ಸಿನಿಮಾ ನಿರ್ಮಾಣದಲ್ಲಿ ವಸ್ತ್ರ ವಿನ್ಯಾಸಕ್ಕೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಪ್ರತಿ ಚಿತ್ರದಲ್ಲೂ ಹೀರೋ-ಹೀರೋಯಿನ್ ಮತ್ತು ಇತರೆ ಪೋಷಕ ಕಲಾವಿದರು ಡಿಫರೆಂಟ್ ಆಗಿ ಕಾಣಬೇಕು ಎಂಬ ಕಾರಣಕ್ಕೆ ಬಗೆಬಗೆಯ ಉಡುಗೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಾಹುಬಲಿ, ದೇವದಾಸ್, ಜೋಧಾ ಅಕ್ಬರ್ ರೀತಿಯ ಹೈಬಜೆಟ್ ಸಿನಿಮಾಗಳ ಕಾಸ್ಟ್ಯೂಮ್ಗಾಗಿ ಕೋಟಿ ರೂ. ಬಜೆಟ್ ಮೀಸಲಾಗಿರುತ್ತದೆ. ಆದರೆ ಒಮ್ಮೆ ಶೂಟಿಂಗ್ ಮುಗಿದ ಬಳಿಕ ಅವು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಜನಸಾಮಾನ್ಯರ ಮನದಲ್ಲಿ ಮೂಡುವುದು ಸಹಜ.
ಕಾಸ್ಟ್ಯೂಮ್ಗಳ ಮರುಬಳಕೆ ಮಂತ್ರ
ದುಬಾರಿ ಹಣ ಖರ್ಚು ಮಾಡಿ ಸಿನಿಮಾದ ಕಲಾವಿದರಿಗೆ ಕಾಸ್ಟ್ಯೂಮ್ ಸಿದ್ಧಪಡಿಸಲಾಗುತ್ತದೆ. ಒಂದು ಸಿನಿಮಾದ ಶೂಟಿಂಗ್ ಮುಗಿದ ಮೇಲೆ ಆ ಬಟ್ಟೆಗಳನ್ನು ಸಿನಿಮಾ ನಿರ್ಮಾಣ ಸಂಸ್ಥೆಯು ತನ್ನ ಬಳಿಯೇ ಇಟ್ಟುಕೊಳ್ಳುತ್ತದೆ. ಹಾಗೆ ಸಂಗ್ರಹಿಸಿ ಇಟ್ಟುಕೊಂಡು ಕಾಸ್ಟ್ಯೂಮ್ಗಳನ್ನು ಸಂದರ್ಭಕ್ಕೆ ತಕ್ಕಂತೆ ಮರುಬಳಕೆ ಮಾಡಲಾಗುತ್ತದೆ. ಅದೇ ನಿರ್ಮಾಪಕರ ಬೇರೆ ಸಿನಿಮಾಗಳಲ್ಲಿ ಮುಖ್ಯವಲ್ಲದ ಪಾತ್ರಗಳಿಗೆ ಆ ಬಟ್ಟೆಗಳನ್ನು ನೀಡಲಾಗುತ್ತದೆ. ಹಾಗಂತ ಯಥಾವತ್ತು ಅದೇ ಬಟ್ಟೆಯನ್ನು ಬಳಸುವುದಿಲ್ಲ. ಬದಲಿಗೆ, ಅದಕ್ಕೆ ಹೊಸ ವಿನ್ಯಾಸದ ಸ್ಪರ್ಶ ನೀಡುವುದರಿಂದ ಅದು ಈ ಹಿಂದೆ ಯಾವುದೋ ಸಿನಿಮಾದಲ್ಲಿ ಬಳಕೆ ಆದ ಕಾಸ್ಟ್ಯೂಮ್ ಎಂಬುದು ಪ್ರೇಕ್ಷಕರಿಗೆ ಗೊತ್ತಾಗುವುದು ಕೂಡ ಇಲ್ಲ.
ಮನೆಗೆ ತೆಗೆದುಕೊಂಡು ಹೋಗ್ತಾರೆ ತಾರೆಯರು!
ಶೂಟಿಂಗ್ ಮುಗಿದ ಬಳಿಕ ಕೆಲವು ಕಾಸ್ಟ್ಯೂಮ್ಗಳನ್ನು ನಟ-ನಟಿಯರು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಚ್ಚರಿ ಎನಿಸಿದರೂ ಇದು ನಿಜ. ಹಾಗಂತ ಅವರಿಗೆ ಬಟ್ಟೆಗಳ ಕೊರತೆ ಆಗಿದೆ ಅಂತೇನಲ್ಲ. ತಾವು ಅಭಿನಯಿಸಿದ ಪಾತ್ರದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದ್ದರೆ ಅದರ ನೆನಪಿಗಾಗಿ ಆ ಕಾಸ್ಟ್ಯೂಮ್ಗಳನ್ನು ಅವರು ಸ್ಮರಣಿಕೆ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ದೀಪಿಕಾ ಪಡುಕೋಣೆ, ರಿಷಿ ಕಪೂರ್ ಮುಂತಾದ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದುಂಟು.
ಸಮಾಜಮುಖಿ ಕಾರ್ಯಕ್ಕಾಗಿ ಬಟ್ಟೆ ಹರಾಜು
ಸೆಲೆಬ್ರಿಟಿಗಳು ಬಳಸಿದ ವಸ್ತುಗಳನ್ನು ಹರಾಜು ಹಾಕುವುದು ಮತ್ತು ಅದರಿಂದ ಬಂದ ಹಣವನ್ನು ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಬಳಸುವುದು ಹೊಸದೇನೂ ಅಲ್ಲ. ಅದೇ ತಂತ್ರವನ್ನು ಸಿನಿಮಾ ಕಾಸ್ಟ್ಯೂಮ್ಗಳಿಗೂ ಅನ್ವಯಿಸಲಾಗುತ್ತದೆ. ಅದಕ್ಕೆಂದೇ ಮೀಸಲಿರುವ ವೆಬ್ಸೈಟ್ಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಅತಿ ಹೆಚ್ಚು ಹಣವನ್ನು ಬಿಡ್ ಮಾಡುವವರಿಗೆ ಆ ಕಾಸ್ಟ್ಯೂಮ್ ಸಿಗುತ್ತದೆ. ಕೆಲವೇ ಸಾವಿರ ಬೆಲೆಯ ಬಟ್ಟೆಗಳು ಲಕ್ಷಾಂತರ ರೂಪಾಯಿಗೆ ಹರಾಜಾಗುವುದಂಟು!
ಇದನ್ನೂ ಓದಿ: ರಾಬರ್ಟ್ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Hero Movie Review: ಈ ಹೀರೋ ಎಲ್ಲರಂತಲ್ಲ; ಪ್ರೇಕ್ಷಕರು ಅಂದುಕೊಂಡಂತೆ ಏನೂ ನಡೆಯಲ್ಲ!