
ಕಿರುತೆರೆಯ ‘ಅಣ್ಣಯ್ಯ’ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟ ವಿಕಾಶ್ ಉತ್ತಯ್ಯ (Vikash Uthaiah) ಅವರು ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಪಾರ್ಥನ್ ಪರಪಂಚ’ (Parthan Parapancha) ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ. ಇದೊಂದು ಕೋರ್ಟ್ ಹಾಲ್ ಡ್ರಾಮಾ ಸಿನಿಮಾ. ಶ್ರೀಹರ್ಷ ಎಂ.ಎನ್. ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಸಿರಿ ಸಿನಿಮಾಸ್’ ಮೂಲಕ ಸೀತಾ ಹರ್ಷವರ್ಧನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಕಾಶ್ ಜೊತೆ ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
‘ಪಾರ್ಥನ್ ಪರಪಂಚ’ ಸಿನಿಮಾಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೋರ್ಟ್ ಸೆಟ್ ಹಾಕಲಾಗಿದೆ. ಅದರಲ್ಲೇ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ನಿರ್ದೇಶಕ ಶ್ರೀಹರ್ಷ ಮಾತನಾಡಿದರು. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಇರುವ ಕೋರ್ಟ್ ರೂಮ್ ಡ್ರಾಮಾ. ರಂಗಾಯಣ ರಘು ಅವರು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮಾಡುತ್ತಿದ್ದಾರೆ. ಇಡೀ ಚಿತ್ರದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ’ ಎಂದು ಅವರು ಹೇಳಿದರು.
ಹೀರೋ ವಿಕಾಶ್ ಅವರು ಮಾತನಾಡಿ, ‘ಇಂದಿನ ಕಾಲಕ್ಕೆ ಹೊಂದುವ ಕಥೆ ಇದು. ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಹೊಂದಿದೆ. ಒಂದು ಕೇಸ್ ಹೇಗೆ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ’ ಎಂದರು. ‘ಬ್ಲ್ಯಾಂಕ್’ ಸಿನಿಮಾ ಖ್ಯಾತಿಯ ನಟಿ ಮಂದಾರ ಅವರು ಈ ಸಿನಿಮಾದಲ್ಲಿ ಜೆನ್ ಜೀ ಹುಡುಗಿಯಾಗಿ ನಟಿಸುತ್ತಿದ್ದಾರೆ.
ರಂಗಾಯಣ ರಘು ಮಾತನಾಡಿ, ‘ನಿರ್ದೇಶಕ ಹರ್ಷ ಈವರೆಗೆ ಯಾರೂ ಗೆಸ್ ಮಾಡಿರದಂಥ ಘಟನೆಯನ್ನು ಯೋಚನೆ ಮಾಡಿದ್ದಾರೆ. ಒಂದು ಕ್ಲೂ ಹಿಂದೆ ಹೋದಾಗ ಏನೇನಾಗುತ್ತೆ ಅನ್ನೋದನ್ನು ಚೆನ್ನಾಗಿ ಹೇಳುತ್ತಿದ್ದಾರೆ. ಟಗರು, ಅಜ್ಞಾತವಾಸಿ, ಶಾಖಾಹಾರಿ ನಂತರ ಇದು ನನಗೆ ಬೇರೆ ರೀತಿಯ ಪಾತ್ರ’ ಎಂದು ಹೇಳಿದರು. ಛಾಯಾಗ್ರಹಾಕ ಜೈಆನಂದ್ ಮಾತನಾಡಿ, ‘45 ದಿನಗಳ ಶೂಟಿಂಗ್ ಪ್ಲಾನ್ ಇದೆ. 25 ದಿನ ಕೋರ್ಟ್ ಹಾಲ್ನಲ್ಲೇ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ವಿಷ್ಣುಗೆ ವಿಶೇಷ ಗೌರವ ಸಲ್ಲಿಸಿದ ವಿಕಾಶ್ ಉತ್ತಯ್ಯ
‘ಪಾರ್ಥನ್ ಪರಪಂಚ’ ಸಿನಿಮಾಗೆ ಅನಂತ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ನಾಲ್ಕು ಹಾಡುಗಳು ಈ ಸಿನಿಮಾದಲ್ಲಿ ಇರಲಿವೆ. ಇಂದೂ ನಾಗರಾಜ್, ಶ್ರೀಹರ್ಷ ಬೆಳ್ಮಣ್ಣು ಹಾಡಿದ್ದಾರೆ. ಜಸ್ಕರಣ್ ಸಿಂಗ್ ಸಹ ಒಂದು ಗೀತೆ ಹಾಡಲಿದ್ದಾರೆ’ ಎಂದು ಅನಂತ ಆರ್ಯನ್ ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.