K Shivaram Passes Away: ನಟ, ರಾಜಕಾರಣಿ ಕೆ. ಶಿವರಾಮ್ ನಿಧನ; ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೀರೋ

| Updated By: ಮದನ್​ ಕುಮಾರ್​

Updated on: Feb 29, 2024 | 5:55 PM

ಖ್ಯಾತ ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್‌ ನಿಧನ: ಶಿವರಾಮ್ ಅವರಿಗೆ ಇತ್ತೀಚೆಗೆ ಹೃದಯಾಘಾತ ಆಯಿತು. ಹೀಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಸಾವಿಗೂ ಮುನ್ನ ಅವರ ಮಿದುಳು ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಪ್ರಯೋಜನ ಆಗಿಲ್ಲ.

K Shivaram Passes Away: ನಟ, ರಾಜಕಾರಣಿ ಕೆ. ಶಿವರಾಮ್ ನಿಧನ; ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೀರೋ
ಶಿವರಾಮ್
Follow us on

ಖ್ಯಾತ ನಟ, ಮಾಜಿ ಐಎಎಸ್​ ಅಧಿಕಾರಿ, ರಾಜಕಾರಣಿ ಕೆ. ಶಿವರಾಮ್ (K Shivaram) ಅವರು ಇಂದು (ಫೆಬ್ರವರಿ 29) ನಿಧನ ಹೊಂದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಗಣ್ಯರು ಹಾಗು ರಾಜಕಾರಣಿಗಳು ಕೋರುತ್ತಿದ್ದಾರೆ. ನಿಧನ ಹೊಂದುವುದಕ್ಕೂ ಮೊದಲು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸದರೂ ಶಿವರಾಮ್ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.

ಶಿವರಾಮ್ ಅವರಿಗೆ 15 ದಿನಗಳ ಹಿಂದೆ ಅಧಿಕ ರಕ್ತದೊತ್ತಡದಿಂದ ಸಮಸ್ಯೆ ಆಗಿತ್ತು. ಇತ್ತೀಚೆಗೆ ಹೃದಯಾಘಾತ ಆಯಿತು. ಹೀಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಸಾವಿಗೂ ಮುನ್ನ ಅವರ ಮಿದುಳು ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಶಿವರಾಮ್ ಅವರು ಜನಿಸಿದ್ದು, 1953ರ ಏಪ್ರಿಲ್ 6ರಂದು. ರಾಮನಗರ ಅವರ ಹುಟ್ಟೂರು. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಪ್ರೌಢ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬಂದರು. 1985ರಲ್ಲಿ ಅವರು ಕೆಎಎಸ್ ಪಾಸ್ ಮಾಡಿ, ಡಿಎಸ್​ಪಿ ಆದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗಲೇ ಯುಪಿಎಸ್​​ಸಿ ಪಾಸ್ ಮಾಡಿದರು. ಈ ಮೂಲಕ ಐಎಎಸ್​ ಅಧಿಕಾರಿ ಆದರು. ಕನ್ನಡ ಭಾಷೆಯಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ವ್ಯಕ್ತಿ ಎನ್ನುವ ಹೆಮ್ಮೆ ಶಿವರಾಮ್​ಗೆ ಇದೆ. 1986ರಿಂದ 2013ರವರೆಗೆ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಕೆ. ಶಿವರಾಮ್ ನೋಡಲು ಆಸ್ಪತ್ರೆಗೆ ಬಂದ ಮಾಜಿ ಸಿಎಂ ಯಡಿಯೂರಪ್ಪ

ಈ ಮಧ್ಯೆ ಶಿವರಾಮ್ ಅವರಿಗೆ ಸಿನಿಮಾಸಕ್ತಿಯೂ ಬೆಳೆದಿತ್ತು. 1993ರ ಸೂಪರ್ ಹಿಟ್ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದಲ್ಲಿ ನಟಿಸಿ ಗೆಲುವು ಕಂಡರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ರಿಲೀಸ್ ಆದ ‘ಟೈಗರ್’ ಅವರ ನಟನೆಯ ಕೊನೆಯ ಸಿನಿಮಾ.

ರಾಜಕೀಯ ಬದುಕು

2013ರಲ್ಲಿ ಶಿವರಾಮ್ ಅವರು ಕಾಂಗ್ರೆಸ್ ಸೇರಿದರು. 2014ರಲ್ಲಿ ಜೆಡಿಎಸ್ ಸೇರಿದ ಅವರು, ಬಿಜಾಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ರಮೇಶ್ ಜಿಗಜಿಣಗಿ ವಿರುದ್ಧ ಸೋತರು.   ಅದೇ ವರ್ಷ ಅವರು ಮರಳಿ ಕಾಂಗ್ರೆಸ್​ಗೆ ಬಂದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