‘ಕೆಜಿಎಫ್ ಸ್ಟೈಲ್ ರಿಪೀಟ್ ಆಗಿದೆ’; ರಾಮಾಯಣದ ಯಶ್ ಗೆಟಪ್ ಬಗ್ಗೆ ಬಾಲಿವುಡ್ ನಟನ ಟೀಕೆ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ ಯಶ್ ಅವರ ಲುಕ್ ಕುರಿತು ನಟ ಆರ್ಯ ಬಬ್ಬರ್ ಪ್ರಶ್ನೆ ಎತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಇದ್ದ ಅದೇ ಗಡ್ಡದ ಗೆಟಪ್ ಇಲ್ಲೂ ಇದ್ದು, ಹೊಸತನವೇನೂ ಇಲ್ಲ ಎಂದಿರುವ ಅವರು, ಆದಿಪುರುಷ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅವರ ನಟನೆಯನ್ನು ಮುಕ್ತಕಂಠದಿಂದ ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಾಂಶಗಳು
- ಯಶ್ ಲುಕ್ ಬಗ್ಗೆ ಆರ್ಯ ಬಬ್ಬರ್ ಪ್ರಶ್ನೆ
- 'ಕೆಜಿಎಫ್' ನಂತೆ ಇದೆ ರಾಮಾಯಣದ ರಾವಣನ ಗೆಟಪ್ ಎಂದ ನಟ
- ಯಶ್ ಅವರ ಲುಕ್ನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದ ಆರ್ಯ
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ನಟ ಯಶ್ ಅವರ ರಾವಣನ ಗೆಟಪ್ ಕುರಿತು ಬಾಲಿವುಡ್ ನಟ ಆರ್ಯ ಬಬ್ಬರ್ ಅಚ್ಚರಿಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಯಾವ ರೀತಿಯ ಗಡ್ಡ ಹಾಗೂ ಹೇರ್ಸ್ಟೈಲ್ ಹೊಂದಿದ್ದರೋ, ‘ರಾಮಾಯಣ’ದಲ್ಲೂ ಅದೇ ಲುಕ್ ಮುಂದುವರಿದಿದೆ ಎಂದು ಅವರು ಟೀಕಿಸಿದ್ದಾರೆ. ಹೊಸ ಸಿನಿಮಾದಲ್ಲಿ ಯಶ್ ಅವರ ರಾವಣನ ಪಾತ್ರದ ಗೆಟಪ್ನಲ್ಲಿ ಯಾವುದೇ ಹೊಸತನವಿಲ್ಲ ಎಂದು ಆರ್ಯ ಬಬ್ಬರ್ ನೇರವಾಗಿ ಅಭಿಪ್ರಾಯಪಟ್ಟಿದ್ದಾರೆ.
ಓಮ್ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾವು ಪಾತ್ರಗಳ ವಿಭಿನ್ನ ಚಿತ್ರಣದಿಂದಾಗಿ ವಿವಾದಕ್ಕೆ ಗುರಿಯಾಗಿತ್ತು. ಸೈಫ್ ಅಲಿ ಖಾನ್ ಅವರ ರಾವಣನ ಲುಕ್ ಮತ್ತು ನಟನೆ ಕೂಡ ತೀವ್ರ ಟೀಕೆಗೆ ಒಳಗಾಗಿತ್ತು. ಆದರೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಆರ್ಯ ಬಬ್ಬರ್, ‘ಆದಿಪುರುಷ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅತ್ಯಂತ ಉತ್ತಮವಾಗಿ ನಟಿಸಿದ್ದರು’ ಎಂದು ಸಮರ್ಥಿಸಿಕೊಂಡಿದ್ದಾರೆ. ‘ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟರು ಅಭಿನಯಿಸುತ್ತಾರೆಯೇ ಹೊರತು ಅದರಲ್ಲಿ ನಟರ ತಪ್ಪಿಲ್ಲ’ ಎಂದಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ರಾವಣಣ ಪಾತ್ರ ಮಾಡಿರುವ ಯಶ್ ಅವರ ಗೆಟಪ್ ಬಗ್ಗೆ ಅವರು ಬೇರೆಯದೇ ಆದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ‘ಯಶ್ ಅವರ ಮೇಕಪ್ ಮತ್ತು ಕಾಸ್ಟ್ಯೂಮ್ಸ್ ಬಿಟ್ಟರೆ ಅವರ ಮುಖದ ಗೆಟಪ್ನಲ್ಲಿ ಹೊಸತನವೇ ಕಾಣುತ್ತಿಲ್ಲ. ಈ ಹಿಂದೆ ಕೆಜಿಎಫ್ ಚಿತ್ರದಲ್ಲಿ ನಾವು ಯಾವ ರೀತಿಯ ಗಡ್ಡ ಮತ್ತು ಮೀಸೆಯನ್ನು ನೋಡಿದ್ದೆವೋ, ಅದೇ ಲುಕ್ ಇಲ್ಲೂ ಪುನರಾವರ್ತನೆಯಾಗಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಯಶ್ ಮುಂದಿನ ಸಿನಿಮಾಕ್ಕೆ ತೆಲುಗಿನ ನಿರ್ದೇಶಕನ ಜೊತೆ ಮಾತುಕತೆ, ಯಾರದು?
ಸಿನಿಮಾದಲ್ಲಿ ಯಶ್ ಅವರ ನಟನೆ ಅತ್ಯುತ್ತಮವಾಗಿರುತ್ತದೆ ಎಂಬ ಭರವಸೆಯನ್ನು ಆರ್ಯ ವ್ಯಕ್ತಪಡಿಸಿದ್ದಾರೆ. ತೆರೆಮೇಲೆ ಯಶ್ ಅವರ ಅಭಿನಯ ನೋಡಿದಾಗ ಸಂಪೂರ್ಣವಾಗಿ ಭಿನ್ನವಾದ ಅನುಭವ ಸಿಗಬಹುದು ಎಂದು ಆಶಾವಾದ ತೋರಿದ್ದಾರೆ. ತಾವು ರಂಗಭೂಮಿಯಲ್ಲಿ ಮಾಡುತ್ತಿರುವ ರಾವಣನ ಪಾತ್ರಕ್ಕೂ, ಸಿನಿಮಾಗಳಲ್ಲಿ ಬರುವ ರಾವಣನ ಪಾತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ನಟ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:11 pm, Wed, 14 October 26




