ಉತ್ತರ ಭಾರತದಿಂದ ಬಂದರೂ ಕನ್ನಡದ ಮೇಲೆ ನಟಿ ಶಾನ್ವಿ ಶ್ರೀವಾಸ್ತವ ತೋರಿದ ಪ್ರೀತಿ ಅಪಾರ
Kannada Rajyotsava 2023: ಶಾನ್ವಿ ಶ್ರೀವಾಸ್ತವ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಲು ಆರಂಭಿಸಿ 9 ವರ್ಷ ಕಳೆದಿದೆ. ಆರಂಭದಲ್ಲಿ ಅವರಿಗೆ ಕನ್ನಡ ಕಲಿಯುವುದು ಕಷ್ಟವಾಯಿತು. ಆದರೆ ಅವರು ಪ್ರಯತ್ನ ಬಿಡಲಿಲ್ಲ. ಸಾಧ್ಯವಾದಷ್ಟು ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದರು. ಅದರ ಫಲವಾಗಿ ತುಂಬ ಚೆನ್ನಾಗಿ ಕನ್ನಡ ಮಾತನಾಡಲು ಅವರಿಗೆ ಸಾಧ್ಯವಾಗಿದೆ.
ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವದ (Kannada Rajyotsava) ಕಂಪು ಪಸರಿಸುತ್ತಿದೆ. ಕರುನಾಡಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಕಡೆಗಳಲ್ಲಿ ಇರುವ ಕನ್ನಡಿಗರು ನವೆಂಬರ್ ಪೂರ್ತಿ ಈ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಬೇರೆ ರಾಜ್ಯದಿಂದ ಬಂದು ಕನ್ನಡ (Kannada Language) ಕಲಿತು, ಈ ಭಾಷೆಯ ಮೇಲೆ ಅಭಿಮಾನ ತೋರಿದ ಅನೇಕ ಸೆಲೆಬ್ರಿಟಿಗಳು ನಮ್ಮಲ್ಲಿದ್ದಾರೆ. ಐಂದ್ರಿತಾ ರೇ, ಪ್ರಿಯಾಂಕಾ ಉಪೇಂದ್ರ, ಪೂಜಾ ಗಾಂಧಿ, ರಾಗಿಣಿ ದ್ವಿವೇದಿ, ಶಾನ್ವಿ ಶ್ರೀವಾಸ್ತವ.. ಹೀಗೆ ಸಾಗುತ್ತದೆ ಪಟ್ಟಿ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನಟಿಯರೇ ಪರಭಾಷೆಯ ವ್ಯಾಮೋಹಕ್ಕೆ ಸಿಲುಕುತ್ತಾರೆ. ಅಂಥದ್ದರಲ್ಲಿ ಪರಭಾಷೆಯ ನಟಿಯರು ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದು ಶ್ಲಾಘನೀಯ. ಕರುನಾಡಿನ ಮಣ್ಣಿನಲ್ಲಿ ಜೀವನ ಕಟ್ಟಿಕೊಳ್ಳಲು ಬಂದ ಶಾನ್ವಿ ಶ್ರೀವಾಸ್ತವ (Shanvi Srivastava) ಅವರು ಈ ನೆಲದ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಸಾಧ್ಯವಾದ ಎಲ್ಲ ಸಂದರ್ಭದಲ್ಲೂ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ.
ಶಾನ್ವಿ ಶ್ರೀವಾಸ್ತವ ಅವರು ಉತ್ತರ ಭಾರತದವರು. ಅವರು ಹುಟ್ಟಿದ್ದು ವಾರಾಣಸಿಯಲ್ಲಿ. ಅವರ ಮಾತೃಭಾಷೆ ಹಿಂದಿ. ಕಾಲೇಜು ಶಿಕ್ಷಣವನ್ನು ಅವರು ಮುಂಬೈನಲ್ಲಿ ಪಡೆದರು. ಹಾಗಾಗಿ ಅವರಿಗೆ ಹಿಂದಿ ತುಂಬ ಚೆನ್ನಾಗಿ ಬರುತ್ತದೆ. ಶಾನ್ವಿ ಅವರು ಮೊದಲು ನಟಿಸಿದ್ದು ತೆಲುಗು ಸಿನಿಮಾದಲ್ಲಿ. ಆದರೆ ಅವರಿಗೆ ಭವಿಷ್ಯ ಸಿಕ್ಕಿದ್ದು ಕನ್ನಡ ಚಿತ್ರರಂಗದಲ್ಲಿ. ಕನ್ನಡಿಗರು ಈ ನಟಿಯನ್ನು ತುಂಬ ಇಷ್ಟಪಟ್ಟರು. ಅದಕ್ಕೆ ಪ್ರತಿಯಾಗಿ ಶ್ವಾನ್ವಿ ಕೂಡ ಈ ಭಾಷೆಯನ್ನು ಪ್ರೀತಿಸಿದರು. ನಿಧಾನವಾದರೂ ಪರವಾಗಿಲ್ಲ.. ಕನ್ನಡ ಕಲಿಯುವ ಅವರ ಪ್ರಯತ್ನ ಮೆಚ್ಚುವಂಥದ್ದು.
