ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ (Rockline Venkatesh) ಸೋದರ ಭ್ರಮರೇಶ್ ಅವರ ಮನೆಯಲ್ಲಿ 5 ಕೆಜಿ ಚಿನ್ನ ಕಳ್ಳತನ (Theft) ಆಗಿದೆ. ಚಿನ್ನದ ಜೊತೆಗೆ 6 ಲಕ್ಷ ನಗದು ಕಳ್ಳತನವಾಗಿರುವ ಬಗ್ಗೆ ದೂರು ನೀಡಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ನಿವಾಸದಲ್ಲಿ ಕಳ್ಳತನ ನಡೆದಿದೆ. ರಾಕ್ಲೈನ್ ವೆಂಕಟೇಶ್ ಅವರ ಕುಟುಂಬದವರು ಇತ್ತೀಚೆಗೆ ಯೂರೋಪ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಭಾನುವಾರ (ಅಕ್ಟೋಬರ್ 30) ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ (Mahalakshmi Layout Police) ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ರಾಕ್ಲೈನ್ ವೆಂಕಟೇಶ್ ಅವರ ಸಹೋದರನ ಕುಟುಂಬದವರು ದೂರು ನೀಡಿದ ಬಳಿಕ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮನೆಯ ಸದಸ್ಯರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ರಾಕ್ಲೈನ್ ವೆಂಕಟೇಶ್ ಮನೆ ಪರಿಶೋಧಿಸಿದ ಅಧಿಕಾರಿಗಳು ಹೇಳಿದ್ದು ಹೀಗೆ
ಇತ್ತೀಚೆಗೆ ಹುಲಿ ಉಗುರು ಕೇಸ್ನಲ್ಲಿ ರಾಕ್ಲೈನ್ ವೆಂಕಟೇಶ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿದ್ದ ಆರೋಪದ ಮೇಲೆ ಅರೆಸ್ಟ್ ಆದ ಬಳಿಕ ಇನ್ನುಳಿದ ಸೆಲೆಬ್ರಿಟಿಗಳ ಫೋಟೋ ಕೂಡ ವೈರಲ್ ಆಗಿತ್ತು. ರಾಕ್ಲೈನ್ ವೆಂಕಟೇಶ್ ಸಹ ಹುಲಿ ಉಗುರು ಧರಿಸಿದ್ದರಿಂದ ಅವರಿಗೂ ಅರಣ್ಯಾಧಿಕಾರಿಗಳು ನೋಟಿಸ್ ನೀಡಿ, ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಭೇಟಿ ನೀಡಿದ್ದಾಗ ವೆಂಕಟೇಶ್ ಅವರು ವಿದೇಶಕ್ಕೆ ತೆರಳಿದ್ದರು. ಅವರ ಅನುಪಸ್ಥಿತಿಯಲ್ಲೇ ಮನೆಯಲ್ಲಿ ಶೋಧ ಮಾಡಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡ್ತಿದ್ದ ಆರೋಪಿ ಬಂಧನ; 8 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
‘ಮೇಲಾಧಿಕಾರಿಗಳ ಆದೇಶದ ಮೇರೆಗೆ ರಾಕ್ಲೈನ್ ವೆಂಕಟೇಶ್ ಅವರ ಮನೆಯನ್ನು ಪೂರ್ತಿಯಾಗಿ ಪರಿಶೀಲಿಸಿದ್ದೇವೆ. ಇದಕ್ಕೆ ಅವರ ಪುತ್ರ ಸ್ಪಂದಿಸಿದ್ದಾರೆ. ಎಲ್ಲ ಲಾಕರ್ಗಳನ್ನು ತೆಗೆದು ತೋರಿಸಿದ್ದಾರೆ. ವನ್ಯಜೀವಿಗೆ ಸಂಬಂಧಿಸಿದ ಯಾವುದೇ ವಸ್ತು ಪತ್ತೆ ಆಗಿಲ್ಲ. ರಾಕ್ಲೈನ್ ವೆಂಕಟೇಶ್ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಿದ್ದೇವೆ. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:07 pm, Mon, 30 October 23