
ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಕೆಡಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕಾಲ ಭೈರವ ಎಂಬುದು ಈ ಪಾತ್ರದ ಹೆಸರು. ಸುದೀಪ್ ನಟಿಸಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್ಗಳು ಕೂಡ ‘ಕೆಡಿ’ ಸಿನಿಮಾದ (KD Movie) ಪಾತ್ರವರ್ಗದಲ್ಲಿ ಇದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿಬಂದಿದೆ. ಸುದೀಪ್ ಅವರು ಪ್ರೇಮ್ ಬಗ್ಗೆ ಮಾತನಾಡಿದರು. ‘ಮೊದಲು ನಾನು ಪ್ರೇಮ್ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರು ಸಿನಿಮಾ ಬಗ್ಗೆ ಅಪಾರ ಉತ್ಸಾಹ, ಪ್ರೀತಿ ಇರುವಂತಹ ನಿರ್ದೇಶಕ. ಆಗುಹೋಗುಗಳ ಮಧ್ಯೆ ಒಂದು ಒಳ್ಳೆಯ ಸಿನಿಮಾವನ್ನು ನೀಡಲು ಅವರು ಪ್ರಯತ್ನಿಸುತ್ತಾರೆ’ ಎಂದು ಸುದೀಪ್ ಮಾತು ಆರಂಭಿಸಿದರು.
‘ಪ್ರೇಮ್ ಅವರ ಪ್ರಯತ್ನವನ್ನು ನಾವು ಈಗ ನೋಡುತ್ತಿರುವುದಲ್ಲ. ಅವರ ಮೊದಲೇ ಸಿನಿಮಾದಿಂದಲೇ ನೋಡಿಕೊಂಡು ಬಂದಿದ್ದೇವೆ. ಇಂದಿನವರೆಗೂ ಅವರು ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ. ವ್ಯಕ್ತಿ ಇಷ್ಟ ಆದಮೇಲೆ ಅವರಿಗಾಗಿ ನಾವು ಏನು ಬೇಕಾದರೂ ಮಾಡುತ್ತೇನೆ. ಹಾಗಿರುವಾಗ ಕಾಲ ಭೈರವ ಪಾತ್ರ ಒಂದು ಸಣ್ಣ ಸಂಗತಿ ಅಷ್ಟೇ. ಅದು ನಾವು ಅವರಿಗೆ ಮಾಡಿದ ಉಪಕಾರ ಅಲ್ಲ. ಅವರು ಸಂಪಾದಿಸಿದ ಪ್ರೀತಿ ಅದು’ ಎಂದು ಸುದೀಪ್ ಹೇಳಿದರು.
‘ಅವರು ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಏನೂ ಉಪಕಾರ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಅದ್ದೂರಿಯಾದ ಸಿನಿಮಾ ಮೂಡಿಬರುತ್ತಿದೆ. ಅದರಲ್ಲಿ ನಾನು ಕೂಡ ಭಾಗವಾಗಲು ಅವಕಾಶ ಸಿಕ್ಕಿದೆ. ನನ್ನ ಸಹೋದರ ಧ್ರುವ ಸರ್ಜಾ ನಟನೆಯ ಇಷ್ಟು ದೊಡ್ಡ ಸಿನಿಮಾ ಸಿದ್ಧವಾಗುವಾಗ ಅದರಲ್ಲಿ ನಾನು ಕೂಡ ಇರಬೇಕು ಎನಿಸಿತು’ ಎಂದಿದ್ದಾರೆ ಕಿಚ್ಚ ಸುದೀಪ್.
ಇದನ್ನೂ ಓದಿ: ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!
‘ನೀವೆಲ್ಲರೂ ಸಿನಿಮಾ ನೋಡಬೇಕು. ಚಿರು ಮತ್ತು ಧ್ರುವ ಅವರನ್ನು ಬಹಳ ವರ್ಷದಿಂದ ನಾನು ನೋಡಿಕೊಂಡು ಬಂದಿದ್ದೇನೆ. ಧ್ರುವ ಜೊತೆ ತೆರೆ ಹಂಚಿಕೊಳ್ಳಲು ನನಗೆ ಅವಕಾಶ ಸಿಕಿದ್ದು ಗ್ರೇಟ್. ಚಿರು ಜೊತೆಯೂ ನಾನು ಕೆಲಸ ಮಾಡಿದ್ದೆ. ಪ್ರೇಮ್ ಇದ್ದರೆ ಆ ಸೆಟ್ನಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ನಾನು ವಿಲನ್ ಸಿನಿಮಾ ಮಾಡಿದಾಗ ಅವರ ಜೊತೆ ಕೆಲಸ ಎಂಜಾಯ್ ಮಾಡಿದ್ದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.