‘ಕಾಂತಾರ’ ಸಿನಿಮಾದ (Kantara Movie) ‘ವರಾಹ ರೂಪಂ..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಗಿತ್ತು. ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ ಈ ಸಂಬಂಧ ಕೇಸ್ ದಾಖಲು ಮಾಡಿತ್ತು. ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದೆ. ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಾದ ‘ಸಾವನ್..’ ಮೊದಲಾದ ಪ್ಲಾಟ್ಫಾರ್ಮ್ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿದೆ.
‘ನವರಸಂ..’ ಹಾಡಿನಲ್ಲಿರುವ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್’ ಕೇಸ್ ಕೂಡ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಒಪ್ಪಿಗೆ ಇಲ್ಲದೆ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗ ಕೋರ್ಟ್ ಆದೇಶವನ್ನು ತಂಡದವರು ಪಾಲಿಸಿದ್ದಾರೆ.
‘ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್ ಜಿಯೊ ಸಾವನ್ನಲ್ಲಿ ಈ ಹಾಡು ಕೇಳಲು ಲಭ್ಯವಿಲ್ಲ. ಯೂಟ್ಯೂಬ್ ಮ್ಯೂಸಿಕ್ ಸೇರಿ ಕೆಲವು ಆ್ಯಪ್ಗಳಲ್ಲಿ ‘ವರಾಹ ರೂಪಂ..’ ಹಾಡು ಇನ್ನೂ ಡಿಲೀಟ್ ಆಗಿಲ್ಲ.
ಕೋರ್ಟ್ ಹೇಳಿದ್ದೇನು?:
‘ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಹೇಳಿತ್ತು. ಅಲ್ಲದೆ, ಈ ಸಂಬಂಧ ಕೋರ್ಟ್ನಲ್ಲಿ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಕೋಯಿಕ್ಕೋಡ್ನ ಕೋರ್ಟ್, ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಯೂಟ್ಯೂಬ್ ಸೇರಿ ಇತರ ಪ್ಲಾಟ್ಫಾರ್ಮ್ಗಳು ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು.
Published On - 2:30 pm, Sat, 12 November 22