ಮಗನ ಹುಟ್ಟುಹಬ್ಬದಂದು ಅಪ್ಪಾಜಿ, ಅಪ್ಪು ಬಗ್ಗೆ ಹೇಳಿದ್ದ ಮಾತು ನೆನಪಿಸಿಕೊಂಡ ರಾಘಣ್ಣ

|

Updated on: Apr 23, 2023 | 8:55 PM

Raghavendra Rajkumar: ಪುತ್ರ ಯುವ ರಾಜ್​ಕುಮಾರ್ ಹುಟ್ಟುಹಬ್ಬದಂದು ಡಾ ರಾಜ್​ಕುಮಾರ್ ಹಾಗೂ ಸಹೋದರ ಪುನೀತ್ ರಾಜ್​ಕುಮಾರ್ ಅವರನ್ನು ರಾಘಣ್ಣ ನೆನಪು ಮಾಡಿಕೊಂಡಿದ್ದಾರೆ.

ಮಗನ ಹುಟ್ಟುಹಬ್ಬದಂದು ಅಪ್ಪಾಜಿ, ಅಪ್ಪು ಬಗ್ಗೆ ಹೇಳಿದ್ದ ಮಾತು ನೆನಪಿಸಿಕೊಂಡ ರಾಘಣ್ಣ
ಯುವ ರಾಜ್​ಕುಮಾರ್
Follow us on

ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಪುತ್ರ ಯುವ ರಾಜ್​ಕುಮಾರ್ (Yuva Rajkumar) ಹುಟ್ಟುಹಬ್ಬ ಇಂದು (ಏಪ್ರಿಲ್ 23) ಅದ್ಧೂರಿಯಾಗಿ ನೆರವೇರಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸದಾಶಿವನಗರದ ರಾಘಣ್ಣನವರು ನವರ ಮನೆಯ ಬಳಿ ನೆರೆದು ಭವಿಷ್ಯದ ಸ್ಟಾರ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಯುವ ರಾಜ್​ಕುಮಾರ್ ನಟನೆಯ ಒಂದೂ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ ಆದರೆ ಈಗಲೇ ಸ್ಟಾರ್ ಯುವನಟನಾಗಿ ಮಿಂಚುತ್ತಿದ್ದಾರೆ ಯುವ ರಾಜ್​ಕುಮಾರ್.

ಮಗನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುವ ವೇಳೆ ಹಾಜರಿದ್ದ ನಟ ರಾಘವೇಂದ್ರ ರಾಜ್​ಕುಮಾರ್, ಮಗನಿಗೆ ಕೇಕ್ ತಿನ್ನಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಂದೆ ಅಪ್ಪು ಹುಟ್ಟುಹಬ್ಬದಂದು ಅಪ್ಪಾಜಿ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡರು.

ಅಪ್ಪು ಸಿನಿಮಾ ಆಗಷ್ಟೆ ಬಿಡುಗಡೆ ಆಗಿತ್ತು. ಆಗ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಇದೇ ರೀತಿ ಬಹಳ ಜೋರಾಗಿ ಆಚರಣೆ ಮಾಡಿದ್ದರು. ಆಗ ಅಪ್ಪಾಜಿಯವರು ನನ್ನ ಅಮ್ಮನವರನ್ನು ಕರೆದು, ನೋಡು, ಚಿಕ್ಕೆಜಮಾನ್ರು ಹೇಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ, ನಮಗೆಲ್ಲ ಈ ಭಾಗ್ಯ ಇರಲಿಲ್ಲ ಎಂದರು. ಆಗ ಅಮ್ಮನವರು ನೀವೆಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಿರಿ ಎಂದು ಹೇಳಿದ್ದರು. ಎಲ್ಲವೂ ಅಭಿಮಾನಿಗಳು ಮಾಡುತ್ತಾ ಬಂದಿರುವ ಹಬ್ಬಗಳು ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು ರಾಘವೇಂದ್ರ ರಾಜ್​ಕುಮಾರ್.

ಮಗನ ಹುಟ್ಟುಹಬ್ಬವನ್ನು ಹೀಗೆ ಅದ್ಧೂರಿಯಾಗಿ ಆಚರಿಸಿದರೆ ಯಾವ ತಂದೆಗೆ ತಾನೆ ಖುಷಿ ಆಗದೇ ಇರುತ್ತದೆ. ನನಗೂ ಬಹಳ ಖುಷಿಯಾಗಿದೆ. ತನ್ನ ತಮ್ಮ ಅಪ್ಪುವಿನ ಆಶೀರ್ವಾದದಿಂದಲೇ ಇದೆಲ್ಲ ಆಗುತ್ತಿದೆ ಎಂಬುದು ನನ್ನ ನಂಬಿಕೆ. ಅಭಿಮಾನಿಗಳು ನಿಜಕ್ಕೂ ದೇವರುಗಳು, ತಮ್ಮ ಮನೆಯಲ್ಲಿ ಏನು ಕಷ್ಟವಿದೆಯೋ ಏನೋ, ಮನೆಯಲ್ಲಿ ಇಲ್ಲದೆ ಇಲ್ಲಿಗೆ ಬಂದು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಅವರಿಗೆಲ್ಲ ಒಳ್ಳೆಯದಾಗಲಿ ಎಂದರು ರಾಘಣ್ಣ.

ಇದನ್ನೂ ಓದಿ:Yuva Rajkumar: ಅಭಿಮಾನಿಗಳ ಜತೆ ಯುವ ರಾಜ್​ಕುಮಾರ್​ ಹುಟ್ಟುಹಬ್ಬ ಆಚರಣೆ; ಹೊಸ ಪೋಸ್ಟರ್​ ಹಂಚಿಕೊಂಡ ‘ಹೊಂಬಾಳೆ’

ಇವತ್ತು ಅವನ ಹುಟ್ಟುಹಬ್ಬ ಜೊತೆಗೆ, ಸಿನಿಮಾ ರಂಗದಲ್ಲಿಯೂ ಅವನು ಈಗಿನ್ನೂ ಹುಟ್ಟುತ್ತಿದ್ದಾನೆ ಅವನ ಮೇಲೆ ಎಲ್ಲರ ಆಶೀರ್ವಾದವಿರಲಿ. ಅವನ ಬೇಲೆ ಒತ್ತಡ ಹೇರಬೇಡಿ ಆದರೆ ಹಾರೈಸಿ, ಆಶೀರ್ವಾದ ಮಾಡಿ ಅವನು ಚೆನ್ನಾಗಿಯೇ ಮಾಡುತ್ತಾನೆ ಒತ್ತಡ ಬೇಡ ಆರಾಮವಾಗಿ ಕೆಲಸ ಮಾಡಲಿ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್.

ಯುವ ರಾಜ್​ಕುಮಾರ್ ಪ್ರಸ್ತುತ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾಕ್ಕೆ ಯುವ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದು, ಸಂತೋಶ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು ಈವರೆಗೆ ಎಂಟು ದಿನಗಳ ಚಿತ್ರೀಕರಣ ಮುಗಿದಿದೆ. ಇಂದು ಚಿತ್ರೀಕರಣಕ್ಕೆ ಬ್ರೇಕ್ ನೀಡಿ ಯುವ ಚಿತ್ರತಂಡ ಸಹ ಯುವ ರಾಜ್​ಕುಮಾರ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