ಅಂದು ‘ಚಿನ್ನಾರಿ ಮುತ್ತ’, ಇಂದು ‘ಜೀನಿಯಸ್​ ಮುತ್ತ’: ವಿಜಯ್ ರಾಘವೇಂದ್ರ ವಿಶೇಷ ಪಾತ್ರ

|

Updated on: Jul 26, 2024 | 3:27 PM

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್​ ರಾಘವೇಂದ್ರ ಅವರು ಈಗ ‘ಜೀನಿಯಸ್​ ಮುತ್ತ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಾಸ್ಟರ್​ ಶ್ರೇಯಸ್​ಗೆ ಪ್ರಮುಖ ಪಾತ್ರವಿದೆ. ನಾಗಿಣಿ ಭರಣ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಗಿರಿಜಾ ಲೋಕೇಶ್​, ನಾಗಾಭರಣ, ಸುಂದರ್ ರಾಜ್​ ಮುಂತಾದ ಅನುಭವಿ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಅಂದು ‘ಚಿನ್ನಾರಿ ಮುತ್ತ’, ಇಂದು ‘ಜೀನಿಯಸ್​ ಮುತ್ತ’: ವಿಜಯ್ ರಾಘವೇಂದ್ರ ವಿಶೇಷ ಪಾತ್ರ
ವಿಜಯ್​ ರಾಘವೇಂದ್ರ, ಗಿರಿಜಾ ಲೋಕೇಶ್, ಮಾಸ್ಟರ್​ ಶ್ರೇಯಸ್​
Follow us on

1993ರಲ್ಲಿ ‘ಚಿನ್ನಾರಿ ಮುತ್ತ’ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಆ ಸಿನಿಮಾದಿಂದ ವಿಜಯ್​ ರಾಘವೇಂದ್ರ ಅವರು ಸಖತ್​ ಜನಪ್ರಿಯತೆ ಪಡೆದರು. ಇಂದಿಗೂ ಅಭಿಮಾನಿಗಳು ಅವರನ್ನು ಚಿನ್ನಾರಿ ಮುತ್ತ ಎಂದೇ ಕರೆಯುತ್ತಾರೆ. ಈಗ ‘ಜೀನಿಯಸ್​ ಮುತ್ತ’ ಎಂಬ ಸಿನಿಮಾದಲ್ಲಿ ವಿಜಯ್​ ರಾಘವೇಂದ್ರ ಅಭಿನಯಿಸಿದ್ದಾರೆ. ಈ ಬಾರಿ ಮುತ್ತನಾಗಿ ಕಾಣಿಸಿಕೊಳ್ಳಲಿರುವುದು ಮಾಸ್ಟರ್ ಶ್ರೇಯಸ್ ಜೈಪ್ರಕಾಶ್. ಈ ಸಿನಿಮಾದಲ್ಲಿ ವಿಜಯ್​ ರಾಘವೇಂದ್ರ ಅವರಿಗೆ ವಿಶೇಷ ಪಾತ್ರವಿದೆ. ಇತ್ತೀಚೆಗೆ ಸಿನಿಮಾ ತಂಡದವರು ಸುದ್ದಿಗೋಷ್ಠಿ ನಡೆಸಿದರು. ಟಿ.ಎಸ್. ನಾಗಾಭರಣ ಪತ್ನಿ ನಾಗಿಣಿ ಭರಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ನಾಗಿಣಿ ಭರಣ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಜೀನಿಯಸ್​ ಮುತ್ತ’. ಮಾಸ್ಟರ್ ಶ್ರೇಯಸ್ ಹಾಗೂ ವಿಜಯ ರಾಘವೇಂದ್ರ ಜೊತೆ ಟಿ.ಎಸ್. ನಾಗಾಭರಣ, ಸುಂದರ್ ರಾಜ್, ಗಿರಿಜಾ ಲೋಕೇಶ್, ಪನ್ನಗಾಭರಣ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆಗಸ್ಟ್​ನಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿ.ಎಸ್. ಲತಾ ಜೈಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಾಗಿಣಿ ಭರಣ ಅವರು ಮಾತನಾಡಿದರು. ‘ನನಗೆ ಅನೇಕ ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಲತಾ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದುಕೊಂಡು, ಈ ಸಿನಿಮಾಗೆ ನಾನೇ ನಿರ್ದೇಶನ ಮಾಡಬೇಕು ಅಂತ ಒತ್ತಾಯಿಸಿದರು. ಹಾಗಾಗಿ, ನನ್ನ ಸ್ನೇಹಿತರ ಟೀಮ್​ನೊಂದಿಗೆ ಸೇರಿ ಕಥೆ ಸಿದ್ಧಪಡಿಸಿದೆ. ಡಿಫರೆಂಟ್​ ಕಥಾಹಂದರ ಹೊಂದಿರುವ ಈ ಚಿತ್ರ ಒಂದು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶನವಾಗಿದೆ’ ಎಂದು ಅವರು ಹೇಳಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ‘ಜೀನಿಯಸ್​ ಮುತ್ತ’ ಚಿತ್ರಕ್ಕೆ ಶೂಟಿಂಗ್​ ಮಾಡಲಾಗಿದೆ. ‘ನಾಗಿಣಿ ಈಗ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನ ಮಾಡಿದ್ದಾರಷ್ಟೇ. ಆದರೆ ನನ್ನ ಎಲ್ಲ ಧಾರಾವಾಹಿ ಹಾಗೂ ಸಿನಿಮಾಗಳ ನಿರ್ದೇಶನಕ್ಕೆ ಹಿಂದಿನಿಂದ ಸಹಕಾರ ನೀಡುತ್ತಿದ್ದರು. ಈ ಸಿನಿಮಾದಲ್ಲಿ ನಾನು ಪುಟ್ಟ ಪಾತ್ರ ಮಾಡಿದ್ದೇನೆ’ ಎಂದು ಟಿ.ಎಸ್. ನಾಗಾಭರಣ ಹೇಳಿದ್ದಾರೆ. ವಿಜಯ್​ ರಾಘವೇಂದ್ರ ಮಾತನಾಡಿ, ‘ನಾಗಾಭರಣ ಅವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಯಾಕೆಂದರೆ, ನನ್ನನ್ನು ಎಲ್ಲರೂ ವಿಜಯ್ ರಾಘವೇಂದ್ರ ಎಂದು ಕರೆಯುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ಅವರು. ಈಗ ನಾಗಿಣಿ ಭರಣ ನಿರ್ದೇಶನದ ಮೊದಲ ಸಿನಿಮಾದಲ್ಲೂ ನಾನು ನಟಿಸಿರುವುದು ಖುಷಿ ನೀಡಿದೆ’ ಎಂದರು.

