ವಿಜಯ್​ ರಾಘವೇಂದ್ರ ನಟನೆಯ ಹೊಸ ಸಿನಿಮಾ ‘ಮರೀಚಿ’ ಹೇಗಿದೆ? ಏನು ಇದರ ಕಥೆ?

|

Updated on: Dec 08, 2023 | 5:05 PM

ವಿಜಯ್​ ರಾಘವೇಂದ್ರ ಅವರು ‘ಮರೀಚಿ’ ಸಿನಿಮಾದಲ್ಲಿ ಭೈರವ್​ ನಾಯಕ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅವರ ಮಡದಿಯ ಪಾತ್ರದಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ. ಮರ್ಡರ್​ ಮಿಸ್ಟರಿ ಕಹಾನಿ ಇರುವ ಈ ಸಿನಿಮಾ ಇಂದು (ಡಿ.8) ತೆರೆಗೆ ಬಂದಿದೆ. ಸಿನಿಮಾ ಹೇಗಿದೆ ಎಂಬ ರಿಪೋರ್ಟ್​ ಇಲ್ಲಿದೆ..

ವಿಜಯ್​ ರಾಘವೇಂದ್ರ ನಟನೆಯ ಹೊಸ ಸಿನಿಮಾ ‘ಮರೀಚಿ’ ಹೇಗಿದೆ? ಏನು ಇದರ ಕಥೆ?
ವಿಜಯ್​ ರಾಘವೇಂದ್ರ
Follow us on

ಈ ವರ್ಷ ನಟ ವಿಜಯ್​ ರಾಘವೇಂದ್ರ (Vijay Raghavendra) ಅವರ ಬದುಕಿನಲ್ಲಿ ಕೆಲವು ಕಹಿ ಘಟನೆಗಳು ನಡೆದವು. ಪತ್ನಿಯ ಅಕಾಲಿಕ ಮರಣದಿಂದ ಅವರು ತೀವ್ರ ನೋವು ಅನುಭವಿಸಬೇಕಾಯಿತು. ಹಾಗಂತ ಕರ್ತವ್ಯ ಮರೆಯುವಂತಿಲ್ಲ. ಪತ್ನಿಯನ್ನು ಕಳೆದುಕೊಂಡ ನಂತರ ಕೆಲವೇ ದಿನಗಳಲ್ಲಿ ಅವರು ಸಿನಿಮಾದ ಕೆಲಸಗಳಿಗೆ ಮರಳಿದರು. ತಾವು ಒಪ್ಪಿಕೊಂಡಿದ್ದ ಕೆಲಸಗಳನ್ನೆಲ್ಲ ಮುಗಿಸಿಕೊಟ್ಟರು. ಈಗ ಅವರು ನಟಿಸಿದ ಹೊಸ ಸಿನಿಮಾ ‘ಮರೀಚಿ’ (Marichi Movie) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಇದೆ. ಈ ಸಿನಿಮಾಗೆ ಸಿಧ್ರುವ್​ ಸಿದ್ದು ಅವರು ನಿರ್ದೇಶನ ಮಾಡಿದ್ದಾರೆ. ಇಂದು (ಡಿಸೆಂಬರ್​ 8) ಈ ಚಿತ್ರ ರಾಜ್ಯಾದ್ಯಂತ ತೆರೆಕಂಡಿದೆ. ‘SS REC Productions’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ವಿಜಯ್​ ರಾಘವೇಂದ್ರ ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂಥ ಅನುಭವಿ ಕಲಾವಿದನ ಜೊತೆ ‘ಮರೀಚಿ’ ಸಿನಿಮಾದಲ್ಲಿ ಹೊಸ ಪ್ರತಿಭೆಗಳು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಗುರುತಿಸಿಕೊಂಡ ನಟ-ನಟಿಯರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಒಂದು ರೀತಿಯಲ್ಲಿ ಹೊಸಬರು ಮತ್ತು ಹಳಬರ ಸಂಗಮದಂತಿದೆ ಈ ಸಿನಿಮಾದ ಪಾತ್ರವರ್ಗ. ವಿಜಯ್​ ರಾಘವೇಂದ್ರ ಅವರ ಮಡದಿಯ ಪಾತ್ರದಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ. ನಿಜ ಜೀವನದ ರೀತಿಯ ಈ ಸಿನಿಮಾದಲ್ಲಿ ಕೂಡ ಪತ್ನಿಯನ್ನು ಕಳೆದುಕೊಳ್ಳುವಂತಹ ದೃಶ್ಯದಲ್ಲಿ ಅವರು ನಟಿಸಿದ್ದು ಎಮೋಷನಲ್​ ಆಗಿದೆ.

