Vinod Raj: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಹಣ ನೀಡಿದ ವಿನೋದ್ ರಾಜ್

|

Updated on: Jul 26, 2024 | 12:48 PM

Vinod Raj: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅನ್ನು ಕೆಲ ದಿನಗಳ ಹಿಂದಷ್ಟೆ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದ ನಟ ವಿನೋದ್ ರಾಜ್ ಇಂದು (ಜುಲೈ 26) ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಕುಟುಂಬಕ್ಕೆ ಹಣ ಸಹಾಯವನ್ನೂ ಮಾಡಿದ್ದಾರೆ.

Vinod Raj: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಹಣ ನೀಡಿದ ವಿನೋದ್ ರಾಜ್
Follow us on

ಕೆಲ ದಿನದ ಹಿಂದೆಯಷ್ಟೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ತೂಗುದೀಪ ಅವರ ಭೇಟಿಯಾಗಿದ್ದ ನಟ ವಿನೋದ್ ರಾಜ್ ಇಂದು (ಜುಲೈ 26) ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜೊತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದಾರೆ. ಜುಲೈ 23 ರಂದು ನಟ ವಿನೋದ್ ರಾಜ್, ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಮಾತನಾಡಿಸಿದ್ದರು.

ಬೆಳಿಗ್ಗೆಯೇ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರ್ತಿದೆ. ನಾವು ಮನುಷ್ಯರಾಗಿದ್ದೀವಾ ಅಂತ ಮುಟ್ಟಿ ನೋಡಿಕೊಳ್ಳುವ ಕಾಲ. ಪ್ರತಿಯೊಂದು ಜೀವಿಗೂ ಜೀವವಿದೆ, ಮಕ್ಕಳು ಬಾಳಬೇಕು, ಬೆಳೆದು ಬೆಳಗಬೇಕು ಅಂತ ತಂದೆ ತಾಯಿ ಬೆಳೆಸುವರು, ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುವವು, ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಬೇಕು’ ಎಂದಿದ್ದಾರೆ.

‘ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಹೀಗೆ ಆಗಿರುವುದು ಆಘಾತಕಾರಿ ವಿಷಯ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು, ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್​ಕುಮಾರ್ ಹೇಳಿದರು.

ಇದನ್ನೂ ಓದಿ:ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ

ದರ್ಶನ್ ಭೇಟಿ ವೇಳೆ ರೇಣುಕಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿನೋದ್ ರಾಜ್, ‘ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾದಾಗ ಅವರು ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಮಾತನಾಡಲಿಲ್ಲ, ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ, ನನ್ನನ್ನು ನೋಡಿದಾಕ್ಷಣ‌ ದರ್ಶನ್ ಭಾವುಕರಾದರು, ದರ್ಶನ್ ನನ್ನನ್ನು ತಬ್ಬಿಕೊಂಡರು ಅಷ್ಟೆ, ಇಂತಹ ಘಟನೆ ನಡೆಯಬಾರದಿತ್ತು, ಮನುಷ್ಯ, ಕ್ರೋಧ, ದ್ವೇಷ, ಅಸೂಯೆ ಎಲ್ಲ ಬಿಡಬೇಕು, ಎಲ್ಲದಕ್ಕೂ ಕಡಿವಾಣ ಹಾಕಬೇಕು’ ಎಂದರು.

‘ನಮ್ಮ ತಾಯಿಯವರ ಸಿನೆಮಾ ನೋಡಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಹೇಳಿದರು. ಅದನ್ನು ಕೇಳಿ ಇನ್ನಷ್ಟು ಬೇಸರವಾಯ್ತು’ ಎಂದು ವಿನೋದ್ ರಾಜ್ ಭಾವುಕರಾದರು. ರೇಣುಕಾ ಸ್ವಾಮಿ ಕುಟುಂಬದವರನ್ನು ಸಂತೈಸಿದ ವಿನೋದ್ ರಾಜ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Fri, 26 July 24