ಎಲ್ಲ ಕ್ಷೇತ್ರದವರನ್ನೂ ‘ಕಾಂತಾರ’ (Kantara) ಸಿನಿಮಾ ಆಕರ್ಷಿಸಿದೆ. ಪರಭಾಷೆ ಮಂದಿ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಆಯಾಮಗಳಿಂದ ಈ ಸಿನಿಮಾವನ್ನು ನೋಡಲಾಗುತ್ತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್ ಸೇರಿದಂತೆ ಹಲವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾಗಿದೆ. ಈಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ (Veerendra Heggade) ಅವರು ಕೂಡ ‘ಕಾಂತಾರ’ ನೋಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಇಂದು (ಅ.21) ಸಂಜೆ 7 ಗಂಟೆಗೆ ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಯಾವ ರೀತಿಯ ಅಭಿಪ್ರಾಯ ತಿಳಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಇತ್ತೀಚೆಗೆ ‘ಕಾಂತಾರ’ ಸಿನಿಮಾ ಬಗ್ಗೆ ಬೇರೊಂದು ರೀತಿಯ ಚರ್ಚೆ ಶುರುವಾಗಿತ್ತು. ಈ ಚಿತ್ರದಲ್ಲಿ ತೋರಿಸಲಾದ ಭೂತಕೋಲವು ಹಿಂದು ಧರ್ಮಕ್ಕೆ ಸೇರಿದ್ದಲ್ಲ ಎಂದು ‘ಆ ದಿನಗಳು’ ಚೇತನ್ ಅವರು ತಕರಾರು ತೆಗೆದಿದ್ದರು. ಆ ಕುರಿತು ಪರ-ವಿರೋಧದ ಚರ್ಚೆ ಹುಟ್ಟಿಕೊಂಡಿತ್ತು. ದೈವ ನರ್ತಕರು, ಧಾರ್ಮಿಕ ಮುಖಂಡರು, ಭಕ್ತರು ಸೇರಿದಂತೆ ಅನೇಕರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರು ತಿಳಿಸಲಿರುವ ಅಭಿಪ್ರಾಯ ತುಂಬ ಮುಖ್ಯವಾಗಲಿದೆ.
ತುಳುನಾಡಿನ ಸಂಸ್ಕೃತಿಯನ್ನು ‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಭೂತಾರಾಧನೆಗೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಹಲವು ದೃಶ್ಯಗಳಿವೆ. ಈ ಸನ್ನಿವೇಶಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ ಇದು ಹಿಂದು ಧರ್ಮದ ಆಚರಣೆ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್ ಅಂಹಿಸಾ ಅವರು ಚರ್ಚೆ ಹುಟ್ಟುಹಾಕಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಸಿನಿಮಾ ನೋಡಿದ ಬಳಿಕ ಏನು ಹೇಳಲಿದ್ದಾರೆ ಎಂಬುದರ ಮೇಲೆ ಈ ಚರ್ಚೆಗೆ ಹೊಸ ಆಯಾಮ ಸಿಗುವ ಸಾಧ್ಯತೆ ಇದೆ.
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಪರಭಾಷೆಗೂ ಡಬ್ ಆಗಿ ಬಿಡುಗಡೆ ಆಗಿದ್ದು, ಭರ್ಜರಿ ಕಲೆಕ್ಷನ್ ಆಗುತ್ತಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಸಖತ್ ಲಾಭ ಆಗಿದೆ. ರಿಷಬ್ ಶೆಟ್ಟಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಪರಭಾಷೆಯಿಂದಲೂ ಅವರಿಗೆ ಆಫರ್ಗಳು ಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Fri, 21 October 22