ಹಿಂದಿಯಲ್ಲಿ ಒಂದೇ ದಿನ 30,000 ‘ಟಾಕ್ಸಿಕ್’ ಟಿಕೆಟ್ ಮಾರಾಟ; 50 ಕೋಟಿ ರೂ. ಓಪನಿಂಗ್ ಖಚಿತ
‘ಟಾಕ್ಸಿಕ್’ ಸಿನಿಮಾಗೆ ಒಂದೇ ದಿನದಲ್ಲಿ ಆಗಿರುವ ಟಿಕೆಟ್ ಬುಕಿಂಗ್ ಆಧಾರದ ಮೇಲೆ ಹೇಳುವುದಾದರೆ, ಮೊದಲ ದಿನ ಹಿಂದಿ ವರ್ಷನ್ನಿಂದಲೇ ಈ ಚಿತ್ರಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ. ಯಶ್ ಅವರಿಗೆ ಉತ್ತರ ಭಾರತದಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ.

‘ರಾಕಿಂಗ್ ಸ್ಟಾರ್’ ಯಶ್ (Yash) ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರವು ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಚಿತ್ರದ ಹಿಂದಿ ಡಬ್ ಆವೃತ್ತಿಯ ಅಡ್ವಾನ್ಸ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಶುಕ್ರವಾರ (ಆಗಸ್ಟ್ 21) ಬೆಳಿಗ್ಗೆ 8 ಗಂಟೆಗೆ ಬುಕಿಂಗ್ ಆರಂಭವಾದ 6 ಗಂಟೆಗಳ ಅವಧಿಯಲ್ಲೇ ಪ್ರಮುಖ ಮಲ್ಟಿಪ್ಲೆಕ್ಸ್ಗಳಾದ ಪಿವಿಆರ್-ಐನಾಕ್ಸ್ ಮತ್ತು ಸಿನಿಪೊಲಿಸ್‌ಗಳಲ್ಲಿ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.
ಭರ್ಜರಿ ಬಾಕ್ಸ್ ಆಫೀಸ್ ಲೆಕ್ಕಾಚಾರ:
‘ಟಾಕ್ಸಿಕ್’ ಚಿತ್ರದ ಈ ಅಭೂತಪೂರ್ವ ಟಿಕೆಟ್ ಸೇಲ್ಸ್ ನೋಡಿದರೆ, ಹಿಂದಿ ಆವೃತ್ತಿ ಒಂದರಲ್ಲೇ ಮೊದಲ ದಿನ 45 ಕೋಟಿಯಿಂದ 55 ಕೋಟಿ ರೂಪಾಯಿ ಗಳಿಸುವ ಲಕ್ಷಣಗಳು ಎದ್ದುಕಾಣುತ್ತಿವೆ. ಬಿಗ್ ಬಜೆಟ್ ಸಿನಿಮಾಗಳಾದ ‘ಧುರಂಧರ್ 2’ ಮತ್ತು ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಮಾದರಿಯಲ್ಲೇ ‘ಟಾಕ್ಸಿಕ್’ ಚಿತ್ರಕ್ಕೂ ಟಿಕೆಟ್ ದರ ನಿಗದಿಪಡಿಸಲಾಗಿದ್ದರೂ, ಅಭಿಮಾನಿಗಳ ಕ್ರೇಜ್ ಕಮ್ಮಿಯಾಗಿಲ್ಲ.
ಹಳೇ ದಾಖಲೆಗಳು ಉಡೀಸ್:
ಬುಕಿಂಗ್ ಆರಂಭವಾದ ಕೇವಲ 6 ಗಂಟೆಗಳಲ್ಲಿ ಟಿಕೆಟ್ ಮಾರಾಟದ ಲೆಕ್ಕಾಚಾರದಲ್ಲಿ ‘ಟಾಕ್ಸಿಕ್’ ಸಿನಿಮಾವು ‘ಅನಿಮಲ್’, ‘ಧುರಂಧರ್’, ‘ಟೈಗರ್ 3’ ಹಾಗೂ ‘ಸ್ಪೈಡರ್‌ಮ್ಯಾನ್’ ರೀತಿಯ ಬಿಗ್ ಓಪನರ್ ಸಿನಿಮಾಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಮಲ್ಟಿಪ್ಲೆಕ್ಸ್ ಮಾತ್ರವಲ್ಲದೆ ಸಿಂಗಲ್ ಸ್ಕ್ರೀನ್‌ಗಳಲ್ಲೂ ‘ಟಾಕ್ಸಿಕ್’ ಚಿತ್ರದ ಶೋಗಳು ಸೋಲ್ಡ್ ಔಟ್ ಆಗುತ್ತಿವೆ.
‘ಧುರಂಧರ್ 2’ ಮೀರಿಸುವುದು ಬಾಕಿ:
2026ರ ಸಾಲಿನಲ್ಲಿ ‘ಧುರಂಧರ್ 2’ ನಂತರ ಅತ್ಯಧಿಕ ಅಡ್ವಾನ್ಸ್ ಬುಕಿಂಗ್ ಕಂಡ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ‘ಧುರಂಧರ್ 2’ ಸೀಕ್ವೆಲ್ ಆಗಿದ್ದರೆ, ‘ಟಾಕ್ಸಿಕ್’ ಕನ್ನಡ ಮೂಲದ ಸ್ಟ್ಯಾಂಡ್ಅಲೋನ್ ಸಿನಿಮಾವಾಗಿದ್ದು, ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಮಟ್ಟದ ಹವಾ ಸೃಷ್ಟಿಸಿರುವುದು ಸ್ಯಾಂಡಲ್‌ವುಡ್ ಹಿರಿಮೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್; ಸಿನಿಮಾದ ಅವಧಿ 3 ಗಂಟೆ 14 ನಿಮಿಷ
‘ಟಾಕ್ಸಿಕ್’ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗುವುದಕ್ಕೂ ಮುನ್ನವೇ ಬುಕ್ ಮೈ ಶೋನಲ್ಲಿ 12 ಲಕ್ಷಕ್ಕೂ ಅಧಿಕ ಜನರು ಈ ಚಿತ್ರಕ್ಕೆ ಆಸಕ್ತಿ ತೋರಿಸಿದ್ದರು. ಅದಕ್ಕೆ ತಕ್ಕಂತೆಯೇ ವೇಗವಾಗಿ ಬುಕಿಂಗ್ ಆಗುತ್ತಿದೆ. ಸಿನಿಮಾದ ಇಂಗ್ಲಿಷ್ ವರ್ಷನ್ ಟ್ರೇಲರ್ ಬಿಡುಗಡೆ ಆದ ನಂತರ ವಿದೇಶದಲ್ಲೂ ಕ್ರೇಜ್ ಹೆಚ್ಚಾಗಿದೆ. ಮೊದಲ ದಿನ ಎಲ್ಲ ಭಾಷೆಯಿಂದ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




