಡಲು ಬಂದಿದ್ದರು. ಅದನ್ನು ಒಪ್ಪಿಕೊಂಡಿದ್ದೇನೆ. ಅಲ್ಲಿನ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ತಿಂಗಳು ಶಕ್ತಿಧಾಮದ ಅನೇಕ ಕಟ್ಟಡಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಆಗಲಿದೆ. ಜೇಮ್ಸ್ ಸಿನಿಮಾ ಬಗ್ಗೆ ವಿಶೇಷ ಚರ್ಚೆ ಆಗಿಲ್ಲ. ಚಿತ್ರದ ನಿರ್ಮಾಪಕರು ಬಂದಿದ್ದರು. ಏನೇ ತೊಂದರೆ ಎದುರಾಗಿದ್ದರೂ ಫಿಲ್ಮ್ ಚೇಂಬರ್ ಗಮನಕ್ಕೆ ತನ್ನಿ ಅಂತ ಹೇಳಿದ್ದೇನೆ. ಈಗಾಗಲೇ ನಾನು ಫಿಲ್ಮ್ ಚೇಂಬರ್ನವರ ಜೊತೆ ಮಾತನಾಡಿದ್ದೇನೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ:
‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್ ಅತಿರೇಕಕ್ಕೆ ಶಿವರಾಜ್‌ಕುಮಾರ್ ಗರಂ
‘ದಿ ಕಾಶ್ಮೀರ್ ಫೈಲ್ಸ್’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
Published On - 11:31 am, Thu, 24 March 22