ಮಾರುಕಟ್ಟೆಯ ದೃಷ್ಟಿಯಿಂದ ಕನ್ನಡ ಚಿತ್ರರಂಗಕ್ಕೆ (Kannada Film Industry) 2022ರ ವರ್ಷ ತುಂಬ ಮಹತ್ವವಾದದ್ದು. ಪ್ರತಿ ವರ್ಷದಂತೆ ಈ ಬಾರಿ ಕೂಡ ನೂರಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗಿವೆ. ಕೆಲವು ಸಿನಿಮಾಗಳು (Kannada Cinema) ಅಭೂತಪೂರ್ವ ಸಾಧನೆ ಮಾಡಿವೆ. ಪರಭಾಷಿಕರನ್ನು ಬೆರಗಾಗಿಸುವಂತಹ ಪ್ರಯತ್ನಗಳು ಚಂದನವನದಲ್ಲಿ ಆಗಿವೆ. ಚಂದನವನದ ಸಿನಿಮಾಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಭರವಸೆ ಮೂಡುವಂತಾಗಿದೆ. ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ (Kantara Movie), ‘777 ಚಾರ್ಲಿ’ ಮುಂತಾದ ಚಿತ್ರಗಳು ಮಾಡಿದ ಮೋಡಿಯನ್ನು ಮರೆಯಲು ಸಾಧ್ಯವಿಲ್ಲ. ಈ ಎಲ್ಲ ಸಾಧನೆಯ ಹಿಂದಿರುವ ಸೂತ್ರವೆಂದರೆ ಸ್ವಂತಿಕೆ ಮತ್ತು ಪರಿಶ್ರಮ. ಆ ಕಾರಣದಿಂದಲೇ ಕನ್ನಡ ಚಿತ್ರರಂಗಕ್ಕೆ ಇಂದು ಹೊಸ ಚಾರ್ಮ್ ಬಂದಿದೆ.
ರಿಮೇಕ್ ಸಿನಿಮಾಗಳನ್ನು ನೆಚ್ಚಿಕೊಳ್ಳುವ ಟ್ರೆಂಡ್ ತಗ್ಗಿದೆ. 2022ರಲ್ಲಿ ಸದ್ದು ಮಾಡಿದ ಎಲ್ಲ ಸಿನಿಮಾಗಳು ಸ್ವಮೇಕ್ ಎಂಬುದು ಗಮನಾರ್ಹ. ಬೇರೆ ಯಾವುದೇ ಭಾಷೆಯ ಚಿತ್ರರಂಗದಲ್ಲಿ ಹಿಟ್ ಆದ ಸಿನಿಮಾದ ಕಥೆಯನ್ನು ಕನ್ನಡಕ್ಕೆ ತಂದು ರಿಮೇಕ್ ಮಾಡಿದರೆ ಈ ಒಟಿಟಿ ಯುಗದಲ್ಲಿ ಗೆಲುವು ಸಿಗುವುದು ಕಷ್ಟಕರ. ಅದರ ಬದಲು ಸ್ವಂತ ಕಥೆಗಳಿಗೆ ಮಣೆ ಹಾಕಿದರೆ ಪ್ರೇಕ್ಷಕರು ಖಂಡಿತಾ ಜೈಕಾರ ಹಾಕುತ್ತಾರೆ ಎಂಬುದು 2022ರಲ್ಲಿ ಸಾಬೀತಾಗಿದೆ.
ಈ ವರ್ಷ ಸಿನಿಮಾ ಪ್ರೇಕ್ಷಕರು ಕನ್ನಡ ಚಿತ್ರಗಳಲ್ಲಿ ಸ್ವಂತಿಕೆಯನ್ನು ಇಷ್ಟಪಟ್ಟಿದ್ದಾರೆ. ಅದು ‘ಕೆಜಿಎಫ್ 2’ ಸಿನಿಮಾದಿಂದ ‘ಕಾಂತಾರ’ ಚಿತ್ರದವರೆಗೆ ಅನೇಕ ಸಿನಿಮಾಗಳಲ್ಲಿ ಹೈಲೈಟ್ ಆಗಿರುವ ಅಂಶ. ತುಂಬ ಫ್ರೆಶ್ ಎನಿಸುವಂತಹ ವಿಷಯವನ್ನು ಆಯ್ದುಕೊಂಡ ನಿರ್ದೇಶಕರಿಗೆ ಪ್ರೇಕ್ಷಕರಿಂದ ಶಹಬಾಷ್ಗಿರಿ ಸಿಕ್ಕಿದೆ. ‘777 ಚಾರ್ಲಿ’ ಚಿತ್ರದಲ್ಲೂ ಈ ವಿಷಯ ನಿಜವಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆಯನ್ನು ಹೇಳಿದರು ನಿರ್ದೇಶಕ ಕಿರಣ್ ರಾಜ್. ತುಳುನಾಡಿನ ಸ್ವಂತ ಕಥೆಯನ್ನು ಜಗತ್ತಿಗೆ ಪರಿಚಯಿಸಿದರು ರಿಷಬ್ ಶೆಟ್ಟಿ. ಸ್ವಂತಿಕೆಯನ್ನು ನಂಬಿದರೆ ಗೆಲುವು ಕೈ ಹಿಡಿಯುತ್ತದೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.
