ನಟ ಯಶ್ (Yash) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದ ಬಿಡುಗಡೆಗಾಗಿ ಎಲ್ಲರೂ ಕಾದಿದ್ದಾರೆ. ಕೊವಿಡ್ ಕಾರಣದಿಂದ ಅಭಿಮಾನಿಗಳ ಜೊತೆ ಬೆರೆಯಲು ಯಶ್ಗೆ ಸಾಧ್ಯವಾಗುತ್ತಿಲ್ಲ. ಕಳೆದೆರಡು ವರ್ಷದಿಂದ ಅವರು ಬರ್ತ್ಡೇ (Yash Birthday) ಆಚರಿಸಿಕೊಂಡಿಲ್ಲ. ಈ ವರ್ಷ ಕೂಡ ಯಶ್ ಹುಟ್ಟುಹಬ್ಬವನ್ನು (ಜ.8) ಅಭಿಮಾನಿಗಳ ಜತೆ ಸೇರಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ‘ರಾಕಿಂಗ್ ಸ್ಟಾರ್’ ಜನ್ಮದಿನದ ಬಗ್ಗೆ ಫ್ಯಾನ್ಸ್ ತುಂಬ ಎಗ್ಸೈಟ್ ಆಗಿದ್ದಾರೆ. ಎಷ್ಟರಮಟ್ಟಿಗೆಂದರೆ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ರಜೆ ಬೇಕು ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಆ ಲೆಟರ್ ಈಗ ವೈರಲ್ ಆಗಿದೆ.
ಬಿ.ಕಾಂ ಮೂರನೇ ಸೆಮ್ನಲ್ಲಿ ಓದುತ್ತಿರುವ ಕೆ. ಶಿವಕುಮಾರ್ ಎಂಬ ವಿದ್ಯಾರ್ಥಿ ಈ ರೀತಿ ಪತ್ರ ಬರೆದಿದ್ದಾನೆ. ‘ಯಶ್ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಜ.7ರಂದು ಟ್ವಿಟರ್ನಲ್ಲಿ ಎಲ್ಲ ಅಭಿಮಾನಿಗಳು 24 ಗಂಟೆಗಳ ಟ್ರೆಂಡ್ನಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕೂಡ ಭಾಗವಹಿಸಿ ಯಶ್ ಅಣ್ಣನ ಜನ್ಮದಿನದ ಶುಭಾಶಯಗಳನ್ನು ತಿಳಿಸಬೇಕೆಂದು ನಿರ್ಧಾರ ಮಾಡಾಗಿದೆ. ಆದ ಕಾರಣ ನನಗೆ ಇದೇ ಜ.7ರಂದು ರಜಾ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಆತ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ.
‘ನನ್ನ ಇತರೆ ಸ್ನೇಹಿತರಿಗೂ ರಜೆ ಕೊಡಿ. ಅವರು ಕೂಡ ಯಶ್ ಬಾಸ್ಗೆ ವಿಶ್ ಮಾಡಲಿದ್ದಾರೆ. ಜ.7ರ ಸಂಜೆ 7 ಗಂಟೆಯಿಂದ ಜ.8ರ ಸಂಜೆ 7 ಗಂಟೆವರೆಗೆ ನಿರಂತರ ಹುಟ್ಟುಹಬ್ಬದ ವಿಶ್ ಮಾಡ್ತಾಯಿರಿ’ ಎಂದು ಯಶ್ ಅಭಿಮಾನಿ ಬರೆದ ಪತ್ರ ಈಗ ವೈರಲ್ ಆಗಿದೆ.
‘ನಾನು ಯಶ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಪ್ರಾಂಶುಪಾಲರಿಗೆ ನಾನು ಲೆಟರ್ ಬರೆದಿದ್ದೆ. ಅವರು ರಜೆ ಕೊಟ್ಟರೆ ಮನೆಯಲ್ಲೇ ಯಶ್ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ. ನನ್ನ ಸ್ನೇಹಿತರೆಲ್ಲ ಇದನ್ನು ತಮಾಷೆ ಎಂದುಕೊಂಡಿದ್ರು. ಇದು ಇಷ್ಟು ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಯಶ್ ಅವರ ಎಲ್ಲ ಸಿನಿಮಾವನ್ನು ನಾನು ನೋಡಿದ್ದೇನೆ. ಗೂಗ್ಲಿ ಸಿನಿಮಾದಿಂದ ಅವರಿಗೆ ಫ್ಯಾನ್ ಆಗಿದ್ದೇನೆ. ಪ್ರತಿ ದಿನ ನಾನು ವಾಟ್ಸಪ್ ಸ್ಟೇಟಸ್ ಹಾಕುತ್ತೇನೆ. ಅವರು ನನ್ನ ಆರಾಧ್ಯ ದೈವ. ನಮ್ಮ ತಾಯಿಯನ್ನು ಬಿಟ್ಟರೆ ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಯಶ್ ಅವರನ್ನು. ನನ್ನ ರಕ್ತದ ಕಣ ಕಣದಲ್ಲೂ ಯಶ್ ಬಾಸ್ ಹೆಸರು ಕೂಗಿ ಹೇಳುತ್ತೇನೆ’ ಎಂದು ಶಿವಕುಮಾರ್ ಹೇಳಿರುವ ವಿಡಿಯೋ ಇಲ್ಲಿದೆ..
ಇದನ್ನೂ ಓದಿ:
ಯಶ್ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು
‘ಕೆಜಿಎಫ್ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ಸಿನಿಮಾ; ಗೆಲ್ಲೋದು ಯಶ್ ಎಂದ ಫ್ಯಾನ್ಸ್