Toxic: ಆಸ್ಕರ್ ಪ್ರಶಸ್ತಿ ಮೇಲೆ ಯಶ್ ಕಣ್ಣು? ‘ಟಾಕ್ಸಿಕ್’ ಸಿನಿಮಾ ಹಿಂದಿನ ಲೆಕ್ಕಾಚಾರ ಹೀಗಿದೆ..
ಗೀತು ಮೋಹನ್ದಾಸ್ ಅವರು ಈಗಾಗಲೇ ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಜೊತೆ ಈಗ ಯಶ್ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಸಿನಿಮಾಗೆ ಗೌರವ ಮತ್ತು ಮನ್ನಣೆ ದೊರಕಿಸಿ ಕೊಡುವ ಗುರಿಯನ್ನು ಯಶ್ ಇಟ್ಟುಕೊಂಡಿದ್ದಾರೆ.
ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಅವರ ಹವಾ ಹೆಚ್ಚುತ್ತಲೇ ಇದೆ. ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಟಾಕ್ಸಿಕ್’ (Toxic) ಎಂದು ಶೀರ್ಷಿಕೆ ಇಡಲಾಗಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾಂಬಿನೇಷನ್ನ ಹಿಂದೆ ‘ಆಸ್ಕರ್ ಪ್ರಶಸ್ತಿ’ (Oscar Awards) ಪಡೆಯುವ ಗುರಿ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆ ಭರವಸೆ ಹೊಂದಿರುವ ಯಶ್ ಅವರು ಈಗ ಪ್ರತಿಷ್ಠಿತ ಪ್ರಶಸ್ತಿಗಳ ಮೇಲೆ ಕಣ್ಣು ಇಟ್ಟಿದ್ದಾರೆ ಎಂಬುದು ಸಿನಿಪ್ರಿಯರ ಅಭಿಪ್ರಾಯ.
ಗೀತು ಮೋಹನ್ದಾಸ್ ಅವರು ಈಗಾಗಲೇ ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ‘ಲೈಯರ್ಸ್ ಡೈಸ್’ ಸಿನಿಮಾ 87ನೇ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿತ್ತು. ಅಲ್ಲದೇ ಅದೇ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಹಾಗಾಗಿ ಪ್ರಶಸ್ತಿ ಗಳಿಸುವಂತಹ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬುದು ಗೀತು ಮೋಹನ್ದಾಸ್ ಅವರಿಗೆ ಚೆನ್ನಾಗಿ ತಿಳಿದಿದೆ. ಇದೇ ಕಾರಣದಿಂದ ಅವರ ಜೊತೆ ಯಶ್ ಕೈ ಜೋಡಿಸಿರಬಹುದು ಎಂಬ ಅನಿಸಿಕೆ ಹಲವರದ್ದು.
Toxic: ಯಶ್ ಹೊಸ ಚಿತ್ರದ ನಿರ್ದೇಶಕಿ ಗೀತು ಮೋಹನ್ದಾಸ್ ಯಾರು? ಇಲ್ಲಿದೆ ಪರಿಚಯ
‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ಯಶ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಆ ಸಿನಿಮಾಗಳು ಸೂಪರ್ ಹಿಟ್ ಆದ ಬಳಿಕ ಅವರು ಜಾಗತಿಕ ಮಟ್ಟದ ಕೆಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಸಾಮರ್ಥ್ಯ ಅವರಿಗೆ ಇದೆ. ಹಾಗಾಗಿ ಹಣಕ್ಕಿಂತಲೂ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಕನ್ನಡದ ಸಿನಿಮಾಗೆ ಗೌರವ ಮತ್ತು ಮನ್ನಣೆ ದೊರಕಿಸಿ ಕೊಡುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ.
‘What you seek is seeking you’ – Rumi A Fairy Tale for Grown-ups #TOXIChttps://t.co/0G03Qjb3zc@KvnProductions #GeetuMohandas
— Yash (@TheNameIsYash) December 8, 2023
ಕಳೆದ ಸಾಲಿನ ಆಸ್ಕರ್ ಪ್ರಶಸ್ತಿಯಲ್ಲಿ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಪ್ರಶಸ್ತಿ ಬಂತು. ತೆಲುಗು ಚಿತ್ರಕ್ಕೆ ಇದು ಸಾಧ್ಯವಾಗುತ್ತದೆ ಎಂದಾದರೆ ಕನ್ನಡಕ್ಕೂ ಸಾಧ್ಯವಾಗುತ್ತದೆ ಎಂಬುದನ್ನು ‘ಟಾಕ್ಸಿಕ್’ ಸಿನಿಮಾ ಸಾಬೀತು ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು. ಈ ಸಿನಿಮಾದಲ್ಲಿ ಹಾಲಿವುಡ್ನ ಅನೇಕ ತಂತ್ರಜರು ಕೆಲಸ ಮಾಡುವ ಸಾಧ್ಯತೆ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ಹಂತ ಹಂತವಾಗಿ ಮಾಹಿತಿ ಬಹಿರಂಗ ಆಗಲಿದೆ. ಈ ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಬಂಡವಾಳ ಹೂಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.