Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾದ ಭಾಗ ಆಗಲಾರೆ’ ಎಂದು ವರ್ಷದ ಹಿಂದೆ ತಿಳಿಸಿದ್ದ ರಮ್ಯಾ, ಚಿತ್ರತಂಡವೂ ನೀಡಿತ್ತು ಒಪ್ಪಿಗೆ: ಆದರೂ ವಿವಾದವಾಗಿದ್ದು ಹೇಗೆ?

Ramya: ನಟಿ ರಮ್ಯಾ ಏಕೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ವಿರುದ್ಧ ದೂರು ನೀಡಿದರು. ಇಲ್ಲಿದೆ ನ್ಯಾಯಾಲಯಕ್ಕೆ ರಮ್ಯಾ ಸಲ್ಲಿಸಿದ ಅರ್ಜಿಯ ಸಾರಾಂಶ.

'ಸಿನಿಮಾದ ಭಾಗ ಆಗಲಾರೆ' ಎಂದು ವರ್ಷದ ಹಿಂದೆ ತಿಳಿಸಿದ್ದ ರಮ್ಯಾ, ಚಿತ್ರತಂಡವೂ ನೀಡಿತ್ತು ಒಪ್ಪಿಗೆ: ಆದರೂ ವಿವಾದವಾಗಿದ್ದು ಹೇಗೆ?
ರಮ್ಯಾ
Follow us
ಮಂಜುನಾಥ ಸಿ.
|

Updated on:Jul 20, 2023 | 9:19 PM

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru Bekagiddare) ಸಿನಿಮಾದಲ್ಲಿ ನಟಿಸಿದ್ದ ರಮ್ಯಾ (Ramya), ಸಿನಿಮಾ ಬಿಡುಗಡೆ ಆಗದಂತೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆಯಾದರೂ ರಮ್ಯಾ ವಿರುದ್ಧ ತೀರ್ಪು ಬಂದಿಲ್ಲ. ಬದಲಿಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ 50 ಲಕ್ಷ ಡೆಪಾಸಿಟ್ ಇಡುವಂತೆ ಸೂಚಿಸಿದ್ದು ಒಂದೊಮ್ಮೆ ಒಂದು ವಾರದ ಒಳಗಾಗಿ 50 ಲಕ್ಷ ಡೆಪಾಸಿಟ್ ಮಾಡದಿದ್ದಲ್ಲಿ, ತಡೆಯಾಜ್ಞೆ ತೆರವು ಆದೇಶವನ್ನು ಹಿಂಪಡೆಯುವುದಾಗಿ ನ್ಯಾಯಾಲಯ ಹೇಳಿದೆ. ಈಗ ಹೊಸದಾಗಿ ಬೆಳಕಿಗೆ ಬಂದಿರುವ ಮಾಹಿತಿಗಳ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆಯೇ ನಟಿ ರಮ್ಯಾ, ತಾವು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಭಾಗ ಆಗಿರಲಾಗದು ಎಂದಿದ್ದರು. ಅದಕ್ಕೆ ನಿರ್ಮಾಪಕರು ಒಪ್ಪಿಕೊಂಡಿದ್ದರು. ಹಾಗಿದ್ದರೂ ಈಗ ರಮ್ಯಾರ ದೃಶ್ಯಗಳನ್ನು ಒಳಗೊಂಡಂತೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.

ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮೊದಲಷ್ಟೆ ಸಮಯ ನೋಡಿ ರಮ್ಯಾ ಸಿನಿಮಾದ ವಿರುದ್ಧ ದಾವೆ ಹೂಡಿದ್ದಾರೆ ಎನ್ನಲಾಗುತ್ತಿದೆ, ಅಸಲಿಗೆ ರಮ್ಯಾ ಕಳೆದ ವರ್ಷದಿಂದಲೂ ತಾವು ಸಿನಿಮಾದ ಭಾಗ ಆಗಲಾರೆ, ತಾನು ನಟಿಸಿರುವ ಭಾಗಗಳನ್ನು ತೆಗೆದುಬಿಡಿ, ಆದರೆ ಸಿನಿಮಾದ ಪ್ರಚಾರ ಮಾಡಿಕೊಡುತ್ತೇನೆ ಎಂದು ಹೇಳಿದ್ದರಂತೆ. ಅದಕ್ಕೆ ಸಿನಿಮಾದ ನಿರ್ಮಾಪಕರು ಸಹ ಒಪ್ಪಿಕೊಂಡಿದ್ದರು ಎಂದು ಈಗ ಲಭ್ಯವಾಗಿರುವ ನ್ಯಾಯಾಲಯದ ಅರ್ಜಿಯಿಂದ ತಿಳಿದು ಬರುತ್ತಿದೆ.

