ದರ್ಶನ್ (Darshan) ನಟನೆಯ ‘ಕಾಟೇರ’ (Kaatera) ಸಿನಿಮಾ ಇಂದು (ಡಿಸೆಂಬರ್ 29) ಬಿಡುಗಡೆ ಆಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಬೆಂಗಳೂರಿನಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಮೊದಲ ದಿನ ಒಂದೊಂದು ಚಿತ್ರಮಂದಿರಗಳಲ್ಲಿ ಆರು, ಕೆಲವೊಂದು ಚಿತ್ರಮಂದಿರಗಳಲ್ಲಿ ಏಳು ಶೋಗಳನ್ನು ಸಹ ಪ್ರದರ್ಶಿಸಲಾಗಿದೆ. ಮೊದಲ ದಿನವೇ ‘ಕಾಟೇರ’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ್ಶನ್, ಮಾಸ್ ಜೊತೆಗೆ ಕಂಟೆಂಟ್ ಉಳ್ಳ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇತ್ತೀಚೆಗೆ ಯಾವುದೇ ಸಿನಿಮಾಕ್ಕೂ ಸೀಕ್ವೆಲ್ ಮಾಡುವ ಪರಿಪಾಠ ಹೆಚ್ಚಾಗಿದೆ. ‘ಬಾಹುಬಲಿ 1 ಹಾಗೂ 2 ನಿಂದ ಪ್ರಾರಂಭವಾಗಿರುವ ಈ ಪರಿಪಾಠ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಇದು ನಿರ್ಮಾಪಕರಿಗೆ ಲಾಭದಾಯಕವೂ ಸಹ ಎನ್ನಲಾಗುತ್ತಿದೆ. ಇದೀಗ ಮೊದಲ ದಿನವೇ ‘ಕಾಟೇರ’ ಸಿನಿಮಾ ಗೆಲುವಿನ ಮುನ್ಸೂಚನೆ ನೀಡಿದ್ದು, ಈ ಸಿನಿಮಾದ ಸೀಕ್ವೆಲ್ ಬರಲಿದೆಯೇ ಎಂಬ ಪ್ರಶ್ನೆ ಮೊದಲ ದಿನವೇ ಹುಟ್ಟಿದೆ.
‘ಕಾಟೇರ’ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಮಾತನಾಡಿದ್ದು, ‘ಕಾಟೇರ’ ಸಿನಿಮಾದ ಎರಡನೇ ಭಾಗ ಬರುವುದಿಲ್ಲ, ನಾವು ಕತೆಯನ್ನು ಸರಿಯಾಗಿ ಪೂರ್ಣ ಮಾಡಿದ್ದೀವಿ, ಯಾವುದೇ ಓಪನ್ ಎಂಡ್ ಅನ್ನು ನೀಡಿಲ್ಲ. ಹೊಸ ಕತೆಯನ್ನು ಇದಕ್ಕಿಂತಲೂ ಚೆನ್ನಾಗಿ ಮಾಡುವ ಪ್ರಯತ್ನ ಮಾಡುತ್ತೇವೆ. ಹೊಸ ಕತೆಯೊಟ್ಟಿಗೆ ಜನರ ಮುಂದೆ ಬರುತ್ತೇವೆ’’ ಎಂದಿದ್ದಾರೆ.
ಇದನ್ನೂ ಓದಿ:‘ದರ್ಶನ್ ಜತೆ ಸಿನಿಮಾ ಸಿಕ್ಕಾಗ ಇವಳು ನಿದ್ರೆಯೇ ಮಾಡಲಿಲ್ಲ’: ಮಗಳ ಬಗ್ಗೆ ಮಾಲಾಶ್ರಿ ಮಾತು
‘ಕಾಟೇರ’ ಸಿನಿಮಾದಲ್ಲಿ ಜಾತಿ, ಮಹಿಳಾ ದೌರ್ಜನ್ಯ ಇನ್ನಿತರೆ ಅಂಶಗಳನ್ನು ಕೇವಲ ಹೀರೋ ಬಿಲ್ಡಪ್ಗಾಗಿ ಅಲ್ಲದೆ, ಸೂಕ್ಷ್ಮ ಚರ್ಚೆ, ವಿಮರ್ಶೆಗೆ ಒಳಪಡಿಸಿರುವ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಈ ಹಿಂದೆ ಮಾಸ್ ಇಮೇಜಿಗೆ ಹೆಚ್ಚು ಜೋತು ಬಿದ್ದಿದ್ದ ನಟ ದರ್ಶನ್, ಈ ಸಿನಿಮಾದಲ್ಲಿ ಮಾಸ್ ಇಮೇಜಿನಿಂದ ಹೊರಬಂದು ಕತೆಗೆ, ಕತೆ ಹೇಳುತ್ತಿರುವ ಸಂದೇಶಕ್ಕೆ ಹೆಚ್ಚು ಸ್ಪೇಸ್ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
‘ಕಾಟೇರ’ ಸಿನಿಮಾವು ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಮಾಡಿದ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಶ್ರುತಿ, ಕುಮಾರ್ ಗೋವಿಂದ್, ಬಿರಾದರ ಇನ್ನೂ ಹಲವು ನಟರು ಪ್ರಧಾನ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ಲೈನ್ ವೆಂಕಟೇಶ್ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