ಬಹುಭಾಷಾ ನಟಿ ಭಾನುಪ್ರಿಯಾ (Bhanupriya) ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅವರು ಒಂದು ಕಾಲದ ಬಹುಬೇಡಿಕೆಯ ಹೀರೋಯಿನ್ ಆಗಿದ್ದರು. ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಿ ಫೇಮಸ್ ಆಗಿದ್ದರು. ಕನ್ನಡದ ‘ಸಿಂಹಾದ್ರಿಯ ಸಿಂಹ’, ‘ರಸಿಕ’, ‘ದೇವರ ಮಗ’, ‘ಕದಂಬ’ ಮುಂತಾದ ಸಿನಿಮಾಗಳಲ್ಲಿ ಭಾನುಪ್ರಿಯಾ ನಟಿಸಿದ್ದಾರೆ. ಆದರೆ ಈಗ ಅವರ ಬದುಕಿನ ಬಗ್ಗೆ ಕೆಲವು ಅಚ್ಚರಿಯ ವಿಚಾರಗಳ ಬಹಿರಂಗ ಆಗಿವೆ. ಭಾನುಪ್ರಿಯಾ ಅವರು ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮೆಮೊರಿ ಲಾಸ್ (Memory Loss) ಆಗುತ್ತಿರುವುದರಿಂದ ಅವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಗಂತ ಇದು ಗಾಸಿಪ್ ಅಲ್ಲ. ಇತ್ತೀಚೆಗೆ ‘ತೆಲುಗು ಒನ್’ ನಡೆಸಿದ ಸಂದರ್ಶನದಲ್ಲಿ (Bhanupriya Interview) ಸ್ವತಃ ಭಾನುಪ್ರಿಯಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಒಂದು ಕಾಲದಲ್ಲಿ ಹೀರೋಯಿನ್ ಆಗಿದ್ದ ಭಾನುಪ್ರಿಯಾ ಅವರು ನಂತರದ ದಿನಗಳಲ್ಲಿ ಪೋಷಕ ಪಾತ್ರಗಳನ್ನು ಒಪ್ಪಿಕೊಂಡರು. ಆಗಲೂ ಅವರು ಬ್ಯುಸಿ ನಟಿಯಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚಾಗಿ ಯಾವುದೇ ಸಿನಿಮಾಗಳಿಗೂ ಸಹಿ ಮಾಡುತ್ತಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಅವರು ತಿಳಿಸಿದ್ದಾರೆ. ನೆನಪಿನ ಶಕ್ತಿ ಕುಂದುತ್ತಿರುವ ಕಾರಣದಿಂದ ಡೈಲಾಗ್ಗಳನ್ನು ಹೇಳಲು ಅವರಿಗೆ ಆಗುತ್ತಿಲ್ಲ. ಇದರಿಂದ ಸಿನಿಮಾದಲ್ಲಿ ನಟಿಸುವುದು ಭಾನುಪ್ರಿಯಾ ಅವರಿಗೆ ಕಷ್ಟ ಆಗುತ್ತಿದೆ.
ಭಾನುಪ್ರಿಯಾ ಅವರು ಅತ್ಯುತ್ತಮ ಡ್ಯಾನ್ಸರ್. 80ರ ದಶಕದ ಸಿನಿಮಾಗಳಲ್ಲಿ ಅವರು ನೃತ್ಯದ ಮೂಲಕ ಗಮನ ಸೆಳೆದಿದ್ದರು. ಶಾಕಿಂಗ್ ವಿಚಾರ ಏನೆಂದರೆ, ಈಗ ಅವರು ಡ್ಯಾನ್ಸ್ ಸ್ಟೆಪ್ಗಳನ್ನು ಕೂಡ ಮರೆಯುತ್ತಿದ್ದಾರೆ. ಮನೆಯಲ್ಲಿಯೂ ನೃತ್ಯಾಭ್ಯಾಸ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ವಿಚಾರ ಕೇಳಿ ಭಾನುಪ್ರಿಯಾ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ಇದನ್ನೂ ಓದಿ: ಗ್ಲಾಮರ್ ಪಾತ್ರ ಮಾಡದೇ ಮನಗೆದ್ದ ನಟಿಯರು
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾನುಪ್ರಿಯಾ ಅವರು ಡ್ಯಾನ್ಸ್ ಸ್ಕೂಲ್ ಆರಂಭ ಮಾಡಬೇಕಿತ್ತು. ಆದರೆ ಮರೆವಿನ ಕಾಯಿಲೆ ಶುರು ಆಗಿರುವುದರಿಂದ ನೃತ್ಯ ಪಾಠಶಾಲೆ ನಡೆಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಯಾವುದೇ ಖಿನ್ನತೆಯ ಕಾರಣಕ್ಕೆ ಅವರಿಗೆ ಮೆಮೊರಿ ಲಾಸ್ ಆಗಿಲ್ಲ. ಬದಲಿಗೆ ಅನಾರೋಗ್ಯವೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಸದ್ಯ ಅವರು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ
1998ರಲ್ಲಿ ಆದರ್ಶ್ ಕೌಶಲ್ ಜೊತೆ ಭಾನುಪ್ರಿಯಾ ಅವರ ಮದುವೆ ನಡೆಯಿತು. 2018ರಲ್ಲಿ ಹೃದಯಾಘಾತದಿಂದ ಆದರ್ಶ್ ಕೌಶಲ್ ನಿಧನರಾದರು. 2005ರಲ್ಲಿಯೇ ಅವರು ವಿಚ್ಛೇದನ ಪಡೆದಿದ್ದರು ಎಂಬ ಸುದ್ದಿ ಹರಡಿತ್ತು. ಆ ಬಗ್ಗೆ ಭಾನುಪ್ರಿಯಾ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ‘ನಾವು ಡಿವೋರ್ಸ್ ಪಡೆದಿರಲಿಲ್ಲ. ಕೆಲಸದ ಕಾರಣಕ್ಕೆ ಬೇರೆ ಬೇರೆ ಕಡೆ ವಾಸಿಸುತ್ತಿದ್ದೆವು’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.