ಒಂದೆಡೆ ಕೊರೊನಾ ವೈರಸ್ ಹರಡುವ ಭೀತಿ, ಇನ್ನೊಂದೆಡೆ ಲಾಕ್ಡೌನ್ ಆದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ. ಈ ಎಲ್ಲದರ ನಡುವೆ ಕಳ್ಳರ ಕಾಟ ! ಹೌದು, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಕಿರಣ್ ತೊಟಂಬೈಲು ಅವರ ಸ್ಟುಡಿಯೋದಲ್ಲಿ ಕಳ್ಳತನ ಆಗಿದೆ. ಅಂದಾಜು 35 ಲಕ್ಷ ರೂ. ಮೌಲ್ಯದ ಸಂಗೀತ ಉಪಕರಣಗಳನ್ನು ಖದೀಮರು ಹೊತ್ತುಕೊಂಡು ಹೋಗಿದ್ದಾರೆ.
ಉಪೇಂದ್ರ ನಟನೆಯ ‘ಐ ಲವ್ ಯೂ’ ಸಿನಿಮಾ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕಿರಣ್ ತೊಟಂಬೈಲ್ ಅವರು ಜನಪ್ರಿಯರಾದರು. ಮೂಲತಃ ಅವರು ವೈದ್ಯರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದಾಗ ಕಿರಣ್ ಅವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದರು. ಆದರೆ ಈಗ ಅವರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವಂತಾಗಿರುವುದು ವಿಪರ್ಯಾಸ.
ತಲಘಟ್ಟಪುರ ಠಾಣಾ ವ್ಯಾಪ್ತಿ ಕರಿಯಣ್ಣನ ಪಾಳ್ಯದಲ್ಲಿ ಘಟನೆ ನಡೆದಿದೆ. ‘ಐ ಲವ್ ಯೂ’ ಸಿನಿಮಾದ ಯಶಸ್ಸಿನ ನಂತರ ಸ್ವಂತ ಸ್ಡುಡಿಯೋ ನಿರ್ಮಾಣಕ್ಕೆ ಕಿರಣ್ ಕೈ ಹಾಕಿದ್ದರು. ಇನ್ನೇನು ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದವು. ಸಿಸಿಟಿವಿ ಅಳವಡಿಸುವ ಕಾರ್ಯ ಬಾಕಿ ಇತ್ತು. ಅಷ್ಟರಲ್ಲಾಗಲೇ ಕಳ್ಳರು ಕರಾಮತ್ತು ತೋರಿಸಿದ್ದಾರೆ.
ಆರ್. ಚಂದ್ರು ನಿರ್ದೇಶನದ, ಉಪೇಂದ್ರ-ರಚಿತಾ ರಾಮ್ ನಟನೆಯ ‘ಐ ಲವ್ ಯೂ’ ಸಿನಿಮಾದಲ್ಲಿನ ‘ಮಾತನಾಡಿ ಮಾಯವಾದೆ…’ ಹಾಡು ಸಖತ್ ವೈರಲ್ ಆಗಿತ್ತು. ಆ ಸಿನಿಮಾದಲ್ಲಿ ಸಿಕ್ಕ ಜನಪ್ರಿಯತೆಯಿಂದಾಗಿ ಕಿರಣ್ಗೆ ಇನ್ನಷ್ಟು ಅವಕಾಶಗಳು ಹರಿದುಬಂದವು. ‘ಒಲವೇ ಮಂದಾರ 2’, ‘ಮೊದಲ ಮಿಡಿತ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕಿರಣ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ಟುಡಿಯೋಗೆ ಕಳ್ಳರು ಕನ್ನ ಆಗಿರುವುದು ಬೇಸರದ ಸಂಗತಿ.
ಇದನ್ನೂ ಓದಿ: ಮಂಡ್ಯ: ಕಾಶಿವಿಶ್ವನಾಥ ದೇವಾಲಯದ ಬೀಗ ಮುರಿದು ಶಿವಲಿಂಗ ಕಳ್ಳತನ