ಅಕಾಲಿಕ ಸಾವಿಗೀಡಾದ ಸೌಂದರ್ಯ ಹೇಳಿದ್ದ ಕೊನೆಯ ಮಾತು, ಇಟ್ಟಿದ್ದ ಕೊನೆಯ ಬೇಡಿಕೆ ಏನಾಗಿತ್ತು?
Soundarya: ಅಪ್ರತಿಮ ಸುಂದರಿ ಸೌಂದರ್ಯಾ, ತಮ್ಮನ್ನು ಇಹಲೋಕದಿಂದ ದೂರ ಕರೆದೊಯ್ದ ಆ ಲಘು ವಿಮಾನ ಏರುವ ಮುನ್ನ ಏನು ಹೇಳಿದ್ದರು? ಏನು ಬೇಡಿಕೆ ಇಟ್ಟಿದ್ದರು?
ಹೆಸರಿಗೆ ತಕ್ಕಂತೆ ಸೌಂದರ್ಯ (Soundarya) ರಾಶಿಯಾಗಿದ್ದ ಸೌಂದರ್ಯಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ ನೆರೆ-ಹೊರೆಯ ಚಿತ್ರರಂಗಗಳಲ್ಲಿಯೂ ಅಪಾರ ಅಭಿಮಾನಿ ವರ್ಗ ಹೊಂದಿದ್ದರು. ಆದರೆ 2004 ರ ಜುಲೈ 7ರಂದು ಸೌಂದರ್ಯಾ ಪ್ರಯಾಣಿಸುತ್ತಿದ್ದ ಲಘು ವಿಮಾನ ನೆಲಕ್ಕೆ ಅಪ್ಪಳಿಸಿ ಅವರು ನಿಧನ ಹೊಂದಿದರು. ಸೌಂದರ್ಯಾ ಎರಡು ದಶಕವಾಗುತ್ತಾ ಬಂದಿದ್ದರೂ ಈಗಲೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಅವರ ಚಿತ್ರ, ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆ ಕಾಲಕ್ಕೆ ಸ್ಟಾರ್ ನಟಿಯಾಗಿದ್ದ ಸೌಂದರ್ಯಾ, ತಮ್ಮನ್ನು ಇಹಲೋಕದಿಂದ ದೂರ ಕೊಂಡೊಯ್ದ ಆ ಲಘು ವಿಮಾನ ಹತ್ತುವ ಮುನ್ನ ಏನು ಮಾತನಾಡಿದ್ದರು? ಅವರು ಇಟ್ಟಿದ್ದ ಬೇಡಿಕೆ ಏನು? ಇಲ್ಲಿದೆ ವಿವರ…
ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿಯೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸೌಂದರ್ಯಾ ಆಗಿನ ಕಾಲಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹೀಗಿರುವಾಗ ರಾಜಕೀಯದಲ್ಲಿಯೂ ಆಸಕ್ತಿ ಬೆಳೆಸಿಕೊಂಡು 2004 ರಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ಈಗಿನ ತೆಲಂಗಾಣದ ಕರೀಂನಗರದಲ್ಲಿ ಆಯೋಜಿತವಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು 2004 ರ ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ತೆರಳುತ್ತಿದ್ದ ವೇಳೆ ವಿಮಾನ ಟೇಕ್ಆಫ್ ಕೆಲವೇ ನಿಮಿಷದಲ್ಲಿ ಉರಿದು ನೆಲಕ್ಕೆ ಅಪ್ಪಳಿಸಿ ಸೌಂದರ್ಯಾ ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಆದರೆ ಸೌಂದರ್ಯಾ, ಆ ಲಘು ವಿಮಾನ ಏರುವ ಮುನ್ನ ಏನು ಮಾತನಾಡಿದ್ದರು ಎಂಬುದನ್ನು ಅವರ ಅತ್ತಿಗೆ ಹೇಳಿದ್ದಾರೆ. ಸಾಯುವ ಮುನ್ನ ಸೌಂದರ್ಯಾ ತಮಗೆ ಕಾಟನ್ ಸೀರೆ ಹಾಗೂ ಕುಂಕುಮ ಬೇಕಿದೆ ಎಂದು ಕೇಳಿದ್ದರಂತೆ. ಬಿಜೆಪಿಗೆ ಬೆಂಬಲ ಸೂಚಿಸಿದ್ದ ಸೌಂದರ್ಯಾ, ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂಬ ಕಾರಣದಿಂದ ತಮಗೆ ಕಾಟನ್ ಸೀರೆಗಳು ಬೇಕಾಗಿವೆ ಅವನ್ನು ಖರೀದಿಸುವಂತೆ ಹೇಳಿದ್ದರಂತೆ. ಸೌಂದರ್ಯಾ ಬಳಿ ಕಾಟನ್ ಸೀರೆಗಳು ಇರಲಿಲ್ಲವಂತೆ. ಹಾಗೂ ಸೌಂದರ್ಯ ಸದಾ ಹಣೆಗೆ ಕುಂಕುಮ ಧರಿಸುತ್ತಿದ್ದರು ಆದರೆ ಅಂದು ಕುಂಕುಮ ಸಿಗದ ಕಾರಣ ತಮಗೆ ಅದು ಬೇಕಾಗಿದೆ ಎಂದು ವಿಮಾನ ಏರುವ ಮುನ್ನ ಪ್ರಯತ್ನಿಸಿದರಾದರೂ ಸಿಗಲಿಲ್ಲವಂತೆ.