ಇದನ್ನೂ ಓದಿ: ‘ಸ್ಪಂದನಾ ಇದನ್ನೆಲ್ಲಾ ನೋಡುತ್ತಿದ್ದಾಳೆ’; ಭಾವುಕರಾಗಿ ಮಾತನಾಡಿದ ವಿಜಯ್ ರಾಘವೇಂದ್ರ

ನಿರ್ಮಾಪಕಿ ಲತಾ ಜೈಪ್ರಕಾಶ್ ಮಾತನಾಡಿ, ‘ನಾಗಿಣಿ ಭರಣ ಅವರು ನನಗೆ 10 ವರ್ಷಗಳಿಂದ ಪರಿಚಯ. ನನ್ನ ಮಗನಿಗಾಗಿ ಒಳ್ಳೆಯ ಒಂದು ಕಥೆ ಸಿದ್ಧಪಡಿಸಿ, ನೀವೇ ಡೈರೆಕ್ಷನ್​ ಮಾಡಬೇಕು ಎಂದು ನಾಗಿಣಿ ಭರಣ ಬಳಿ ಹೇಳಿಕೊಂಡೆ. ಅವರು ಸಿದ್ಧಪಡಿಸಿದ ಕಥೆ ನನಗೆ ಇಷ್ಟವಾಯ್ತು. ಈ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ’ ಎಂದರು. ‘ನಾನು ಭರಣ ಸರ್ ಬಳಿ ಅಭಿನಯದ ಪಾಠ ಕಲಿತಿದ್ದೇನೆ. ಬಳಿಕ ನಾನು ನಟಿಸಬೇಕೆಂದು ಅಮ್ಮನಿಗೆ ಆಸೆಯಾಯಿತು. ಈ ಸಿನಿಮಾದಲ್ಲಿ ನಾನು ಜೀನಿಯಸ್ ಮುತ್ತನಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಮಾಸ್ಟರ್ ಶ್ರೇಯಸ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.