ವಿಜಯ್​ ರಾಘವೇಂದ್ರ ಅವರು ‘ಮರೀಚಿ’ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅವರ ತಂಡದಲ್ಲಿ ಕೆಲಸ ಮಾಡುವ ಯುವ ಪೊಲೀಸ್​ ಅಧಿಕಾರಿಯಾಗಿ ಹೊಸ ನಟಿ ಶ್ರುತಿ ಪಾಟೀಲ್​ ಅವರು ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಸರಣಿ ಕೊಲೆಯ ಬಗ್ಗೆ ಹೆಣೆದಿರುವ ಕಥೆ ಈ ಚಿತ್ರದಲ್ಲಿ ಇದೆ. ಬೇರೆ ಬೇರೆ ಕಡೆಗಳಲ್ಲಿ ನಡೆದ ವಿಚಿತ್ರವಾದ ಕೊಲೆ ಪ್ರಕರಣದ ತನಿಖೆ ಮಾಡುವ ಭೈರವ್​ ನಾಯಕ್​ ಎಂಬ ನಿಷ್ಠಾವಂತ ಪೊಲೀಸ್​ ಆಗಿ ವಿಜಯ್​ ರಾಘವೇಂದ್ರ ನಟಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಅಭಿ ದಾಸ್​, ಸ್ಪಂದನಾ ಸೋಮಣ್ಣ, ಗೋಪಾಲಕೃಷ್ಣ​ ದೇಶಪಾಂಡೆ, ಅರುಣಾ ಬಾಲರಾಜ್​, ಆರ್ಯನ್​ ಎಸ್​.ಜಿ. ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Bad Manners Review: ಸಿಂಪಲ್​ ಕಥೆಯನ್ನು ಸುತ್ತಿ ಬಳಸಿ ಹೇಳಿ ‘ಬ್ಯಾಡ್​ ಮ್ಯಾನರ್ಸ್​’ ತೋರಿಸಿದ ಸೂರಿ, ಅಭಿಷೇಕ್​

‘ಮರೀಚಿ’ ಸಿನಿಮಾದಲ್ಲಿ ವೈದ್ಯರ ಸರಣಿ ಕೊಲೆ ನಡೆಯುತ್ತದೆ. ಈ ಎಲ್ಲ ವೈದ್ಯರು ಕೂಡ ಒಳ್ಳೆಯವರು. ಹಾಗಿದ್ದರೂ ಅವರು ಹತ್ಯೆಗೀಡಾಗುತ್ತಾರೆ. ಮುಂದಿನ ಕೊಲೆ ಎಲ್ಲಿ ಮತ್ತು ಹೇಗೆ ನಡೆಯುತ್ತದೆ ಎಂಬ ಸುಳಿವನ್ನು ಕೂಡ ಕೊಲೆಗಾರ ಬಿಟ್ಟುಕೊಡುತ್ತಾನೆ. ಯಾಕೆ ಈ ರೀತಿ ನಡೆಯುತ್ತದೆ? ಅದನ್ನು ಮಾಡಿದವರು ಯಾರು? ಸರಣಿ ಹಂತನ ಸೇಡು ಯಾರ ಮೇಲೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು. ಈ ರೀತಿಯಾಗಿ ಪ್ರೇಕ್ಷಕರ ಕೌತುಕವನ್ನು ಕಾಯ್ದಿರಿಸಿಕೊಳ್ಳುವ ಗುಣವನ್ನು ಈ ಸಿನಿಮಾ ಹೊಂದಿದೆ.

ಸಸ್ಪೆನ್ಸ್​ ಥ್ರಿಲ್ಲರ್​ ಕಹಾನಿಗೆ ಸೂಕ್ತ ಆಗುವಂತೆ ಜ್ಯೂಡಾ ಸ್ಯಾಂಡಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಡುಗಳು ಚಿತ್ರಕ್ಕೆ ಅಷ್ಟೇನೂ ಪೂರಕವಾಗಿಲ್ಲ. ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಉತ್ತಮಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು. ಕಥೆಯಲ್ಲಿ ಕೆಲವು ಕಡೆ ಲಾಜಿಕ್​ ಕಾಣೆಯಾಗಿರುವುದು ಪ್ರೇಕ್ಷಕರ ಗಮನಕ್ಕೆ ಬರುತ್ತದೆ. ಈಗಾಗಲೇ ಅನೇಕ ಮರ್ಡರ್​ ಮಿಸ್ಟರಿ ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರಿಗೆ ಇದು ವಾವ್​ ಎನಿಸದೇ ಇರಬಹುದು. ಆದರೂ ಕೂಡ ಸಸ್ಪೆನ್ಸ್​ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಒಮ್ಮೆ ನೋಡಬಹುದು. ಈ ಸಿನಿಮಾದ ಅವಧಿ 2 ಗಂಟೆ 8 ನಿಮಿಷ ಇದೆ. ಮನೋಹರ್​ ಜೋಶಿ ಛಾಯಾಗ್ರಹಣ, ಶ್ರೀಕಾಂತ್​ ಸಂಕಲನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.