
ಬೆಂಗಳೂರಿನ ಮಾಲ್ ಒಂದರಲ್ಲಿ ಇಂದು ನಿರೀಕ್ಷಿತ ‘ರಾಮಾಯಣ’ ಚಿತ್ರದ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ. ಬಹುನಿರೀಕ್ಷಿತ ಈ ಪ್ಯಾನ್ ಇಂಡಿಯಾ ಪೌರಾಣಿಕ ಸಿನಿಮಾದ ಪ್ರಚಾರಕ್ಕಾಗಿ ಇಡೀ ಚಿತ್ರತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ಕರುನಾಡಿನ ನೆಚ್ಚಿನ ನಟ ‘ರಾಕಿಂಗ್ ಸ್ಟಾರ್’ ಯಶ್ ಸೇರಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಜನಪ್ರಿಯ ನಟಿ ಸಾಯಿ ಪಲ್ಲವಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇದಿಕೆ ಮೇಲೆ ಯಶ್ ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಯಶ್ ಅಭಿನಯದ ಬಹುಕೋಟಿ ವೆಚ್ಚದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ನಿರೀಕ್ಷಿತ ಮಟ್ಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಯಿತು. ಚಿತ್ರದ ಫಲಿತಾಂಶ ಹಾಗೂ ಬಾಕ್ಸ್ ಆಫೀಸ್ ಹಿನ್ನಡೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ನೆಗೆಟಿವಿಟಿ ಬಗ್ಗೆ ಯಶ್ ಇದುವರೆಗೆ ಯಾವುದೇ ಅಧಿಕೃತ ಪೋಸ್ಟ್ ಮಾಡಿಲ್ಲ ಅಥವಾ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಯಶ್ ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಈಗ ‘ರಾಮಾಯಣ’ ಚಿತ್ರದಲ್ಲಿ ಪ್ರಮುಖವಾದ ರಾವಣ ಪಾತ್ರದಲ್ಲಿ ನಟಿಸಿರುವ ಯಶ್, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ‘ಟಾಕ್ಸಿಕ್’ ಸಿನಿಮಾದ ಸೋಲು ಹಾಗೂ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಮೌನ ಮುರಿಯಲಿದ್ದಾರಾ ಎಂಬುದು ಯಶ್ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರಿಯರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯಾಗಿದೆ. ಇಷ್ಟು ದಿನಗಳ ಬಳಿಕ ತಮ್ಮದೇ ಸ್ವಂತೂರಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಅವರು ಮಾಧ್ಯಮಗಳ ಅಥವಾ ಅಭಿಮಾನಿಗಳ ಪ್ರಶ್ನೆಗಳಿಗೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ ಎಂಬ ಕಾತರ ಗರಿಗೆದರಿದೆ.
ಇದನ್ನೂ ಓದಿ: ‘ಕೆಜಿಎಫ್ ಸ್ಟೈಲ್ ರಿಪೀಟ್ ಆಗಿದೆ’; ರಾಮಾಯಣದ ಯಶ್ ಗೆಟಪ್ ಬಗ್ಗೆ ಬಾಲಿವುಡ್ ನಟನ ಟೀಕೆ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಗಳು ಈಗ ಗರಿಕೇರಿದ್ದು, ಇಂದಿನ ಈವೆಂಟ್ ಯಶ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಸ್ಯಾಂಡ್ವುಡ್ಗೆ ಅತ್ಯಂತ ಕುತೂಹಲದ ಕ್ಷಣವಾಗಿ ಬದಲಾಗಿದೆ. ಇನ್ನು, ‘ರಾಮಾಯಣ’ ಈವೆಂಟ್ನಲ್ಲಿ ವಿಶೇಷ ವಿಡಿಯೋ ಒಂದನ್ನು ಪ್ರದರ್ಶನ ಮಾಡಲು ತಂಡ ನಿರ್ಧರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.