ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಲು ವಿಷ್ಣು ಫ್ಯಾನ್ಸ್ ಪ್ರಯತ್ನ; ಅಧ್ಯಕ್ಷರು ಹೇಳೋದೇನು?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದ ಬಳಿ ವಿಷ್ಣುವರ್ಧನ್ ಫ್ಯಾನ್ಸ್ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳ ಸಾಥ್ ನೀಡಿವೆ. ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುವ ಪ್ರಯತ್ನವೂ ನಡೆದಿದೆ.
ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ ಹಾಗೂ ಪುಣ್ಯಭೂಮಿ ವಿಚಾರದಲ್ಲಿ ಮೊದಲಿನಿಂದಲೂ ಗೊಂದಲ ಇದೆ. ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ನಡೆದ ಅಭಿಮಾನ್ ಸ್ಟುಡಿಯೋ ಒಳಗೆ ಪ್ರವೇಶಿಸಲು ಫ್ಯಾನ್ಸ್ಗೆ ನಿರ್ಬಂಧ ಹೇರಲಾಗುತ್ತಿದೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರದಲ್ಲಿ ವಿಷ್ಣು ಫ್ಯಾನ್ಸ್ ತಾಳ್ಮೆ ಕಳೆದುಕೊಂಡಿದ್ದಾರೆ. ಈ ಕಾರಣದಿಂದಲೇ ಫಿಲ್ಮ್ ಚೇಂಬರ್ಗೆ ವಿಷ್ಣುವರ್ಧನ್ ಅಭಿಮಾನಿಗಳ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಏನಿದು ವಿವಾದ?
ವಿಷ್ಣುವರ್ಧನ್ ಅವರು ಮೃತಪಟ್ಟ ಬಳಿಕ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈಗ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗಿದೆ. ಆದರೆ, ಪುಣ್ಯಭೂಮಿ ಒಳಗೆ ಹೋಗಲು ಫ್ಯಾನ್ಸ್ಗೆ ನಿರ್ಬಂಧ ಹೇರಲಾಗುತ್ತಿದೆ. ಇದನ್ನು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತಿಭಟನೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದ ಬಳಿ ವಿಷ್ಣುವರ್ಧನ್ ಫ್ಯಾನ್ಸ್ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳ ಸಾಥ್ ನೀಡಿವೆ. ಮುತ್ತಿಗೆ ಹಾಕುವ ಪ್ರಯತ್ನವೂ ನಡೆದಿದೆ. ‘ವಿಷ್ಣು ಸ್ಮಾರಕ ವಿವಾದವಾಗುತ್ತಿದ್ದರೂ ಫಿಲ್ಮ್ ಚೇಂಬರ್ ನಿರಾಸಕ್ತಿ ತೋರಿಸುತ್ತಿದೆ. ಸರ್ಕಾರದ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪರ್ಕದಲ್ಲಿ ಇಲ್ಲ. ನಮ್ಮ ಮನವಿಗೂ ಯಾವುದೇ ಸ್ಪಂದನೆ ಇಲ್ಲ’ ಎಂದು ವಿಷ್ಣು ವರ್ಧನ್ ಅಭಿಮಾನಿಗಳು ಆರೋಪಿಸಿದ್ದಾರೆ.
ಅಧ್ಯಕ್ಷರು ಹೇಳೋದೇನು..
ವಿಷ್ಣುವರ್ಧನ್ ಅವರ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ಮಾತನಾಡಿದ್ದಾರೆ. ‘ವಿಷ್ಣು ಫ್ಯಾನ್ಸ್ ಮನವಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಜಾಗ ನೀಡಲಾಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಡಬೇಕು ಅಂತ ಹೋರಾಟ ನಡೆಯುತ್ತಲೇ ಬಂದಿದೆ. ಇದಕ್ಕೆ ಸ್ಪಂದಿಸುವ ಕೆಲಸ ಆಗಲಿದೆ. ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯುತ್ತೇವೆ. ಅವರಿಂದ ಉತ್ತರ ಬರುವವರೆಗೆ ನಾವು ಕಾಯಬೇಕು’ ಎಂದಿದ್ದಾರೆ ಅವರು.
ಇದನ್ನೂ ಓದಿ:
‘ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಂತಹ ಕೆಲಸವಾಗುತ್ತದೆ. ನಮ್ಮ ಬಳಿ ಮಾತನಾಡದೇ ವಾಣಿಜ್ಯ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ದೂಷಿಸೋದು ತಪ್ಪು. ವಿಷ್ಣುವರ್ಧನ್ ನಮ್ಮ ಆಸ್ತಿ’ ಎಂದು ಎನ್ಎಂ ಸುರೇಶ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