ಸಂಪೂರ್ಣ ಹೊರಗಿನಿಂದ ಬಂದವರಿಗೆ ಆರಂಭದಲ್ಲಿ ಕನ್ನಡ ಕಷ್ಟ ಅನಿಸುವುದು ಸಹಜ. ಶಾನ್ವಿ ಅವರಿಗೂ ಕನ್ನಡದ ಪದಗಳ ಪರಿಚಯ ಇರಲೇ ಇಲ್ಲ. ಸಿನಿಮಾಗಳನ್ನು ಮಾಡುತ್ತಾ ಅವರು ಕನ್ನಡ ಕಲಿಯುವ ಆಸಕ್ತಿ ಬೆಳೆಸಿಕೊಂಡರು. ತಾವು ಬದುಕು ಕಟ್ಟಿಕೊಂಡ ರಾಜ್ಯದ ಭಾಷೆಗೆ ಗೌರವ ನೀಡುವುದು ಮೊದಲ ಕರ್ತವ್ಯ. ಅದನ್ನು ಶಾನ್ವಿ ಶ್ರೀವಾಸ್ತವ ಅವರು ಚೆನ್ನಾಗಿ ನಿಭಾಯಿಸಿದರು. ಕನ್ನಡಿಗರು ಜೊತೆಗಿದ್ದಾಗ ಸಾಧ್ಯವಾದಷ್ಟು ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದರು. ಸುದ್ದಿಗೋಷ್ಠಿಗಳಲ್ಲಿ, ಸಂದರ್ಶನಗಳಲ್ಲಿ ಕನ್ನಡವನ್ನೇ ಬಳಸಲು ಆರಂಭಿಸಿದರು. ಅವರ ಈ ಗುಣ ಎಲ್ಲರಿಗೂ ಇಷ್ಟ ಆಯಿತು.
ಇದನ್ನೂ ಓದಿ: Kannada Rajyotsava Essay: ಕನ್ನಡ ರಾಜ್ಯೋತ್ಸವಕ್ಕೆ ಪ್ರಬಂಧ ಬರೆಯಲು ಇಲ್ಲಿದೆ ಟಿಪ್ಸ್
ಹೊಸದಾಗಿ ಭಾಷೆ ಕಲಿಯುವಾಗ ತಪ್ಪುಗಳು ಆಗುವುದು ಸಹಜ. ಯಾವುದೋ ಪದದ ಬದಲು ಇನ್ಯಾವುದೋ ಪದ ಬಳಸಿದರೆ ಕೆಲವೊಮ್ಮೆ ನಗೆಪಾಟಲಿಗೆ ಒಳಗಾಗುವುದು ಕೂಡ ಸಹಜ. ಆದರೆ ಕಲಿಯಬೇಕು ಎಂಬ ಹಂಬಲ ದೊಡ್ಡದಾಗಿದ್ದರೆ ಆ ಹಿಂಜರಿಕೆ ಅಡ್ಡ ಬರುವುದಿಲ್ಲ. ಕನ್ನಡ ಕಲಿಕೆಯ ವಿಚಾರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಯಾವಾಗಲೂ ಉತ್ಸಾಹ ತೋರಿಸುತ್ತಾರೆ. ತಮ್ಮ ಸಿನಿಮಾಗೆ ತಾವೇ ಡಬ್ ಮಾಡುವ ಮಟ್ಟಕ್ಕೆ ಅವರು ಕನ್ನಡ ಕಲಿತಿದ್ದಾರೆ. ಕನ್ನಡಕ್ಕೂ ಹಿಂದಿಗೂ ಸಾಕಷ್ಟು ವ್ಯತ್ಯಾಸ ಇದೆ. ಲಿಪಿ ಕೂಡ ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಕೂಡ ಶಾನ್ವಿ ಅವರು ಆಸಕ್ತಿ ತೋರಿಸಿದ ಪರಿಣಾಮವಾಗಿ ಅವರು ತುಂಬ ಚೆನ್ನಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ. ಕಲಿಕೆ ಇಂದಿಗೂ ಮುಂದುವರಿಯುತ್ತಲೇ ಇದೆ.
