ಎಸ್​ಪಿಬಿ ಜನ್ಮದಿನ; ಒಂದೇ ದಿನ 21 ಹಾಡುಗಳನ್ನು ರೆಕಾರ್ಡ್​ ಮಾಡಿ ದಾಖಲೆ ಮಾಡಿದ್ದ ಗಾಯಕ

TV9 Digital Desk

| Edited By: ಮದನ್​ ಕುಮಾರ್​

Updated on: Jun 04, 2022 | 7:35 AM

SP Balasubrahmanyam Birth Anniversary:1966ರಲ್ಲಿ ಎಸ್​ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಕಾಲಿಟ್ಟರು.

ಎಸ್​ಪಿಬಿ ಜನ್ಮದಿನ; ಒಂದೇ ದಿನ 21 ಹಾಡುಗಳನ್ನು ರೆಕಾರ್ಡ್​ ಮಾಡಿ ದಾಖಲೆ ಮಾಡಿದ್ದ ಗಾಯಕ
ಎಸ್​​ಪಿಬಿ

ಭಾರತ ಚಿತ್ರರಂಗ ಕಂಡ ಮಹಾನ್​ ಗಾಯಕರಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಮ್ (S. P. Balasubrahmanyam)​ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂದು (ಜೂನ್ 4) ಅವರ ಜನ್ಮದಿನ. ಅವರು ಬದುಕಿದ್ದರೆ ಇಂದು 76ನೇ ವರ್ಷದ ಹುಟ್ಟುಹಬ್ಬ  ಆಚರಿಸಿಕೊಳ್ಳುತ್ತಿದ್ದರು. ಈಗ ಅವರಿಲ್ಲದೆ ಎರಡನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳು ಹರಿದುಬಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮಿಷ್ಟದ ಗಾಯಕನನ್ನು ನೆನೆದಿದ್ದಾರೆ.

1946ರಲ್ಲಿ ಜೂನ್​ 4ರಂದು ಮದ್ರಾಸ್​ನಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಮ್​ ಜನಿಸಿದರು. ಇಂಜಿನಿಯರ್​ ಆಗಬೇಕೆಂದುಕೊಂಡಿದ್ದ ಅವರು, ಸಂಗೀತದ ಮೇಲೂ ಅಪಾರ ಆಸಕ್ತಿ ಹೊಂದಿದ್ದರು. 1966ರಲ್ಲಿ ಎಸ್​ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಕಾಲಿಟ್ಟರು.

ಎಸ್​ಪಿಬಿಗೆ ಹಿಟ್​ ಸಿಕ್ಕಿದ್ದು 1969ರಲ್ಲಿ. ಹಿರಿಯ ನಟ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ತಮ್ಮ ಅಡಿಮೈಪೆನ್ ಸಿನಿಮಾದಲ್ಲಿ ಎಸ್​ಪಿಬಿ ಹಾಡಬೇಕು ಎಂದು ಇಚ್ಛಿಸಿದ್ದರು. ಈ ಚಿತ್ರದ ‘ಆಯಿರಾಮ್​ ನಿಲವೆ.. ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ನಂತರ ಎಸ್​ಪಿಬಿ ಹಿಂದಿರುಗಿ ನೋಡಲೇ ಇಲ್ಲ. ಎಸ್​.ಪಿ. ಬಾಲಸುಬ್ರಹ್ಮಣ್ಯಮ್​ ಅವರು ಕನ್ನಡ, ತಮಿಳು ತೆಲುಗು, ಹಿಂದಿ ಸೇರಿ 16 ಭಾಷೆಗಳಲ್ಲಿ 40 ಸಾವಿರ ಹಾಡನ್ನು ಹಾಡಿದ್ದಾರೆ.

ಇದನ್ನೂ ಓದಿ

ಹಲವು ಭಾಷೆಗಳನ್ನು ಮಾತನಾಡುವುದನ್ನು ಕಷ್ಟಪಟ್ಟಾದರೂ ಕಲಿಯಬಹುದು. ಆದರೆ, ಬೇರೆ ಭಾಷೆಯ ಸೊಗಡನ್ನು ಅರ್ಥ ಮಾಡಿಕೊಂಡು ಹಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಎಸ್​ಪಿಬಿಗೆ ಅದು ನೀರು ಕುಡಿದಷ್ಟೇ ಸುಲಭದ ಮಾತಾಗಿತ್ತು. ಅವರು 16 ಭಾಷೆಗಳಲ್ಲಿ ಹಾಡಿ ಭೇಷ್​ ಎನಿಸಿಕೊಂಡರು.

ಇದನ್ನೂ ಓದಿ:  ಎಸ್​ಪಿಬಿ ಮಗ ಚರಣ್​ಗೆ ನನ್ನ ಕಂಡರೆ ಅಸೂಯೆ; ರಾಜೇಶ್​ ಕೃಷ್ಣನ್​

ಇನ್ನು, ಎಸ್​ಪಿಬಿ ಹೆಸರಲ್ಲಿ ಹಲವು ದಾಖಲೆ ಕೂಡ ಇವೆ. ಅವರು ಒಂದೇ ದಿನ 21 ಕನ್ನಡ ಹಾಡುಗಳನ್ನು ರೆಕಾರ್ಡ್​ ಮಾಡಿ ದಾಖಲೆ ಮಾಡಿದ್ದರು. ಇಲ್ಲಿಯವರೆಗೆ ಈ ದಾಖಲೆ ಮುರಿಯೋಕೆ ಯಾವ ಗಾಯಕನಿಂದಲೂ ಸಾಧ್ಯವಾಗಿಲ್ಲ. ಎಸ್​ಪಿಬಿ ಅವರಿಗೆ ಆರು ಬಾರಿ ರಾಷ್ಟ್ರ ಪ್ರಶಸ್ತಿಗಳು ಲಭಿಸಿದೆ.

ಎಸ್​ಪಿಬಿ ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಸಂಗೀತ ಪ್ರೇಮಿಗಳ ಹೃದಯದಲ್ಲಿ ಸುಮಧುರ ಗೀತೆಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಹಾಡುಗಳು ಇಂದಿಗೂ ಕೇಳುಗರ ಕಿವಿಯಲ್ಲಿ ಗುನುಗುತ್ತಿವೆ. ಅವರನ್ನು ಇಂದು ಹಾಡುಗಳ ಮೂಲಕ ಎಲ್ಲರೂ ನೆನೆಯುತ್ತಿದ್ದಾರೆ. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada