ಎಂಟು ವರ್ಷದ ಹಿಂದೆ ಇದೇ ದಿನ ಶುರುವಾಗಿತ್ತು ಇತಿಹಾಸ ಸೃಷ್ಟಿಸಿದ ಕನ್ನಡ ಸಿನಿಮಾ

|

Updated on: Mar 15, 2025 | 6:05 PM

Yash: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತನಗೆಂದು ಮಹತ್ವದ ಸ್ಥಾನ ಸಂಪಾದಿಸಿದ ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಪ್ರಾರಂಭವಾಗಿ ಇಂದಿಗೆ ಬರೋಬ್ಬರಿ ಎಂಟು ವರ್ಷ. ‘ಕೆಜಿಎಫ್’ ಸಿನಿಮಾ, ಕನ್ನಡಿಗರಿಗೆ ಆತ್ಮವಿಶ್ವಾಸ ತುಂಬಿದ ಸಿನಿಮಾ, ಪರಭಾಷೆಯವರ ಮುಂದೆ ಎದೆಯುಬ್ಬಿಸುವಂತೆ ಮಾಡಿದ ಸಿನಿಮಾ, ಕನ್ನಡಿಗರು ಸಹ ಸಾಧಿಸಬಲ್ಲರು ಎಂಬುದನ್ನು ತೋರಿಸಿದ ಸಿನಿಮಾ, ಕನಸು ಕಂಡರೆ, ಅದಕ್ಕೆ ತಕ್ಕಂತೆ ಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿದ ಸಿನಿಮಾ. ಹಾಗಾಗಿ ಆ ಸಿನಿಮಾ ಮಹತ್ವದ್ದು.

ಎಂಟು ವರ್ಷದ ಹಿಂದೆ ಇದೇ ದಿನ ಶುರುವಾಗಿತ್ತು ಇತಿಹಾಸ ಸೃಷ್ಟಿಸಿದ ಕನ್ನಡ ಸಿನಿಮಾ
Kgf Movie
Follow us on

ಕನ್ನಡ ಚಿತ್ರರಂಗದ (Sandalwood) ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಸಿನಿಮಾ ‘ಕೆಜಿಎಫ್’. ‘ಕೆಜಿಎಫ್’ಗಿಂತಲೂ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಹಲವು ಬಂದಿರಬಹುದು, ಆದರೆ ‘ಕೆಜಿಎಫ್’ ಸಿನಿಮಾ ಹಲವು ಬೇರೆ ಬೇರೆ ಕಾರಣಗಳಿಗೆ ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ‘ಕೆಜಿಎಫ್’ ಸಿನಿಮಾ, ಕನ್ನಡಿಗರಿಗೆ ಆತ್ಮವಿಶ್ವಾಸ ತುಂಬಿದ ಸಿನಿಮಾ, ಪರಭಾಷೆಯವರ ಮುಂದೆ ಎದೆಯುಬ್ಬಿಸುವಂತೆ ಮಾಡಿದ ಸಿನಿಮಾ, ಕನ್ನಡಿಗರು ಸಹ ಸಾಧಿಸಬಲ್ಲರು ಎಂಬುದನ್ನು ತೋರಿಸಿದ ಸಿನಿಮಾ, ಕನಸು ಕಂಡರೆ, ಅದಕ್ಕೆ ತಕ್ಕಂತೆ ಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿದ ಸಿನಿಮಾ. ಹಾಗಾಗಿ ಆ ಸಿನಿಮಾ ಮಹತ್ವದ್ದು.

ವಿಶೇಷವೆಂದರೆ ಇದೇ ಅಂದರೆ ಮಾರ್ಚ್ 15 ರಂದೇ ಸರಿಯಾಗಿ ಇಂದಿಗೆ ಎಂಟು ವರ್ಷಗಳ ಹಿಂದೆ ‘ಕೆಜಿಎಫ್’ ಸಿನಿಮಾದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ಯಶ್ ಪಾಲ್ಗೊಂಡಿದ್ದರು. 2017ರ ಮಾರ್ಚ್ 15 ರಂದು ‘ಕೆಜಿಎಫ್’ ಸಿನಿಮಾ ಸೆಟ್​ನಿಂದ ಚಿತ್ರವೊಂದನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದ ನಟ ಯಶ್ ‘ಕೆಜಿಎಫ್ ಬಿಗೀನ್ಸ್’ ಎಂದು ಬರೆದುಕೊಂಡಿದ್ದರು. 2017ರ ಮಾರ್ಚ್ 15ಕ್ಕೆ ಮುಂಚೆ ‘ಕೆಜಿಎಫ್’ ಬಗ್ಗೆ ಯಾವುದೇ ಪೋಸ್ಟ್ ಅನ್ನು ಅವರು ಹಂಚಿಕೊಂಡಿರಲಿಲ್ಲ. ಎಂಟು ವರ್ಷದ ಹಿಂದೆ ಇದೇ ದಿನ ಮೊದಲ ಬಾರಿಗೆ ‘ಕೆಜಿಎಫ್’ ಬಗ್ಗೆ ಪೋಸ್ಟ್ ಹಂಚಿಕೊಂಡು, ‘ಶುರುವಾಗಿದೆ’ ಎಂದಿದ್ದರು ಯಶ್. ಆ ನಂತರ ನಡೆದಿದ್ದೆಲ್ಲ ಇತಿಹಾಸವೇ.

ಯಶ್, 2016-17ರ ಸಂದರ್ಭದಲ್ಲಿ ಯಶ್, ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಅದೇ ಸಂದರ್ಭದಲ್ಲಿ ‘ಕೆಜಿಎಫ್’ ಸಿನಿಮಾ ಪ್ರಾರಂಭಿಸಿದರು. ಮಾರ್ಚ್ 15 ರಂದು ಚಿತ್ರೀಕರಣ ಪ್ರಾರಂಭ ಆದ ಈ ಸಿನಿಮಾ ಬಿಡುಗಡೆ ಆಗಿದ್ದು 2018ರ ಡಿಸೆಂಬರ್ 21ಕ್ಕೆ. ಬಿಡುಗಡೆಗೆ ಒಂದೂವರೆ ವರ್ಷ ತೆಗೆದುಕೊಂಡಿತು. ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ಯಶ್ ಮಾಡಿದ್ದರು. ಮುಂಬೈಗೆ ಹೋಗಿ ನ್ಯೂಸ್ ಚಾನೆಲ್​ಗಳು, ಸಣ್ಣ-ದೊಡ್ಡ ಎಲ್ಲ ಬಗೆಯ ಯೂಟ್ಯೂಬ್ ಚಾನೆಲ್​ಗಳಿಗೆ ಸಹ ಸಂದರ್ಶನ ನೀಡಿದ್ದರು. ಚೆನ್ನೈ, ಹೈದರಾಬಾದ್, ಕೊಚ್ಚಿ ಎಲ್ಲೆಡೆ ಓಡಾಡಿ ಸಿನಿಮಾದ ಪ್ರಚಾರ ಮಾಡಿದರು. ಅದರಂತೆ ಯಶ್​ ಅವರ ಶ್ರಮ ವ್ಯರ್ಥ ಆಗಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಇತಿಹಾಸವನ್ನೇ ಬರೆಯಿತು.

ಇದನ್ನೂ ಓದಿ:ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಇದು ಕನ್ನಡ ಚಿತ್ರರಂಗದ ಹೆಮ್ಮೆ

ಯಶ್ ಇದೀಗ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಪ್ರಾರಂಭವಾಗಿ ಎರಡು ವರ್ಷವಾಗುತ್ತಾ ಬಂದಿದೆ. ಸಿನಿಮಾದ ಚಿತ್ರೀಕರಣ ಶುರುವಾಗಿ ವರ್ಷವಾಗುತ್ತಾ ಬಂದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಮುಂಬೈ ಹಾಗೂ ಇತರೆ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಅನ್ನು ಹಾಲಿವುಡ್ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾ, ಕನ್ನಡ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದ ನಿರ್ದೇಶನವನ್ನು ಗೀತು ಮೋಹನ್ ದಾಸ್ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್​ರ ಮಾನ್ಸ್ಟರ್​ ಮೈಂಡ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