ಇದನ್ನೂ ಓದಿ: ಡಾನ್ ಆದ್ರೂ ಶಾನ್ವಿ ಶ್ರೀವಾಸ್ತವ ಎಷ್ಟು ಕ್ಯೂಟ್ ನೋಡಿ; ಇಲ್ಲಿದೆ ಗ್ಯಾಲರಿ
ಶಾನ್ವಿ ಶ್ರೀವಾಸ್ತವ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಲು ಆರಂಭಿಸಿ 9 ವರ್ಷ ಕಳೆದಿದೆ. ‘ಚಂದ್ರಲೇಖಾ’ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಜೊತೆ, ‘ಮಾಸ್ಟರ್ ಪೀಸ್’ ಚಿತ್ರದಲ್ಲಿ ಯಶ್ ಜೊತೆ, ‘ಸುಂದರಾಂಗ ಜಾಣ’, ‘ಗೀತಾ’ ಸಿನಿಮಾಗಳಲ್ಲಿ ಗಣೇಶ್ ಜೊತೆ, ‘ತಾರಕ್’ ಚಿತ್ರದಲ್ಲಿ ದರ್ಶನ್ ಜೊತೆ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಪ್ರತಿ ಸಿನಿಮಾದಿಂದ ಸಿನಿಮಾಗೆ ಅವರ ಕನ್ನಡ ಸುಧಾರಿಸುತಾ ಬಂತು. ಈ 9 ವರ್ಷಗಳಲ್ಲಿ ಅವರು ಶೇಕಡ 100ರಷ್ಟು ಕನ್ನಡ ಕಲಿತಿದ್ದಾರೆ ಎಂದು ಹೇಳಲು ಆಗದೇ ಇರಬಹುದು. ಆದರೆ ಅವರ ಪ್ರಯತ್ನ ನಿಂತಿಲ್ಲ. ‘ನಾನು ಬೇರೆ ಕಡೆಯಿಂದ ಬಂದವಳು ನಿಜ. ಆದರೆ ನಾನು ಕನ್ನಡ ಚಿತ್ರರಂಗಕ್ಕೆ ಸೇರಿದವಳು. ನನ್ನ ವ್ಯಕ್ತಿತ್ವ ಬಲವಾಗಿದ್ದೇ ಈ ಚಿತ್ರರಂಗದಲ್ಲಿ’ ಎಂದು ಸಂದರ್ಶನಗಳಲ್ಲಿ ಶಾನ್ವಿ ಹೇಳಿದ್ದುಂಟು.
ಇದನ್ನೂ ಓದಿ: ‘11 ವರ್ಷಗಳ ಹಿಂದೆ ಹೀಗಿರಲಿಲ್ಲ, ನನ್ನ ಬಗ್ಗೆ ಹೆಮ್ಮೆ ಇದೆ’; ಶಾನ್ವಿ ಶ್ರೀವಾಸ್ತವ
ದಿನದಿಂದ ದಿನಕ್ಕೆ ಶಾನ್ವಿ ಶ್ರೀವಾಸ್ತವ ಅವರ ಕನ್ನಡ ಸುಧಾರಿಸುತ್ತಿದೆ. ಅವರ ವ್ಯಕ್ತಿತ್ವದ ಮೇಲೆ ಈ ಭಾಷೆಯ ಪ್ರಭಾವ ಹೆಚ್ಚುತ್ತಿದೆ. ಈಗ ಅವರ ಮಾತನಾಡುವ ಇಂಗ್ಲಿಷ್ ಉಚ್ಛಾರಣೆಯಲ್ಲೂ ದಕ್ಷಿಣ ಭಾರತದ ಭಾಷೆಯ ಪ್ರಭಾವ ಕಾಣಬಹುದು. ಅಷ್ಟರಮಟ್ಟಿಗೆ ಅವರು ಕನ್ನಡಕ್ಕೆ ಒಗ್ಗಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಸಿಕ್ಕಿದೆ ಎಂಬ ಒಂದೇ ಕಾರಣಕ್ಕೆ ಶಾನ್ವಿ ಶ್ರೀವಾಸ್ತವ ಅವರು ಕನ್ನಡ ಕಲಿತಿದ್ದಲ್ಲ. ಇನ್ನೊಂದು ಮುಖ್ಯ ಕಾರಣ ಎಂದರೆ ಇಲ್ಲಿನ ಜನರ ಪ್ರೀತಿ ಮತ್ತು ಅಭಿಮಾನ. ಯಾವುದೋ ಬೇರೆ ರಾಜ್ಯದಿಂದ ಬಂದ ನಟಿ ಕನ್ನಡ ಕಲಿತು ಮಾತನಾಡುತ್ತಾರೆ ಎಂದಾಗ ಕನ್ನಡಿಗರು ಅಪಾರವಾದ ಗೌರವ ನೀಡುತ್ತಾರೆ. ಅದು ಶಾನ್ವಿಗೆ ಸಖತ್ ಇಷ್ಟ ಆಗಿದೆ. ಈ ಪ್ರೀತಿ ಮತ್ತು ಪ್ರೋತ್ಸಾಹವೇ ಅವರಿಗೆ ಇನ್ನೂ ಹೆಚ್ಚು ಕಲಿಯುವ ಪ್ರೇರಣೆ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.