ಕನ್ನಡ ಚಿತ್ರ ರಂಗಕ್ಕೆ ಒಂದಾದಮೇಲೆ ಒಂದರಂತೆ ಕಹಿ ಸುದ್ದಿಗಳು ಬರುತ್ತಲೇ ಇವೆ. ಈಗ ಯೋಗರಾಜ್ ಭಟ್ (Yogaraj Bhat) ಅವರ ಮಾವ ಹಾಗೂ ಸ್ಯಾಂಡಲ್ವುಡ್ನಲ್ಲಿ ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಸತ್ಯ ನಾರಾಯಣ್ (Sathya Narayan) ಅವರು ಇಂದು (ಜೂನ್ 3) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ‘ಟಗರು’ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಯೋಗರಾಜ್ ಭಟ್ ಅವರು ರೇಣುಕಾ ಅವರನ್ನು ಮದುವೆ ಆಗಿದ್ದಾರೆ. ರೇಣುಕಾ ಅವರು ಸತ್ಯ ನಾರಾಯಣ್ ಅವರ ಮಗಳು. ಮಾವನನ್ನು ಕಳೆದುಕೊಂಡು ಯೋಗರಾಜ್ ಭಟ್ ಅವರು ದುಃಖಕ್ಕೆ ಒಳಗಾಗಿದ್ದಾರೆ. ಮುಗುಳು ನಗೆ’, ‘ಪಂಚತಂತ್ರ’, ‘Act 1978’ ಮೊದಲಾದ ಸಿನಿಮಾಗಳಲ್ಲಿ ಸತ್ಯ ನಾರಾಯಣ್ ನಟಿಸಿದ್ದರು.
ಸತ್ಯ ನಾರಾಯಣ್ ಸಾವಿಗೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಅಣ್ಣ, ನಿಮ್ಮನ್ನ ನೆನಪಿಸಿಕೊಂಡರೆ ನಿಮ್ಮ ಆ ನಿಷ್ಕಲ್ಮಶ ನಗು ನೆನಪಿಗೇ ಬರುತ್ತದೆ. ಆ ನಗುವನ್ನು ಹೇಗೆ ಮರೆಯಲಿ. ನಿಮ್ಮ ಆತ್ಮಕ್ಕೆ ಆ ದೇವರು ಶಾಂತಿಯನ್ನು ಕರುಣಿಸಲಿ ಅಣ್ಣ’ ಎಂದು ನಟ ಧರ್ಮಣ್ಣ ಕಡೂರ್ ಅವರು ಪೋಸ್ಟ್ ಮಾಡಿದ್ದಾರೆ.
‘ಟಗರು’ ಚಿತ್ರದಲ್ಲಿ ಶಿವರಾಜ್ಕುಮಾರ್ ಜತೆಗೆ ಸತ್ಯ ನಾರಾಯಣ್ ನಟಿಸಿದ್ದರು. ಕಾನ್ಸ್ಟೇಬಲ್ ಸತ್ಯಣ್ಣ ಆಗಿ ಅವರು ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈಗ ಅವರು ಇಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.
ಯೋಗರಾಜ್ ಭಟ್ ಅವರ ಮನೆಯಲ್ಲಿ ಸತ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ರುದ್ರಭೂಮಿಯಲ್ಲಿ ಅಂತಿಮ ಇಂದೇ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
‘ಸತ್ಯ ಉಮ್ಮತ್ತಾಲ್ ಅಂಕಲ್. ನಮ್ಮ ಅಪ್ಪನೂ ನಂಗೆ ನಾಲ್ಕು ಏಟು ಹೊಡೆದಿಲ್ಲ. ಸತ್ಯ ಅಂಕಲ್ ನನಗೆ ಹೊಡೆದ ಏಟುಗಳಿಗೆ ಲೆಕ್ಕವಿಲ್ಲ. ನಾಲ್ಕೈದು ದಿನಗಳ ಹಿಂದೆ ಗೆಳೆಯರೊಬ್ಬರ ಬಳಿ ಹೇಳಿದ್ರಂತೆ, ಆ ಬಡ್ಡಿಮಗ ಇನ್ನೊಂದು ಸಿನಿಮಾ ಮಾಡಿದ್ರೆ ಅದನ್ನ ನೋಡ್ಕೊಂಡು ಸಾಯ್ತೀನಿ ಅಂತ. ಅದೇ ಮಾತನ್ನು ನನ್ನ ಎದುರು ಹೇಳಿದ್ರೆ ಒಂದು ಜಗಳ ಅಂತೂ ಆಗ್ತಾ ಇತ್ತು. ಅವರು ನನ್ನ, ನಾನು ಅವರನ್ನು ಪರಸ್ಪರ ಬೈದಾಡಿಕೊಂಡಿದ್ದೇ ಹೆಚ್ಚು. ಅವರನ್ನು ಅಂಕಲ್ ಅಂತ ಕರೀತಿದ್ದದಷ್ಟೇ, ತಂದೆ ಸಮಾನ ವ್ಯಕ್ತಿ. ಅದೊಂದೇ ಸಲುಗೆ ನಮ್ಮ ನಡುವೆ ಅದೆಷ್ಟೋ ಪ್ರೀತಿಯ ಜಗಳಗಳಿಗೆ ಕಾರಣವಾಗಿತ್ತು. ಇಂದು ಸತ್ಯ ಅಂಕಲ್ ನಮ್ಮನ್ನು ಅಗಲಿದರೂ, ನನ್ನನ್ನೂ ಸೇರಿ ನಮ್ಮ ತಂಡದ ಅನೇಕರ ಮನಸ್ಸಲ್ಲಿ ಕೊನೆವರೆಗೆ ಉಳಿವ ಜೀವಾತ್ಮಗಳಲ್ಲೊಬ್ಬರು ಅವರು’ ಎಂದು ವೀರೇಂದ್ರ ಮಲ್ಲಣ್ಣ ಅವರು ಬರೆದುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:37 pm, Fri, 3 June 22