ರಮ್ಯಾ ಹಾಗೂ ನಿರ್ಮಾಪಕರ ನಡುವೆ ಒಪ್ಪಂದವಾಗಿ ಎರಡು ದಿನಗಳ ಕಾಲ ರಮ್ಯಾ ಶೂಟಿಂಗ್​ನಲ್ಲಿ ಭಾಗವಹಿಸಿದ್ದರಂತೆ. ಯಾವುದೇ ದೃಶ್ಯ, ಚಿತ್ರಗಳನ್ನು ಬಹಿರಂಗಗೊಳಿಸುವ ಮುನ್ನ ಒಪ್ಪಿಗೆ ಪಡೆಯಬೇಕೆಂಬ ನಿಯಮ ಒಪ್ಪಂದದಲ್ಲಿದೆ. ಅದರಂತೆಯೇ ಚಿತ್ರತಂಡವೂ ಸಹ ಸಿನಿಮಾದ ಪ್ರೊಮೋಷನಲ್ ವಿಡಿಯೋ, ಚಿತ್ರಗಳು ಎಲ್ಲವನ್ನೂ ರಮ್ಯಾರಿಗೆ ಮೊಬೈಲ್ ಮೂಲಕ ಕಳಿಸಿ ಒಪ್ಪಿಗೆ ಪಡೆದೇ ಬಿಡುಗಡೆ ಮಾಡಿವೆ. ಆದರೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಮ್ಯಾರ ಕಮ್​ಬ್ಯಾಕ್ ಸಿನಿಮಾ ಎಂದು ಚಿತ್ರತಂಡ ಪ್ರಚಾರ ಮಾಡಿದ್ದಕ್ಕೆ ರಮ್ಯಾ ಅಪಸ್ವರ ಎತ್ತಿದ್ದಾರೆ. ಆಗ ಚಿತ್ರತಂಡದವರು ಇದು ಕೇವಲ ಪ್ರಚಾರಕ್ಕಾಗಿ ಬಳಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ವಾಟ್ಸ್​ಆಪ್​ ಚಾಟ್​ಗಳನ್ನು ರಮ್ಯಾರ ಪರ ವಕೀಲರು ಸಲ್ಲಿಸಿದ್ದಾರೆ.

ಇದನ್ನೂ ಓದಿ:Ramya: ‘ಪ್ರೋಮೋ ಮತ್ತು ಸಿನಿಮಾಗೆ ಸೇರಿ ರಮ್ಯಾ ನಟಿಸಿದ್ದರು, ಆದರೆ..’: ಅಸಲಿ ವಿಷಯ ತಿಳಿಸಿದ ಹಾಸ್ಟೆಲ್​ ಹುಡುಗರು

ಇನ್ನು 2022ರ ಅಕ್ಟೋಬರ್ ತಿಂಗಳ 3ನೇ ತಾರೀಖಿನಂದು ರೇಣುಕಾಂಬಾ ಚಿತ್ರಮಂದಿರದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಫಸ್ಟ್ ಕಟ್ ಪ್ರತಿಯನ್ನು ತೋರಿಸಿದ್ದಾರೆ. ಅದರಲ್ಲಿ ರಮ್ಯಾ ನಟಿಸಿದ್ದ ಭಾಗಗಳೂ ಇದ್ದವಂತೆ. ಅಂದು ಸಿನಿಮಾ ನೋಡಿದ್ದ ರಮ್ಯಾ, ಸಿನಿಮಾದಲ್ಲಿ ತಾವು ನಟಿಸಿರುವ ದೃಶ್ಯಗಳನ್ನು ತೆಗೆದು ಬಿಡಿ, ನಾನು ನಿಮಗೆ ಪ್ರೊಮೋಷನ್ ಮಾಡಿಕೊಡುತ್ತೇನೆ ಎಂದಿದ್ದರಂತೆ. ಅದಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರು ಒಪ್ಪಿಗೆ ಸಹ ಸೂಚಿಸಿದ್ದರೆಂದು ರಮ್ಯಾ ಪರ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ಆದರೆ ಟ್ರೈಲರ್ ಬಿಡುಗಡೆ ಆದ ಬಳಿಕ ಮೆಸೇಜ್ ಮಾಡಿದ್ದ ನಿತಿನ್, ತಾವು ಎರಡು ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದಾಗಿ, ಸಾಕಷ್ಟು ಹಣ ತೊಡಗಿಸಿರುವುದಾಗಿ, 500 ಮಂದಿ ಕಲಾವಿದರ ಭವಿಷ್ಯ ಸಿನಿಮಾದ ಮೇಲೆ ನಿಂತಿದೆ ಇತ್ಯಾದಿಗಳನ್ನು ಹೇಳಿದ್ದಾರೆ. ಟ್ರೈಲರ್​ನಿಂದಾಗಲಿ, ಸಿನಿಮಾದಿಂದಾಗಲಿ ದೃಶ್ಯಗಳನ್ನು ತೆಗೆಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಿಗೆ ರಮ್ಯಾ, ಕೋರ್ಟ್ ಮೆಟ್ಟಿಲೇರಿ, ಸಿನಿಮಾ ಬಿಡುಗಡೆ ವಿರುದ್ಧ ತಡೆಯಾಜ್ಞೆ ನೀಡಲು ಒತ್ತಾಯಿಸಿದ್ದಾರೆ.

ಆರಂಭಿಕ ವಾದ-ವಿವಾದ ಆಲಿಸಿರುವ ನ್ಯಾಯಾಲಯ, ಪ್ರಸ್ತುತ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಬಿಡುಗಡೆ ಮಾಡಲು ಹಾಗೂ ರಮ್ಯಾರ ದೃಶ್ಯಗಳನ್ನು ಉಳಿಸಿಕೊಳ್ಳುವಂತೆ ಸೂಚಿಸಿದೆ. ಆದರೆ ಪ್ರಕರಣ ಇನ್ನೂ ಅಂತ್ಯವಾಗಿಲ್ಲ. ಸದ್ಯಕ್ಕೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ 50 ಲಕ್ಷ ಡೆಪಾಸಿಟ್ ಇಡಲು ಸೂಚಿಸಿದ್ದು, ಜುಲೈ 27ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ. ಒಂದೊಮ್ಮೆ ಪ್ರಕರಣ ರಮ್ಯಾ ಪರವಾದರೆ ಚಿತ್ರತಂಡ ರಮ್ಯಾರಿಗೆ 1 ಕೋಟಿ ಹಣ ನೀಡಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Thu, 20 July 23