ಮೊದಲೆಲ್ಲ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆ ಮಂದಿಗೆ ಒಂದು ಬಗೆಯ ತಾತ್ಸಾರ ಇರುತ್ತಿತ್ತು. ಚೆನ್ನೈ, ಹೈದರಾಬಾದ್, ಮುಂಬೈ ಮುಂತಾದ ಕಡೆಗಳಲ್ಲಿ ನಮ್ಮ ಸಿನಿಮಾಗಳನ್ನು ಕೇಳುವವರೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಭರವಸೆ ಮೂಡಿಸುವಂತಹ ಕನ್ನಡದ ಸಿನಿಮಾಗಳನ್ನು ಹೊರರಾಜ್ಯದಲ್ಲಿ ರಿಲೀಸ್ ಮಾಡಲು ಅಲ್ಲಿನ ವಿತರಕರು ಮುಂದೆ ಬರುತ್ತಿದ್ದಾರೆ. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿರಿದಾಗಿದೆ.
ಇದನ್ನೂ ಓದಿ: Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್
ಹಲವು ದಶಕಗಳಿಂದಲೂ ಹಿಂದಿ ಚಿತ್ರರಂಗ ಶ್ರೀಮಂತವಾಗಿದೆ. ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆದಾಗ ಕರ್ನಾಟಕದಲ್ಲಿ ಕೂಡ ಕನ್ನಡದ ಚಿತ್ರಗಳು ಥಿಯೇಟರ್ ಸಿಗದೇ ಕಷ್ಟಪಡಬೇಕಾದ ಕಾಲ ಇತ್ತು. ಆದರೆ ಈಗ ಮುಂಬೈನಲ್ಲಿಯೇ ಹಿಂದಿ ಸಿನಿಮಾಗಳನ್ನು ಬದಿಗೊತ್ತಿ ಕನ್ನಡದ ಚಿತ್ರಗಳು ಆಳ್ವಿಕೆ ನಡೆಸುವಂತಾಗಿದೆ. ಕನ್ನಡದ ಸಿನಿಮಾಗಳ ಎದುರು ಪೈಪೋಟಿ ನೀಡಲು ಹಿಂದಿಯ ಸ್ಟಾರ್ ನಟರ ಚಿತ್ರಗಳು ಕೂಡ ಆಲೋಚನೆ ಮಾಡಬೇಕಾದ ವಾತಾವರಣ ನಿರ್ಮಾಣ ಆಗಿದೆ. ಈ ಬೆಳೆವಣಿಗೆ ಆಗಿರುವುದು 2022ರಲ್ಲಿ. ಹಾಗಾಗಿ ಈ ವರ್ಷವನ್ನು ಸುವರ್ಣ ಯುಗ ಎನ್ನಲೇಬೇಕು.
ಇದನ್ನೂ ಓದಿ: Kantara Movie: ‘ಕಾಂತಾರ’ ಎಫೆಕ್ಟ್; ರಿಷಬ್ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್ ಕಪೂರ್
ಭರವಸೆ ಮೂಡಿಸುವುದು ಎಷ್ಟು ಕಷ್ಟವೋ ಆ ಭರವಸೆಯನ್ನು ಉಳಿಸಿಕೊಂಡು ಹೋಗುವುದು ಇನ್ನೂ ಕಷ್ಟ. ಕನ್ನಡ ಸಿನಿಮಾ ಎಂದರೆ ಇಡೀ ದೇಶದ ಜನರಿಗೆ ಭರವಸೆ ಮೂಡಿದೆ. ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುವ ಸಿನಿಮಾಗಳಿಗಾಗಿ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಕಾತುರ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯ ಮಟ್ಟವನ್ನು ತಲುಪುವ ರೀತಿಯಲ್ಲಿ ಸಿನಿಮಾಗಳನ್ನು ಕಟ್ಟಿಕೊಡುವ ಸವಾಲು ಕನ್ನಡ ಚಿತ್ರರಂಗದ ಮುಂದಿದೆ.
ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಕಲೆಕ್ಷನ್ ಆಗುತ್ತದೆ ಎಂಬ ಭ್ರಮೆ ಚಿತ್ರರಂಗದಲ್ಲಿದೆ. ಆದರೆ ಆ ಭ್ರಮೆಯನ್ನು ‘ಕಾಂತಾರ’ ಚಿತ್ರ ತೊಡೆದುಹಾಕಿದೆ. ಕೆಲವೇ ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಸಿನಿಮಾ ಎಲ್ಲ ಭಾಷೆಗಳಿಂದ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 400 ಕೋಟಿ ರೂಪಾಯಿ. ಸಾಧಾರಣ ಬಜೆಟ್ನಲ್ಲಿ ಉತ್ತಮ ಸಿನಿಮಾ ಮಾಡಿ ಜಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರ ಇದು.
ಇದನ್ನೂ ಓದಿ: Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್ ನೋಡಿ ರೋಮಾಂಚನ ಆಯ್ತು’; ರಿಷಬ್ ಶೆಟ್ಟಿ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ
ಜಗತ್ತಿನಾದ್ಯಂತ ಐಎಂಡಿಬಿ ವೆಬ್ವೈಟ್ ಖ್ಯಾತಿ ಹೊಂದಿದೆ. 2022ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಭಾರತದ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಪ್ರಕಟ ಮಾಡಿದೆ. ಇದರಲ್ಲಿ ಕನ್ನಡದ ಮೂರು ಸಿನಿಮಾಗಳಿವೆ ಎಂಬುದು ಹೆಮ್ಮೆಯ ವಿಷಯ. ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ ಮತ್ತು ‘777 ಚಾರ್ಲಿ’ ಸಿನಿಮಾ ಈ ಸಾಧನೆ ಮಾಡಿವೆ. ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿನಿಮಾಗಳನ್ನು ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೊಂದು ಪ್ರಮುಖ ಸಾಕ್ಷಿ.
ಸ್ಟಾರ್ ನಟರ ಸಿನಿಮಾಗಳಿಗೆ ಪರಭಾಷೆಯಿಂದ ನಾಯಕಿಯರನ್ನು ಕರೆತರುವ ಟ್ರೆಂಡ್ ಈಗ ಬದಲಾಗಿದೆ. ಅಪ್ಪಟ ಕನ್ನಡದ ಹುಡುಗಿಯರೇ ಈ ವರ್ಷ ಹೆಚ್ಚು ಗಮನ ಸೆಳೆದಿದ್ದಾರೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ‘ಕಾಂತಾರ’ ಚಿತ್ರದಲ್ಲಿ ಸಪ್ತಮಿ ಗೌಡ, ‘777 ಚಾರ್ಲಿ’ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ‘ವೇದ’ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್ ಹಾಗೂ ಅದಿತಿ ಸಾಗರ್.. ಹೀಗೆ ಅನೇಕ ನಟಿಯರು ಜನಮೆಚ್ಚುಗೆ ಪಡೆದಿದ್ದಾರೆ. ಪರಭಾಷೆಯಿಂದಲೂ ಕನ್ನಡದ ನಟಿಯರಿಗೆ ಒಳ್ಳೊಳ್ಳೆಯ ಅವಕಾಶಗಳು ಬರಲಾರಂಭಿಸಿವೆ.
ಸಿನಿಮಾವನ್ನು ತುಂಬ ಶ್ರದ್ಧೆಯಿಂದ ಮಾಡುವವರಿಗೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬೆಂಬಲವಾಗಿ ನಿಂತಿದೆ. ಪ್ರಶಾಂತ್ ನೀಲ್ ಅವರಂತಹ ನಿರ್ದೇಶಕನ ಮೇಲೆ ನಂಬಿಕೆ ಇಟ್ಟು ‘ಕೆಜಿಎಫ್’ ಸಿನಿಮಾ ನಿರ್ಮಿಸಿದ ಈ ಸಂಸ್ಥೆ ಈಗ ಅದೇ ರೀತಿಯ ಅನೇಕ ನಿರ್ದೇಶಕರಿಗೆ ವೇದಿಕೆ ಒದಗಿಸಿಕೊಡುತ್ತಿದೆ. ‘ಕಾಂತಾರ’ ಚಿತ್ರ ಮೂಡಿಬಂದಿದ್ದು ಕೂಡ ಇದೇ ಬ್ಯಾನರ್ನಲ್ಲಿ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳನ್ನೂ ಈ ಸಂಸ್ಥೆ ನಿರ್ಮಿಸುತ್ತಿದೆ. ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ಬಲಪಡಿಸಿಕೊಳ್ಳುವಲ್ಲಿ ಕರುನಾಡಿನ ಈ ನಿರ್ಮಾಣ ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ನಂತರದ ದಿನಗಳಲ್ಲಿ ಪರಭಾಷೆಯ ಸಿನಿಮಾಗಳಲ್ಲಿ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರಿಗೆ ಅವಕಾಶ ಸಿಗಲು ಇದರಿಂದ ಅನುಕೂಲ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.