‘ದರ್ಶನ್ ಬೇಗ ವಾಪಸ್ ಬರ್ತಾರೆ’: ದಿ ಡೆವಿಲ್ ಸಿನಿಮಾ ಪ್ರಚಾರ ಆರಂಭಿಸಿದ ವಿಜಯಲಕ್ಷ್ಮಿ

ಜೈಲಿಗೆ ಹೋಗುವುದಕ್ಕೂ ಮೊದಲು ದರ್ಶನ್ ಅವರು ‘ದಿ ಡಿವಿಲ್’ ಸಿನಿಮಾದ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಇನ್ನೇನು ಸಿನಿಮಾದ ಪ್ರಚಾರ ಆರಂಭಿಸಬೇಕು ಎಂಬಷ್ಟರಲ್ಲಿ ಅವರ ಜಾಮೀನು ರದ್ದಾಗಿ, ಜೈಲು ವಾಸ ಶುರು ಆಯಿತು. ಈಗ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ‘ದಿ ಡೆವಿಲ್’ ಸಿನಿಮಾದ ಪ್ರಮೋಷನ್ ಬಗ್ಗೆ ಅಪ್​ಡೇಟ್ಸ್ ನೀಡಲು ಮುಂದಾಗಿದ್ದಾರೆ.

‘ದರ್ಶನ್ ಬೇಗ ವಾಪಸ್ ಬರ್ತಾರೆ’: ದಿ ಡೆವಿಲ್ ಸಿನಿಮಾ ಪ್ರಚಾರ ಆರಂಭಿಸಿದ ವಿಜಯಲಕ್ಷ್ಮಿ
Darshan, Vijayalakshmi

Updated on: Aug 17, 2025 | 10:53 AM

ನಟ ದರ್ಶನ್ (Darshan) ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ, ದರ್ಶನ್ ಮುಂತಾದವರ ಜಾಮೀನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದು ಮಾಡಿತು. ಅದಕ್ಕೂ ಮುನ್ನ ದರ್ಶನ್ ಅವರು ‘ದಿ ಡೆವಿಲ್’ (The Devil Movie) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಅವರು ಜೈಲು ಸೇರಿದ್ದರಿಂದ ಸಿನಿಮಾದ ಬಿಡುಗಡೆ ತಡ ಆಗಬಹುದು ಎಂದು ಊಹಿಸಲಾಯಿತು. ಆದರೆ ಚಿತ್ರಕ್ಕೆ ಯಾವುದೇ ತೊಂದರೆ ಆಗದಂತೆ ಕೆಲಸ ಮುಂದುವರಿಸಲು ದರ್ಶನ್ ಸೂಚಿಸಿದ್ದಾರೆ. ಅದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಆದಷ್ಟು ಬೇಗ ದರ್ಶನ್ ಅವರು ಜೈಲಿನಿಂದ ಹೊರಗೆ ಬರುತ್ತಾರೆ ಎಂದು ವಿಜಯಲಕ್ಷ್ಮಿ ಅವರು ಭರವಸೆ ಹೊಂದಿದ್ದಾರೆ. ಇನ್ಮುಂದೆ ದರ್ಶನ್ ಹಾಗೂ ಸಿನಿಮಾ ಬಗ್ಗೆ ತಾವೇ ಅಪ್ಡೇಟ್ ನೀಡುವುದಾಗಿ ಅವರು ಹೇಳಿದ್ದಾರೆ. ‘ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ದಿ ಡೆವಿಲ್’ ಸಿನಿಮಾದ ಹೊಸ ಪೋಸ್ಟರ್​ ಅನ್ನು ವಿಜಯಲಕ್ಷ್ಮಿ ದರ್ಶನ್ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಅಭಿಮಾನಿಗಳಿಗೆ ಜೈಲಿಂದಲೇ ಸಂದೇಶ ಕಳಿಸಿದ ನಟ ದರ್ಶನ್
20 ಕೋಟಿ ರೂ. ಕೊಟ್ಟರು ಎಂಬುದೆಲ್ಲ ಸುಳ್ಳು: ರೇಣುಕಾಸ್ವಾಮಿ ತಂದೆ ಖಡಕ್ ಮಾತು
ಯಾವ ಜೈಲಿಗೆ ಹೋಗಲಿದ್ದಾರೆ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸಿದ್ಧತೆ?
ಸುಪ್ರೀಂ ಚುರುಕು; ಬೇಗ ಇತ್ಯರ್ಥವಾಗುತ್ತಾ ರೇಣುಕಾಸ್ವಾಮಿ ಪ್ರಕರಣ?

‘ನಿಮ್ಮ ಚಾಲೆಂಜಿಂಗ್ ಸ್ಟಾರ್ ಹೃದಯದಲ್ಲಿ ನೀವೆಲ್ಲರೂ ಇದ್ದೀರಿ. ಅವರು ನೇರವಾಗಿ ನಿಮ್ಮನ್ನು ಸಂಪರ್ಕಿಸುವ ತನಕ ನಾನು ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುತ್ತೇನೆ. ಅವರ ಪರವಾಗಿ ಅಪ್​ಡೇಟ್​ ನೀಡುತ್ತೇನೆ ಮತ್ತು ಸಿನಿಮಾ ಪ್ರಮೋಷನ್ ಮಾಡುತ್ತೇನೆ’ ಎಂದು ವಿಜಯಲಕ್ಷ್ಮಿ ದರ್ಶನ್ ಅವರು ಪೋಸ್ಟ್ ಮಾಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿಯೂ ಇಂಥ ನಿರ್ಧಾರ ತೆಗೆದುಕೊಂಡ ಅವರ ಗಟ್ಟಿತನಕ್ಕೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

‘ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ತೋರಿಸುವುದನ್ನು ನೀವು ಮುಂದುವರಿಸಿದರೆ ಅದು ದರ್ಶನ್ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಬಲ ನೀಡುತ್ತದೆ. ಪಾಸಿಟಿವ್ ಆಗಿರೋಣ, ಒಂದಾಗಿರೋಣ. ನಿಮಗೆ ತಿಳಿದಿರುವ ಅದೇ ಪ್ರೀತಿ ಮತ್ತು ಎನರ್ಜಿಯೊಂರಿಗೆ ಅವರು ಆದಷ್ಟು ಬೇಗ ವಾಪಸ್ ಬರುತ್ತಾರೆ’ ಎಂದು ಹೇಳುವ ಮೂಲಕ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ವಿಲ ವಿಲ ಒದ್ದಾಟ: 24 ಗಂಟೆಯೂ ಜೈಲು ಸಿಬ್ಬಂದಿ ಹದ್ದಿನ ಕಣ್ಣು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಿಲುಕಿಕೊಂಡ ಬಳಿಕ ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನಕ್ಕೆ ಪೆಟ್ಟು ಬಿದ್ದಿದೆ. ಜೈಲು, ಕೋರ್ಟು ಅಲೆಯುವುದರಲ್ಲೇ ದಿನಗಳು ಕಳೆಯುತ್ತಿವೆ. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕವಂತೂ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.