
ಕೆಲವು ಸ್ಟಾರ್ ನಟರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ವರ್ತನೆ ತೋರಿಸುತ್ತಾರೆ. ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ಸಂದೇಶ ಕಳಿಸಿರುವುದೇ ಇದಕ್ಕೆ ಕಾರಣ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ರಮ್ಯಾ ತೀರ್ಮಾನಿಸಿದ್ದಾರೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ ಪ್ರಥಮ್ ಅವರು ಈಗಾಗಲೇ ತಮ್ಮ ಅನಿಸಿಕೆ ತಿಳಿಸಿದ್ದಾರೆ. ನಟರಾದ ವಿನಯ್ ರಾಜ್ಕುಮಾರ್ ಮತ್ತು ‘ಆ ದಿನಗಳು’ ಚೇತನ್ ಕೂಡ ಈಗ ರಮ್ಯಾ ಪರವಾಗಿ ನಿಂತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿನಯ್ ರಾಜ್ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿನಯ್ ರಾಜ್ಕುಮಾರ್ ಅವರು ಬರೆದುಕೊಂಡಿದ್ದಾರೆ.
ಚೇತನ್ ಅಹಿಂಸಾ ಅವರ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ’ (ಫೈರ್) ಸಂಸ್ಥೆಯು ಗೃಹಸಚಿವರಿಗೆ ಪತ್ರ ಬರೆದು, ರಮ್ಯಾ ಮೇಲೆ ಆಗಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ‘ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಶ್ಲೀಲ ಹಾಗೂ ಮಹಿಳಾವಿರೋಧಿ ಟ್ರೋಲಿಂಗ್ ಅನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ರಮ್ಯಾ ಅವರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ’ ಎಂದು ‘ಫೈರ್’ ಪತ್ರ ಬರೆದಿದೆ.
‘ಭಾರತದ ಸಂವಿಧಾನದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಹಕ್ಕುಗಳು (ಆರ್ಟಿಕಲ್ 19) ನಮ್ಮ ಪ್ರಜಾಪ್ರಭುತ್ವದ ಬಾಳಿಗೆ ಆಧಾರಸ್ತಂಭವಾಗಿವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಅವುಗಳ ನಡುವೆ ಸಂವಾದ ನಡೆಯಬೇಕು. ಆದರೆ ಆ ಸಂವಾದ ಸಭ್ಯತೆಯೊಂದಿಗೆ ಮತ್ತು ಗೌರವಪೂರ್ಣವಾಗಿ ನಡೆಯಬೇಕು’ ಎಂದು ಪತ್ರದ ಮೂಲಕ ತಿಳಿಸಲಾಗಿದೆ.
ಇದನ್ನೂ ಓದಿ: ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ: ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ
‘ರಮ್ಯಾ ಅವರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ದೌರ್ಜನ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದೆ ಮತ್ತು ಇದು ಆನ್‌ಲೈನ್ ಮಹಿಳಾ ದ್ವೇಷದ ಆಳವಾದ ಸಮಸ್ಯೆಯನ್ನು ತೋರಿಸುತ್ತದೆ. ಮಹಿಳೆಯರ ವಿರುದ್ಧದ ಅವಮಾನಕಾರಕ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಭಾರತ ದಂಡಸಂಹಿತೆಯ ಸೆಕ್ಷನ್‌ಗಳು (499, 500, 505(2), 509) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (ಸೈಬರ್ ಕಾನೂನು) ಅಡಿಯಲ್ಲಿ ದಂಡನೀಯವಾಗಿವೆ. ಕರ್ನಾಟಕ ಗೃಹ ಇಲಾಖೆ ಮತ್ತು ಸೈಬರ್ ಕ್ರೈಮ್ ಪ್ರಾಧಿಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು FIRE ಸಂಸ್ಥೆಯು ಒತ್ತಾಯಿಸುತ್ತಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.