ಅತ್ತಿಗೆಯ ಬಳಿ ಸೀರೆ ಹಾಗೂ ಕುಂಕುಮದ ಬಗ್ಗೆ ಮಾತನಾಡಿದ ಬಳಿಕ ಅವರು ವಿಮಾನ ಏರಲು ಹೋದವರು ವಾಪಸ್ಸಾಗಲೇ ಇಲ್ಲ. ಸೆಸ್ಸಾ 180 ಮಾದರಿಯ ಲಘು ವಿಮಾನದಲ್ಲಿ ಅವರು ಬೆಂಗಳೂರಿನಿಂದ ಕರೀಂನಗರಕ್ಕೆ ತೆರಳುತ್ತಿದ್ದರು ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಆಕಾಶದಲ್ಲಿಯೇ ಬೆಂಕಿ ಹೊತ್ತುಕೊಂಡು ಕೆಳಗೆ ಬಿತ್ತು. ಸೌಂದರ್ಯಾ ಏರಿದ್ದ ವಿಮಾನ 100 ಅಡಿ ಎತ್ತರವನ್ನೂ ತಲುಪಿರಲಿಲ್ಲ ಆಗಲೇ ತಾಂತ್ರಿಕ ಸಮಸ್ಯೆಯಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಉರಿದು ಜಿಕೆವಿಕೆ ಕಾಂಪೌಂಡ್ ಒಳಗೆ ಬಿದ್ದಿತ್ತು. ಸೌಂದರ್ಯಾ ವಿಮಾನದಲ್ಲಿ ಉರಿದು ಭಸ್ಮವಾಗಿದ್ದರು.
ಕನ್ನಡತಿ ಸೌಂದರ್ಯಾ 1992 ರಲ್ಲಿ ಬಾ ನನ್ನ ಪ್ರೀತಿಸು ಹೆಸರಿನ ಸಿನಿಮಾ ಮೂಲಕ ನಟನೆಗೆ ಪ್ರವೇಶಿಸಿದರು. ಸಿನಿಮಾಕ್ಕಾಗಿ ಎಂಬಿಬಿಎಸ್ ಓದನ್ನು ಮೊದಲಲ್ಲೇ ಬಿಟ್ಟು ಬಂದಿದ್ದರು ಸೌಂದರ್ಯಾ. ಸಿನಿಮಾಕ್ಕೆ ಕಾಲಿಟ್ಟ ಮೊದಲ ವರ್ಷವೇ ಸತತವಾಗಿ ನಾಲ್ಕು ಸಿನಿಮಾಗಳಲ್ಲಿ ನಟಸಿದ ಸೌಂದರ್ಯಾ 1993ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು. ತೆಲುಗು ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿಬಿಟ್ಟ ಸೌಂದರ್ಯಾ ಆಗಿನ ಎಲ್ಲ ಸ್ಟಾರ್ ನಟರೊಟ್ಟಿಗೆ ನಟಿಸಿದರು. ಚಿತ್ರರಂಗದಲ್ಲಿ ಇದ್ದ 12 ವರ್ಷಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ ಸೌಂದರ್ಯಾ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Wed, 28 June 23